ಇನ್ನೇನು ಮಳೆಗಾಲ ಶುರುವಾಯಿತು. ಆವಿಯಾದ ಹನಿಗಳೆಲ್ಲ ಮತ್ತೆ ಮಳೆಯಾಗಿ ಭೂ ಒಡಲ ಸೇರುವ ಸಮಯ. ಹಳೇ ಬೇರು ಹೊಸ ಚಿಗುರು ಸಂಗಮವಾಗುವ ಕಾಲವಿದು. ಅಲ್ಲದೆ ಪ್ರಕೃತಿಗೆ ಹೊಸ ರೂಪ ಅರ್ಪಿತವಾಗುವ ಸುಸಮಯ. ಇಂತಹ ಘಳಿಗೆ ವರ್ಷಕ್ಕೊಮ್ಮೆ ಆಗಮಿಸಿ, ಭೂ ಜೀವಿಗಳಲ್ಲಿ ನವ ಚೈತನ್ಯ ಹುಟ್ಟುಹಾಕುತ್ತದೆ. ಈ ಬದಲಾವಣೆ ಪ್ರಕೃತಿಯಲ್ಲಿ ಸರ್ವೇ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಆಗುತ್ತದೆ. ಹಾಗಾದರೇ ಈ ರೀತಿಯ ಬದಲಾವಣೆಯನ್ನ ತರುವ ಮಳೆಯ ಹಿಂದಿನ ಪರಿಶ್ರಮವನ್ನು ನಾವಿಲ್ಲಿ ಮರೆಯುವಂತಿಲ್ಲ.
ಹೌದು, ಮಳೆಯನ್ನು ಕೇವಲ ಮಳೆಯನ್ನಾಗಿ ನೋಡದೆ ನಮ್ಮ ಜೀವನಕ್ಕೆ ಹೋಲಿಸಿಕೊಳ್ಳುವುದು ನಮ್ಮೆಲ್ಲರ ಏಳ್ಗೆಗೆ ತುಂಬಾ ಆವಶ್ಯಕ. ಒಂದು ಹನಿ ಮಳೆ ಭೂಮಿಯನ್ನು ಸೇರಬೇಕಾದರೇ ಮೊದಲು ಭೂಮಿಯಿಂದ ಆವಿಯಾಗಬೇಕು. ಆವಿಯಾಗುವ ಮೊದಲು ಉಷ್ಣತೆಯನ್ನು ಎದುರಿಸಲು ಸಿದ್ಧವಾಗಿರಬೇಕು. ಹಾಗಾದಾಗ ಮಾತ್ರ ಆವಿಯಾಗಿ ಮೋಡ ಸೇರಲು ಸಾಧ್ಯ. ಮತ್ತು ಮಳೆಯಾಗಿ ಭೂ ಒಡಲ ಸ್ಪರ್ಶಿಸಲು ಸಾಧ್ಯ. ಅದೇ ಒಂದು ಹನಿ ನೀರು ಉಷ್ಣತೆಯನ್ನು ಎದುರಿಸಲು ಒಪ್ಪದಿದ್ದರೆ ಮಳೆಯಾಗಲು ಸಾಧ್ಯವಿಲ್ಲ, ಅಲ್ಲದೇ ಮಳೆಯನ್ನು ಅವಲಂಬಿಸಿರುವ ನಾವು ಬದುಕಲು ಕಷ್ಟಸಾಧ್ಯ.
ನೋಡಿ, ಹೀಗೆ ನಮ್ಮ ಜೀವನವೂ ಸಹ. ಕೆಲವೊಂದು ಬಾರಿ ಜೀವನದಲ್ಲಿ ನಾವು ನಿರೀಕ್ಷಿಸಲಾಗದಷ್ಟು ಕಷ್ಟಗಳು ಎದುರಾಗುತ್ತವೆ. ಕಷ್ಟಗಳು ಎದುರಾದವೆಂದು ಕೈ ಕಟ್ಟಿ ಕುಳಿತುಕೊಳ್ಳುವುದಕ್ಕಿಂತ ಕೈ ಜೋಡಿಸಿ ಹೋರಾಡುವುದು ಆವಶ್ಯಕ. ಕಷ್ಟವೋ, ನಷ್ಟವೋ ಸಾಗುವ ದಾರಿ ಸ್ಪಷ್ಟವಾಗಿ ಕಾಣುತ್ತಿರಬೇಕು. ಇಲ್ಲಿ ಮಳೆಯನ್ನೇ ತೆಗೆದುಕೊಳ್ಳಿ ತಾನು ಉಷ್ಣತೆಯನ್ನು ಎದುರಿಸಿದಾಗಲೇ ಮಳೆಯು ಭೂವಿಯನ್ನು ತಂಪುಗೊಳಿಸಲು ಸಾಧ್ಯವಾಯಿತು. ಅದೇ ರೀತಿ ನಾವೂ ಕೂಡ ಕಷ್ಟಕ್ಕೇ ಅಂಜದೆ ಮುನ್ನಡೆದಾಗ ಮಾತ್ರ ಸುಖ ನೆಮ್ಮದಿ ದೊರೆಯಲು ಸಾಧ್ಯ ಎಂಬುದು ಇಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಅದಲ್ಲದೇ ನಾವು ಇನ್ನೂ ಗಮನಿಸುವುದಾದರೆ ಇಲ್ಲಿ ಮಳೆಯಿಂದ ಕೇವಲ ಭೂವಿಯು ತಂಪಾಗುವುದಷ್ಟೇ ಅಲ್ಲ. ತನ್ನಲ್ಲಿನ ಕೊಳಚೆಯನ್ನು ತೊಲಗಿಸಿ ಹೊಸ ನೀರಿಗೆ ದಾರಿ ಮಾಡಿಕೊಡುತ್ತದೆ. ತನ್ನ ನಂಬಿದ ಎಷ್ಟೋ ಜೀವಿಗಳಿಗೆ ಜಲವನ್ನು ಶೇಖರಿಸಿಕೊಳ್ಳುತ್ತದೆ. ಇಂತಹ ಸನ್ನಿವೇಶಗಳನ್ನು ನೋಡಿಯಾದರೂ ಸಮಯ ಸಂದರ್ಭ ನೋಡದೆ ನಾವೂ ಕೂಡ ನಮ್ಮ ಮನದ ಕೊಳೆಯನ್ನು ಆಗಾಗ ಹೋಗಲಾಡಿಸುತ್ತಿರಬೇಕು. ಹೊಸ ಅನುಭವಗಳೊಂದಿಗೆ ಹೊಸ ವಿಚಾರಗಳನ್ನು, ಧನಾತ್ಮಕ ಚಿಂತನೆಗಳನ್ನು ಶೇಖರಿಸಿಕೊಳ್ಳುತ್ತಿರಬೇಕು. ಇಲ್ಲಿ ಪ್ರಕೃತಿಯನ್ನು ಉದಾಹರಣೆ ಯನ್ನಾಗಿ ತೆಗೆದುಕೊಳ್ಳುವುದಕ್ಕಿಂತ ಜೀವನ ರೂಪಿಸಿಕೊಳ್ಳುವ ಸನ್ಮಾರ್ಗವಾಗಿ ಬಳಸಿಕೊಂಡರೇ ಜೀವನ ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಪ್ರತೀ ಸನ್ನಿವೇಶಗಳನ್ನು ಜೀವನಕ್ಕೆ ಹೋಲಿಸಿಕೊಳ್ಳುವುದು ಬಹುಮುಖ್ಯ.
-ಫಕ್ಕೀರೇಶ, ಜಾಡರ
ಜಿಎಫ್ಜಿ ಕಾಲೇಜು, ಹಾವೇರಿ