Advertisement

ಪ್ರತೀ ಮಳೆಯ ಹನಿಯೊಂದಿಗೆ ನೂರಾರು ನೆನಪು

02:40 PM Jun 09, 2021 | Team Udayavani |

ಬಿಸಿಲಿನಿಂದ ಕಾದು ಬರಡು ಆದ ಧರೆಗೆ ಕರುಣೆ ತೋರಿ ಗುಡುಗು ಸಿಡಿಲು ಮೋಡಗಳನ್ನು ಸೀಳಿಕೊಂಡು ಹನಿ ಹನಿಯಾಗಿ ಬಂದು ಮಳೆ ಭೂಮಿಯನ್ನು ತಂಪು ಮಾಡುತ್ತದೆ. ಆವಾಗ ಭೂಮಿಯ ಮಣ್ಣಿನ ಘಮ ಘಮ, ಪಕ್ಷಿಗಳಿಗೆ ಸಂತಸ, ಎತ್ತ ನೋಡಿದರೂ ಅಚ್ಚ ಹಸುರು. ನೋಡಲು ಎರಡು ಕಣ್ಣುಗಳು ಸಾಲದು.

Advertisement

ಇದೇ ರೀತಿ ಸೈಕ್ಲೋನ್‌ ಮಳೆ ಬಂದರೆ ಸಾಮಾನ್ಯವಾಗಿ ಒಂದು ವಾರ ಬರುತ್ತಿತ್ತು. ಆವಾಗ ಎಲ್ಲಿಲ್ಲದ ಸಂತೋಷ, ಅದಕ್ಕೆ ಮಿತಿಯೇ ಇಲ್ಲ. ಯಾಕೆಂದರೆ ಮಳೆಯಲ್ಲಿ ನೆನೆಯುವುದು ಆಟ ಹಾಡುವುದೇ ಖುಷಿ. ಶಾಲೆಗೆ ಹೋಗುವಾಗ ಗೋಣಿ ಚೀಲವನ್ನು ಮರೆಯದೆ ತಲೆ ಮೇಲೆ ಹಾಕೋ ಎಂದು ಅಮ್ಮ ಹೇಳುತ್ತಿದ್ದರು. ಆದರೆ ಮನೆಯಿಂದ ಪಕ್ಕದ ಬೀದಿಗೆ ಹೋಗುತ್ತಿದ್ದ‌ಂತೆ ಗೋಣಿ ಚೀಲ ತೆಗೆದು ಬ್ಯಾಗ್‌ನಲ್ಲಿ ಹಾಕಿಕೊಂಡು ನನ್ನ ಸ್ನೇಹಿತರೆಲ್ಲ ಮಳೆಯಲ್ಲಿ ನೆನೆದು ಕಾಗದದಲ್ಲಿ ದೋಣಿ ಮಾಡಿ ನಾನು ಮೊದಲು ತಾನು ಮೊದಲು ಎಂದು ಗುದ್ದಾಡುತ್ತಾ ನಿಂತ ನೀರಿನಲ್ಲಿ ದೋಣಿ ಬಿಡುತ್ತಿದ್ದು ಈಗ ಅದೆಲ್ಲ ಮಳೆ ಎಂದ ತತ್‌ಕ್ಷಣ ಕಣ್ಮುಂದೆ ಬರುತ್ತದೆ.

ಶಾಲೆ ಮುಗಿಸಿಕೊಂಡು ಬರುವಾಗ ಜೋರಾಗಿ ಮಳೆ ಬರುತ್ತಿತ್ತು. ಆ ಸಮಯದಲ್ಲಿ ಸ್ನೇಹಿತರೆಲ್ಲ ಪುಸ್ತಕಗಳನ್ನು ಚೀಲಗಳಲ್ಲಿ ತುಂಬಿಕೊಂಡು, ಎಂತಹ ಮಳೆ ಬಂದರೂ ಪುಸ್ತಕಗಳು ನೆನೆಯದಂತೆ ಜೋಪಾನವಾಗಿ ತೆಗೆದುಕೊಂಡು ಹೋಗುತ್ತಿದ್ದೆವು. ಶಾಲೆಗೆ ಹೋಗುವ ಅಥವಾ ಶಾಲೆಯಿಂದ ಬರುವ ಸಮಯದಲ್ಲಿ ಮಳೆ ಬಂದರೆ ನಮಗೆ ತುಂಬಾ ಖುಷಿಯಿಂದ ಮಳೆಯಲ್ಲಿ ನೆನೆಯುತ್ತಿದ್ದವು.

ಮಳೆ ಬರುವ ಮುನ್ಸೂಚನೆ ಕಂಡರೆ ಸಾಕು ನನ್ನ ಸ್ನೇಹಿತರೆಲ್ಲ ಸೇರಿ ಹಾಡುವ ಒಂದೇ ಹಾಡು “”ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ” ಎಂದು ಜೋರಾಗಿ ಹಾಡುತ್ತಾ ಮಳೆಯಲ್ಲಿ ನೆನೆಯುತ್ತ ಕುಣಿಯುತ್ತ ಮಳೆ ನಿಲ್ಲುವವರೆಗೂ ಮನೆಗೆ ಹೋಗುತ್ತಿರಲಿಲ್ಲ.

ನನ್ನ ಅಮ್ಮ ಭತ್ತ ನಾಟಿ ಮಾಡುವುದಕ್ಕೆ ಹೋಗಿದ್ದಾಗ ನಾನು ನನ್ನ ಅಮ್ಮನ ಜತೆ ಹೋಗಿದ್ದೆ ಜೋರಾದ ಮಳೆ ಅಲ್ಲಿಗೆ ಕೆಲಸಕ್ಕೆ ಬಂದಿದ ಅಜ್ಜಿಯಂದಿರೆಲ್ಲ ಮಳೆಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಿದ್ದರು. ಹೀಗೆ ಅವರ ಜತೆ ಹಲವಾರು ಮಳೆಯ ಹಾಡುಗಳನ್ನು ಸಲೀಸಾಗಿ ಎಲ್ಲರೂ ಹಾಡುತ್ತಾ ಸಂಭ್ರಮಿಸುತ್ತಿದ್ದೆವು. ಮಳೆ ನೀರು ಹರಿಯುವ ಕಾಲುವೆಗಳಲ್ಲಿ ಮೊದಲೇ ತಯಾರಿಸಿಕೊಂಡು ಬಂದಿದ್ದ ಕಾಗದದ ದೋಣಿಗಳನ್ನು ಬಿಡುವುದು ಒಂದು ಆಟವೇ ಆಗಿತ್ತು. ಅಲ್ಲಿ ಕೆಲಸಕ್ಕೆ ಬಂದಿದ್ದವರು ನೋಡು ನಿನ್ನ ಮಗಳು ಕಾಲುವೆ ಹತ್ತಿರ ಕುಳಿ ತು ಕೊಂಡು ದೋಣಿ ಮಾಡಿ ಬಿಡುತ್ತಿದ್ದಾಳೆ. ಮಳೆಯಲ್ಲಿ ನೆನೆದರೆ ಜ್ವರ ತಲೆನೋವು ಬರುತ್ತೆ ನೀನು ದುಡಿಯುವುದು ಮೂರು ಕಾಸು ಅದೇ ನಿನ್ನ ಮಗಳಿಗೆ ಖರ್ಚು ಮಾಡಿದ್ರೆ ಮನೆ ಖರ್ಚಿಗೆ ಮಾಡುತ್ತೀಯಾ ಅಂತ ಬುದ್ದಿ ಹೇಳಿದಾಗ ನನ್ನ ಅಮ್ಮ ಕೂಗಿ ಕೂಗಿ ಸಾಕಾಗಿ ಅವರೇ ಸುಮ್ಮನಾಗುತ್ತಿದ್ದರು.

Advertisement

ಅಮ್ಮ ಬೇಸರ ಮಾಡಿಕೊಂಡಿದ್ದಾಳೆ ಎಂದು ಮರದ ಕೆಳಗೆ ಕುಳಿತು ಅಲ್ಲಿ ನಿಲ್ಲುತ್ತಿದ್ದ ನೀರಿನ ಗುಂಡಿಗಳಲ್ಲಿ ಜಿಗಿಯುವುದು ಎಂದರೆ ಖುಷಿಯೋ ಖುಷಿ. ದೊಡ್ಡ ದೊಡ್ಡ ಗುಂಡಿಗಳಿದ್ದರೆ ಕಲ್ಲುಗಳನ್ನು ಎಸೆದು ಅದರೊಳಗೆ ಇಳಿದು ಆಟ ಆಡುವವರೆಗೂ ಸಮಾಧಾನವಾಗುತ್ತಿರಲ್ಲಿಲ್ಲ. ಅಲ್ಲಲ್ಲಿ ವಟಗುಟ್ಟುವ ಕಪ್ಪೆಗಳಿಗೆ ನನ್ನದೊಂದು ದೊಡ್ಡ ಕಾಟ. ಮಳೆಯಲ್ಲೂ ಕೂಡ ಇಂತಹ ಮೋಜಿನ ಆಟಗಳನ್ನು ಆಡದೇ ಇರುತ್ತಿರಲಿಲ್ಲ. ಮಳೆ ಅಂದರೆ ಅಷ್ಟೊಂದು ಸಂಭ್ರಮ. ಮನೆಯ ಸುತ್ತಮುತ್ತ ಅಮ್ಮ ಅಮ್ಮ ಎಂದೂ ಕೂಗುತ್ತಾ ಇದ್ದಾಗ ಪಕ್ಕದ ಮನೆ ರಂಗಮ್ಮ ನಿಮ್ಮ ಊರಿಗೆ ಹೋಗಿದ್ದಾರೆ. ನಿಮ್ಮ ಅಪ್ಪ ಗದ್ದೆಗೆ ಹೋಗಿದ್ದಾರೆ. ಅಂತ ಮನೆಯ ಕೀ ಕೊಟ್ಟರು ಅವರ ಮುಂದೆ ಬೇಸರ ಮಾಡಿಕೊಂಡು ಮನೆಗೆ ಬಂದೆ. ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಇನ್ನೂ ಜೋರಾದ ಮಳೆ ನನ್ನ ಸ್ನೇಹಿತರಿಗೆ ಇವತ್ತು ನನ್ನ ಅಮ್ಮ- ಅಪ್ಪ ಇಲ್ಲ ಅಂತ ಹೇಳಿದ ತತ್‌ ಕ್ಷಣ ಅವರಿಗೆ ಖುಷಿ. ಯಾಕಂದರೆ ನಮ್ಮದು ತೊಟ್ಟಿ ಮನೆ ಆಗಿರುವುದರಿಂದ ಮಳೆಯಲ್ಲಿ ಆಟವಾಡಿದ್ರೆ ಯಾರು ನಮ್ಮನ್ನು ನೋಡುವುದಿಲ್ಲ, ಬೈಯುವುದಿಲ್ಲ ಎಂದು ಎಲ್ಲಾರು ಆಟ ಆಡುತ್ತಿದ್ದುದ್ದು ಈಗಲೂ ಅದನೆಲ್ಲಾ ಮರೆಯಲು ಸಾಧ್ಯವಿಲ್ಲ.  ಮಳೆಯಲ್ಲಿಯೇ ಹೊಲಗದ್ದೆಯ ಕೆಲಸಗಳನ್ನು ಮಾಡುತ್ತಿದ್ದ ಜನರನ್ನು ಕಂಡು ತುಂಬಾ ಖುಶಿಯಾಗುತ್ತಿತ್ತು. ಮನೆಗೆ ಬಂದ ಅನಂತರ ಬಿಸಿ ಬಿಸಿ ಕಾಫೀ ಕುಡಿಯುತ್ತಾ ಮಳೆಯ ತಂಪಿನಲಿ ಬೆಚ್ಚಗೆ ಓದುತ್ತಾ ಕುಳಿತರೆ, ಅಪ್ಪನಿಗೆ ಅದೆಷ್ಟು ಆನಂದ. ಮಳೆಯ ಅಂದಿನ ನೆನಪುಗಳನ್ನು ನೆನಪಿಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ.

 

ನಿಸರ್ಗ ಸಿ.ಎ.

ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next