ಓ ಮಳೆಯೇ ನೀ ಎಷ್ಟೊಂದು ಸೊಗಸು. ತಂಗಾಳಿಗೆ ಜತೆಯಾಗಿ ಮೋಡದಿ ಸೆಣಸಾಡಿ ಹನಿ ಹನಿ ನಾದ ಸಂಗೀತ ನೀಡುತ್ತಾ ಈ ಭುವಿ ಸೇರುವೆ. ಮಳೆ ಕೇವಲ ಹನಿಯಲ್ಲ ನಾದ ಲೋಕವನ್ನೇ ಸೃಷ್ಟಿಸುವ, ಮೈಮನಗಳಲ್ಲಿ ಪುಳಕ ಹುಟ್ಟಿಸುವ, ಮನದ ಕೊಳೆಯನ್ನು ಕಳೆಯುವ ಆನಂದ ಕೊಡುವುದು.
ಮಳೆ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳಿಂದ ವಯೋವೃದ್ಧರವರೆಗೂ ಮಳೆಗೆ ಮೊದಲ ಆದ್ಯತೆ. ಇನ್ನು ಹೆಣ್ಮಕ್ಕಳಿಗೆ ತಮ್ಮ ನೋವನ್ನೆಲ್ಲ ಮರೆತು ಮಳೆಯ ಹನಿಗೆ ಮನಸ್ಸು ಒಡ್ಡಿ ಖುಷಿಗೆ ಸಾಕ್ಷಿಯಾಗುವುದು ಈ ಮಳೆ. ಕೃಷಿ ಕ್ಷೇತ್ರದಲ್ಲೂ ಮಳೆರಾಯನೇ ಅಧಿಪತಿ, ಮಳೆಯ ಆಗಮನಕ್ಕೆ ರೈತರು ಹಗಲು-ರಾತ್ರಿಯೆನ್ನದೆ ಬಾನಿಗೆ ಮುಖಮಾಡಿ ಕಾಯುವರು. ರೈತರಿಗೆ ಮಳೆಯೇ ಹಬ್ಬ, ಮಳೆಯೇ ಸುಗ್ಗಿ, ತಮ್ಮ ಕಷ್ಟ-ನಷ್ಟವನ್ನೆಲ್ಲ ಮಳೆಯಲ್ಲೇ ಕಾಣುವರು.
ಭಾರತ ಕೃಷಿ ಸಾಂಪ್ರದಾಯಿಕ ದೇಶ. ಅದರಲ್ಲೂ ಮಳೆಯಾಧಾರಿತ ಕೃಷಿ ಕ್ಷೇತ್ರ. ಮಳೆಯನ್ನೇ ಆಧರಿಸಿ ತಮ್ಮ ಜೀವನ ಉಳಿವಿಗಾಗಿ ಸಾವಿರಾರು ಜನ ರೈತರು ಮಳೆಯನ್ನೇ ನಂಬಿ ಬದುಕುತ್ತಿದ್ದಾರೆ. ಹೀಗಾಗಿ ವರುಣದೇವ ಅನಾದಿಕಾಲದಿಂದಲೂ ರೈತರ ದೈವವಾಗಿದೆ. ಇನ್ನು ಮಕ್ಕಳಿಗೆ ಮಳೆಯೆಂದರೆ ಹೇಳಲೇಬೇಕಿಲ್ಲ. ಕದ್ದು ಮುಚ್ಚಿ ಮಳೆಯಲ್ಲಿ ಆಡುವುದೇ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಬಾಲ್ಯದ ಅತ್ಯಂತ ಸಂತೋಷಭರಿತ ದಿನವೆಂದರೆ ಅದು ಮಳೆಗಾಲದಲ್ಲಿ ಕಳೆಯುವ ದಿನಗಳು.
ಹೆಣ್ಣಿನ ಸೌಂದರ್ಯಕ್ಕೆ ಸೀರೆ ಹೇಗೆ ಮೆರುಗು ಕೊಡುವುದೂ, ಪ್ರಕೃತಿಯ ಸೌಂದರ್ಯಕ್ಕೂ ಈ ಮಳೆ ಮೆರುಗು ತುಂಬುವುದು. ಕವಿ ಪಂಡಿತರಿಗೆ ಮಳೆಯ ಆಧಾರವಾಗಿ ಕವನ ಪದ್ಯ ರಚಿಸುವುದೇ ಒಂದು ಅದ್ಭುತ ಕಲ್ಪನೆ. ಗಾನ ಮೇಧಾವಿಗಳಿಗೆ ಮಳೆಯ ಸಂಗೀತಕ್ಕೆ ಮನಸೋತು ಹಾಡುವುದೇ ಚೆಂದ. ಮಳೆ ವರ್ಣನೆಗೆ ಮಾತ್ರವಲ್ಲದೆ. ಮಳೆ ಸೌಂದರ್ಯಕ್ಕೆ ಮಾತ್ರವಲ್ಲದೆ, ಮಳೆಯಲ್ಲೂ ಮುನಿಸು, ಕೋಪ, ಹತಾಶೆ, ಮನೆಮಾಡಿದೆ. ಕೆಲವೊಮ್ಮೆ ಮನಸ್ಸಿಗೆ ಹಿತ ನೀಡುವಂತೆ ಮಳೆ ಬಂದರೆ, ಇನ್ನು ಕೆಲವೊಮ್ಮೆ ಮನವನ್ನೇ ಭಯಪಡಿಸುವ ಮಳೆ ಕಾಣಬಹುದು. ಇನ್ನೂ ಕೆಲವೊಮ್ಮೆ ವಿನಾಶಕ್ಕೆ ಆರ್ಭಟಿಸಿ ಮಳೆ ಕಾಣಬಹುದು. ಮಳೆ ಮನುಷ್ಯನ ವರ್ತನೆ ಪ್ರತಿಕ್ರಿಯೆ ಆಧಾರದ ಮೇಲೆ ಸುರಿಯುವುದು. ಮಳೆಯ ಆತ್ಮ ಸ್ನೇಹಿತ ಈ ಪ್ರಕೃತಿ. ಪ್ರಕೃತಿ ಮನುಷ್ಯನಿಂದಲೇ ನಾಶವಾಗುತ್ತಿದ್ದು, ಇತ್ತೀಚಿನ ದಿನಮಾನದಲ್ಲಿ ಕಾಣುವ ಮಳೆ ವಿನಾಶಕ್ಕೆ ದಾರಿಯಾಗುತ್ತಿದೆ. ಎಂದು ನಾವು ಪ್ರಕೃತಿಯನ್ನು ಉಳಿಸುತ್ತೇವೋ ಬೆಳೆಸುತ್ತೇವೋ ಅಂದು ಮಳೆ ಮನ ಒಪ್ಪುವಂತೆ ಬರುವುದು.
ಹನಿ ಹನಿ ನಾದ ನೀನಾಗಿರುವೆ
ನೀ ಬಂದರೆ ಸಂಗೀತ ಲೋಕವನ್ನೇ ಸೃಷ್ಟಿಸುವೆ
ಗುಡುಗು-ಮಿಂಚಿನೊಂದಿಗೆ ಗಾನಸುಧೆ ನೀಡುವೆ
ನೀ ನಿಂತರು ತಂಗಾಳಿಯಾಗುವೆ
ಓ ಮಳೆಯೇ ನಿನ್ನಲ್ಲಿ ನನ್ನ ಕಂಡಿರುವೆ
ಹೇ ಮಳೆಯೇ
ನೀ ಎಷ್ಟೊಂದು ಸ್ವತ್ಛಂದವಾಗಿ ಇರುವೆ
ನಿನ್ನ ಕಂಡು ನನ್ನನ್ನೇ ನಾ ಮರಿವೆ
ಗುಡ್ಡಗಾಡು ಎನ್ನದೆ ಹರಿವೆ
ಪ್ರಕೃತಿಗೆ ಸೌಂದರ್ಯ ನೀನಾಗಿರುವೆ
ಓ ಮಳೆಯೇ ನಿನ್ನ ಆಗಮನಕ್ಕೆ ನಾ ಕಾಯುವೆ
ರಂಗಿನ ಕಾಮನಬಿಲ್ಲು ನೀಡುವೆ
ರಂಗೇರಿದ ಬಾನಿನಲ್ಲಿ ನೀ ತಂಗಾಳಿಯಾಗುವೆ
ಮೈಮನಗಳ ಸುಳಿಯಲ್ಲಿ ನೀ ರಂಗೇರುವೆ
ಈ ಸಂಜೆ ಕೆಂಪಾಗಿರಲು ನಿನ್ನ ಇಂಪಾದ ರಾಗ
ಮರಳಿ ಮಳೆಯ ನೆನೆದಿದೆ ಓ ಮಳೆಯೇ…
ನಾಗರತ್ನಾ ಮರೆಪ್ಪ
ಅಕ್ಕರಿಕಿ ದೇವದುರ್ಗ