ಮುದಗಲ್ಲ: ಸಮೀಪದ ದೇಸಾಯಿ ಭೋಗಾಪುರ ತಾಂಡಾ, ದೇಸಾಯಿ ಭೋಗಾಪುರ, ತಲೇಖಾನ, ಯರದೊಡ್ಡಿ ಹಾಗೂ ಹಡಗಲಿ ಮತ್ತು ಹಡಗಲಿ ತಾಂಡಾ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಶನಿವಾರ ಸುರಿದ ಮಳೆ-ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ಸಂಜೆ ಗುಡಗು-ಸಿಡಿಲಿನ ಆರ್ಭಟ ಮತ್ತು ಬಿರುಗಾಳಿಯೊಂದಿಗೆ ಮಳೆ ಸುರಿದಿದೆ. ಬಿರುಗಾಳಿಗೆ
ಮೇವಿನ ಬಣವೆಗಳು, ಗಿಡ, ವಿದ್ಯುತ್ ಕಂಬಗಳಿಗೆ ಧಕ್ಕೆಯಾಗಿದ್ದರೆ, ಮನೆ ಹಾಗೂ ಜಾನುವಾರು ಶೆಡ್‌ಗಳ ಟಿನ್
ಗಳು ಹಾರಿಹೋಗಿವೆ.
ತಲೇಖಾನ ಗ್ರಾಪಂ ವ್ಯಾಪ್ತಿಯ ದಾದುಡಿ ತಾಂಡಾದ ಸಿದ್ದಪ್ಪ ರುಕ್ಕಪ್ಪನಿಗೆ ಸೇರಿದ ಗುಡಿಸಲು ಮನೆ ಕುಸಿದು ಬಿದಿದ್ದರಿಂದ ಮನೆಯಲ್ಲಿದ್ದ ಅಮರವ್ವ (55) ಎಂಬವರ ಕಾಲಿಗೆ ತೀವ್ರ ಗಾಯವಾಗಿದೆ.
ಕಸ್ತೂರಿನಾಯ್ಕ ತಾಂಡಾದ ಗಮ್ಮವ್ವ ಮಾನಪ್ಪ ಎಂಬುವರ ಮನೆ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. ಮನೆಯಲ್ಲಿದ್ದ ಗಮ್ಮವ್ವ ಮತ್ತು ಮೊಮ್ಮಗಳಾದ ಸ್ನೇಹಾಳಿಗೆ ಗಾಯಗಳಾಗಿವೆ. ಆದೇ ತಾಂಡಾದ ರಶುರಾಮ ಕಂಬಾರನ ಕೊಲಿಮೆ ಶೆಡ್‌ನ ತಗಡುಗಳು ಗಾಳಿಗೆ ಹಾರಿ ಹೋಗಿವೆ. ರಮೇಶ ಠಾಕರೆಪ್ಪ ಅವರ ಜಾನುವಾರು ಶೆಡ್, ರಘುಕಾಂತ ಅವರ ಮನೆ, ತಿರುಪತಿ ಅವರಿಗೆ ಸೇರಿದ ಜಾನುವಾರು ಶೆಡ್, ನಾಗೇಶ ದೇವಪ್ಪ ಅವರ ಜಾನುವಾರು ಶೆಡ್, ಡಾಕಪ್ಪ ರಾಮಜಪ್ಪ ಅವರ ಜಾನುವಾರು ಶೆಡ್, ಅಮರೇಶ ತಂಬೂ ಎಂಬುವರ ಹೋಟೆಲ್‌ನ ಮೇಲ್ಛಾವಣಿ ತಗಡು ಹಾಗೂ ರಾಮಪ್ಪನ ತಾಂಡಾದ ಚೆನ್ನಪ್ಪ ಮೂರ್ಶಪ್ಪ ಎಂಬುವರ ಶೆಡ್‌ನ ತಗಡುಗಳು ಬಹುದೂರ ಹಾರಿ ಹೋಗಿವೆ. ಅಲ್ಲಲ್ಲಿ ಮರಗಳು, ರಂಬೆಕೊಂಬೆಗಳು ಮುರಿದು ಬಿದ್ದಿವೆ. ಇನ್ನು ಕೆಲವೆಡೆ ಗಿಡಮರಗಳು ಬುಡಸಮೇತ ಧರೆಗುರುಳಿವೆ.
ವಿದ್ಯುತ್ ಕಟ್: ಕನ್ನಾಳ ಭಾಗ ಸೇರಿ ರಾಮಪ್ಪನ ತಾಂಡಾ, ವೇಣ್ಯಪ್ಪನ ತಾಂಡಾ, ಹಡಗಲಿ ತಾಂಡಾದಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ರಾತ್ರಿ-ಹಗಲು ವಿದ್ಯುತ್ ಇಲ್ಲದೆ ಜನ ಕುಡಿಯುವ ನೀರಿಗೂ ಪರಿತಪಿಸಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ಬಾರದ ಕಂದಾಯ ಅಧಿಕಾರಿಗಳು: ತಾಂಡಾ ಹಾಗೂ ಗ್ರಾಮಗಳಲ್ಲಿ ಮಳೆ-ಗಾಳಿಗೆ ಸಾಕಷ್ಟು ಹಾನಿ ಆಗಿದ್ದರೂ ಯಾವೊಬ್ಬ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಲ್ಲ. ಹಾನಿ ಸಮೀಕ್ಷೆ ನಡೆಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಆಗ್ರಹ: ಬೇಸಿಗೆ ಮಳೆಗೆ ಸಾಕಷ್ಟು ಜನ ನೋವು, ಹಾನಿ ಅನುಭವಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು
ಬಾಧಿತ ತಾಂಡಾ, ಗ್ರಾಮಗಳಿಗೆ ಭೇಟಿ ನೀಡಿ ಸರ್ವೆ ನಡೆಸಬೇಕು. ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ
ನೀಡಬೇಕೆಂದು ಹಡಗಲಿ ಕ್ಷೇತ್ರದ ತಾಪಂ ಸದಸ್ಯೆ ಶಾರದಾ ಡಿ. ರಾಠೊಡ ಆಗ್ರಹಿಸಿದ್ದಾರೆ.