ಮುಂಬಯಿ:ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದ ಪರಿಣಾಮ ಭಾರೀ ಪ್ರಮಾಣದಲ್ಲಿ ಆಸ್ತಿಗಳು ಹಾನಿಗೊಂಡಿದ್ದು, ರಾಜ್ಯದ ಹಲವಾರು ಜಿಲ್ಲೆಗಳಲ್ಲ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:COVID-19: ಜು.23ರಿಂದ ಬಾಂಗ್ಲಾದೇಶದಲ್ಲಿ 14 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಜಾರಿ
ಜಲಾವೃತಗೊಂಡ ತಗ್ಗು ಪ್ರದೇಶಗಳು, ನೀರಿನಿಂದ ಆವೃತ್ತವಾಗಿರುವ ರಸ್ತೆಗಳು, ನೀರಿನಲ್ಲಿ ಮುಳುಗಿ ಹೋಗಿರುವ ಕಾರುಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊಂಕಣ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟದಿಂದಾಗಿ ರತ್ನಗಿರಿ ಮತ್ತು ರಾಯ್ ಗಢ ಜಿಲ್ಲೆಗಳಲ್ಲಿ ಇರುವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದಾಗಿ ವರದಿ ತಿಳಿಸಿದೆ.
ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿನ ಕೆಲವು ದೂರ ಪ್ರಯಾಣದ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ರೈಲು ಅಧಿಕಾರಿಗಳ ಮಾಹಿತಿ ಪ್ರಕಾರ, ಅಂದಾಜು 6000 ಪ್ರಯಾಣಿಕರು ಕೊಂಕಣ ರೈಲ್ವೆಯ ವಿವಿಧ ಮಾರ್ಗಗಳಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮುಂಬಯಿನಿಂದ 240 ಕಿಲೋ ಮೀಟರ್ ದೂರದಲ್ಲಿರುವ ಪ್ರವಾಹ ಪೀಡಿತ ಚಿಪ್ಲುನ್ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಪರಿಣಾಮ ಬೀರಿರುವ ಪ್ರದೇಶ ಇದಾಗಿದೆ. ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿರುವ ಸ್ಥಳೀಯರನ್ನು ಭಾರತೀಯ ಕೋಸ್ಟ್ ಗಾರ್ಡ್ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ ಎಂದು ವರದಿ ಹೇಳಿದೆ.