ಬೆಂಗಳೂರು: ಭಾನುವಾರ ಇಡೀ ದಿನ ಸುರಿದ ಜಡಿಮಳೆಗೆ ನಗರ ಸಂಪೂರ್ಣ ನೆನೆದಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡು, ನಾಲ್ಕಕ್ಕೂ ಹೆಚ್ಚು ಮರಗಳು ನೆಲಕಚ್ಚಿದವು. ಮದ್ಯಾಹ್ನದಿಂದ ಶುರುವಾದ ಮಳೆ ರಾತ್ರಿವರೆಗೂ ಸುರಿಯಿತು. ಆಗಾಗ್ಗೆ ಬಿಡುವು ನೀಡಿದಂತೆ ಕಂಡುಬಂದರೂ ಕೆಲವೇ ಹೊತ್ತಿನಲ್ಲಿ ಮತ್ತೆ ಹನಿಯುತ್ತಿತ್ತು.
ನಗರದಲ್ಲಿ ಗರಿಷ್ಠ 40 ಮಿ.ಮೀ. ಮಳೆ ದಾಖಲಾಗಿದೆ. ಆದರೆ, ಹಬ್ಬ ಮತ್ತು ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ನಗರ ಬಹುತೇಕ ಖಾಲಿಯಾಗಿತ್ತು. ಹಾಗಾಗಿ, ಇದರ ಬಿಸಿ ಜನರಿಗೆ ಅಷ್ಟಾಗಿ ತಟ್ಟಲಿಲ್ಲ. ನಗರದಲ್ಲಿ ಹಬ್ಬದ ಉತ್ಸಾಹಕ್ಕೆ ಮಾತ್ರ ಮಳೆ ತಣ್ಣೀರೆರಚಿತು. ಗಣೇಶನ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ವಿವಿಧ ಬಡಾವಣೆಗಳ ಸಂಘಟನೆಗಳು ತಮಟೆ, ಮೆರವಣಿಗೆ, ಡಿಜೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದವು.
ಆದರೆ, ಮಳೆ ನಿರಂತರವಾಗಿ ಇದ್ದುದರಿಂದ ಇದರ ಅಬ್ಬರಕ್ಕೆ ಬ್ರೇಕ್ ಬಿದ್ದಿತು. ವಾಹನದಲ್ಲೇ ಗಣೇಶನ ವಿಸರ್ಜನೆ ಮಾಡಿ ಬಂದರು. ಮೊದಲೇ ನಗರ ಖಾಲಿಯಾಗಿತ್ತು. ಈ ಮಧ್ಯೆ ಮಳೆ ಕೂಡ ಇರುವುದರಿಂದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮೆಜೆಸ್ಟಿಕ್ ಸೇರಿದಂತೆ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಪ್ರಮುಖ ನಿಲ್ದಾಣಗಳ ಆಸುಪಾಸು ಮಾತ್ರ “ಪೀಕ್ ಅವರ್’ನಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಹಾಗಾಗಿ, ತುಸು ಸಂಚಾರದಟ್ಟಣೆ ಕಂಡುಬಂತು.
ಲಾಲ್‌ಬಾಗ್, ಕಬ್ಬನ್ ಉದ್ಯಾನ ಸೇರಿದಂತೆ ಪ್ರಮುಖ ಉದ್ಯಾನಗಳು, ವಿಧಾನಸೌಧ ಮುಂಭಾಗ ಮಳೆಯಲ್ಲೂ ಜನರ ಓಡಾಟ ಕಂಡುಬಂತು. ಮಧ್ಯಾಹ್ನದಲ್ಲೂ ಮೋಡಮುಸುಕಿದ ವಾತಾವರಣ, ಈ ಮಧ್ಯೆ ಬಂದು-ಹೋಗುತ್ತಿದ್ದ ಮಳೆಗೆ ಜನ ಮೈಯೊಡ್ಡಿ, ಸೆಲ್ಫಿà ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು.
ಮಳೆಯಿಂದ ಅರಕೆರೆಯ ಶಾಂತಿನಿಕೇತನ ಮತ್ತು ಮೈಕೋ ಲೇಔಟ್, ಬನಶಂಕರಿಯಲ್ಲಿನ ನಾಗಲಕ್ಷ್ಮೀ ಕಲ್ಯಾಣ ಮಂಟಪದ ಬಳಿ ಮೂರು ಮರಗಳು ಧರೆಗುರುಳಿವೆ. ಹೊಸೂರು ರಸ್ತೆಯ ಜಾನ್ಸನ್ ಮಾರುಕಟ್ಟೆ ಬಳಿ ಮರದ ಕೊಂಬೆಯೊಂದು ಬಿದ್ದಿದೆ. ಬ್ರಿಗೇಡ್ ರಸ್ತೆ ಜಲಾವೃತಗೊಂಡು ಸಂಚಾರ ವ್ಯತ್ಯಯ ಉಂಟಾಯಿತು.