Advertisement

ಧೋ ಧೋ ಮಳೆಯಲ್ಲಿ ದೇವರಂತೆ ಬಂದರು

12:30 AM Jan 01, 2019 | |

ಎರಡು ವರ್ಷದ ಹಿಂದೆ ನಡೆದ ಘಟನೆ. ಮಳೆಗಾಲದ ಒಂದು ದಿನ. ಎಡಬಿಡದೆ ಸುರಿಯುವ ಮಳೆ. ಒಮ್ಮೆ ಜೋರಾಗಿ, ಮತ್ತೂಮ್ಮೆ ಜಿಟಿಜಿಟಿಯಾಗಿ. ಸ್ನಾತಕೋತ್ತರ ಪದವಿ ಅಡ್ಮಿಷನ್‌ಗಾಗಿ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹೋಗಬೇಕಿತ್ತು. ಅಂದು ಬೆಳಗ್ಗೆ ಏಳರ ಬಸ್ಸಿಗೆ ವಿಜಯಪುರದಿಂದ ಬೆಳಗಾವಿಗೆ, ನಾನು ಹಾಗೂ ಅಪ್ಪ ಪ್ರಯಾಣ ಬೆಳೆಸಿದ್ವಿ. ಮಳೆ ಬಿಡುವು ಕೊಡದೆ ಸುರಿಯುತ್ತಲೇ ಇತ್ತು. ಬೆಳಗಾವಿಯಿಂದ 20 ಕಿ.ಮೀ. ದೂರವಿರುವ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕ್ರಾಸ್‌ನಲ್ಲಿ ಇಳಿಯುವಾಗ, ಮಳೆ ನಿಂತಿತ್ತು. ಬಸ್‌ ನಿಲ್ದಾಣದಿಂದ, ಕ್ಯಾಂಪಸ್‌ಗೆ ಹೋಗಲು ವಾಹನ ವ್ಯವಸ್ಥೆ ಸರಿಯಾಗಿ ಇರಲಿಲ್ಲ. ಕಾಯುತ್ತಾ ನಿಂತರೆ ಅಡ್ಮಿಷನ್‌ಗೆ ತಡವಾಗುತ್ತೆ , ವಾಪಸ್‌ ವಿಜಯಪುರಕ್ಕೆ ಹೋಗಲೂ ತಡವಾಗುತ್ತದೆ ಎಂದು ಇಬ್ಬರೂ ನಡೆದುಕೊಂಡೇ ಹೊರಟೆವು. ಈ ಸಂದರ್ಭಕ್ಕಾಗಿ ಕಾಯುತ್ತಿತ್ತೇನೋ ಎನ್ನುವಂತೆ, ಮಳೆ ಮತ್ತೆ ಸುರಿಯತೊಡಗಿತು. ನಮ್ಮ ಹತ್ರ ಛತ್ರಿಯಾಗಲಿ, ರೇನ್‌ಕೋಟ್‌ ಆಗಲಿ ಇರಲಿಲ್ಲ. 

Advertisement

ಅಸಲಿಗೆ, ಬೆಳಗಾವಿಯಿಂದ 20 ಕಿ.ಮೀ. ದೂರದಲ್ಲಿ ಯುನಿವರ್ಸಿಟಿ ಇದೆ ಅಂತ ಗೊತ್ತಿತ್ತೇ ಹೊರತು, ವಿ.ವಿ.ಕ್ರಾಸ್‌ನಿಂದ ಕ್ಯಾಂಪಸ್‌ಗೆ ನಾಲ್ಕೈದು ಕಿ.ಮೀ ದೂರ ಇದೆಯೆಂದು, ಬಸ್‌ ಕಂಡಕ್ಟರ್‌ ಹೇಳಿದಾಗಲೇ ಗೊತ್ತಾಗಿದ್ದು. ಕ್ಯಾಂಪಸ್‌ವರೆಗೂ ಬಸ್ಸುಗಳು ಹೋಗುತ್ತವೆ ಎಂದು ತಿಳಿದು ಛತ್ರಿ ತಂದಿರಲಿಲ್ಲ. ಒಂದೆಡೆ ಸುರಿಯುವ ಮಳೆ, ಇನ್ನೊಂದು ಕಡೆ ಓಡುತ್ತಿರುವ ಸಮಯ. ಬಟ್ಟೆ ತೋಯ್ದರೂ ಪರವಾಗಿಲ್ಲ ಎಂದು, ನೆನಯುತ್ತಲೇ ನಾನೂ, ಅಪ್ಪನೂ ದಾಪುಗಾಲಿಟ್ಟು ನಡೆಯತೊಡಗಿದೆವು. ಸ್ವಲ್ಪ ದೂರ ನಡೆದಿದ್ದೆವೇನೋ, ನಮಗಾಗಿಯೇ ಬಂದಂತೆ ಓಮ್ನಿಯೊಂದು ನಮ್ಮ ಬಳಿ ಬಂತು. ಅವರೂ ಅಡ್ಮಿಷನ್‌ಗೆ ಬಂದವರಿರಬೇಕು. “ಕ್ಯಾಂಪಸ್‌ ಕಡೆಗಾ? ಬನ್ನಿ, ನಾವೂ ಅಲ್ಲಿಗೇ ಹೋಗುತ್ತಿರುವುದು’ ಎಂದು ಹೇಳಿದರು. ನಾವು ಒಳಹತ್ತಿ ಕುಳಿತೆವು. ಐದತ್ತು ನಿಮಿಷದಲ್ಲಿ ವಾಹನ ಕ್ಯಾಂಪಸ್‌ ತಲುಪಿತು. ಅಪ್ಪ ಧನ್ಯವಾದಗಳನ್ನು ಹೇಳಿ, ಹಣಕೊಡಲು ಹೋದರೆ ಅವರು ಸ್ವೀಕರಿಸಲಿಲ್ಲ. ಮತ್ತೂಮ್ಮೆ ಅವರಿಗೆ ಧನ್ಯವಾದಗಳನ್ನು ಹೇಳಿದಾಗ, ಅವರು ನಗುನಗುತ್ತಲೇ ನಮ್ಮನ್ನ ಬೀಳ್ಕೊಟ್ಟರು. ಇಂದಿಗೂ ಅವರ ಸಹಾಯ ನಮ್ಮ ನೆನಪಿನಲ್ಲಿದೆ. 

ಶ್ರೀರಂಗ ಪುರಾಣಿಕ, ವಿಜಯಪುರ 

Advertisement

Udayavani is now on Telegram. Click here to join our channel and stay updated with the latest news.

Next