Advertisement
ಬೇಡುವೆ ಮಳೆರಾಯ ಬಾರದಿರು ನೀನು
Related Articles
Advertisement
ಬರಿದು ಮಾಡಿದರು ಇವರು ನಿನ್ನವಳ ಒಡಲು
ನಿನ್ನಾಕೆ ಇಳೆ ನೊಂದಳಿವರಿಂದ
ಅವಳ ಸಿರಿಯೊಡಲ ಬಗೆದರು
ಹಡೆದವಳ-ಹೊತ್ತವಳ ಕರುಳ ಕಿತ್ತೆಸೆದರು
ಕೈಕಾಲು ಮೂಳೆಗಳ ಮುರಿದು ದೂರೆಸೆದರು
ನೊಂದವಳು ಅಳದಿರಲೆಂದು ಕಣ್ಣು ಕಿತ್ತೆಸೆದರು
ಯಾರ ಮಾತು ಕೇಳದಿರಲೆಂದು ಕಿವಿ ಕೊಯ್ದರು
ನಿನ್ನೊಡನೆಯೂ ಮಾತಾಡದಿರಲೆಂದು ಬಾಯಿ ಮುಚ್ಚಿದರು
ಉಸಿರೇ ನಿಂತು ಹೋಗಲೆಂದು ಕೊರಳ ಬಿಗಿ ಹಿಡಿದರು
ನಿನ್ನವಳ ಶೋಷಿಸಿದವರ ಪರವಾಗಿ
ಸಂತೃಪ್ತಿಯ ಮಳೆಯಾಗಿ ಬರುವೆಯಾ ಹೇಳು
ತನಗಾಗಿ ಏನೂ ಬಯಸದವಳ
ದುರಾಸೆಗೆ ಬಳಸಿದವರ ಬಯಕೆ ಮನ್ನಿಸುವೆಯಾ ಹೇಳು
ಮರೆತಾದರೂ ಬಾರದಿರು ಮಳೆರಾಯ ಇತ್ತಕಡೆ ನೀನು
ಹೆದರಿ ಬಾರದಿರು ಆಜ್ಞೆ ಮಾಡಿದರೂ ಆ ಬಾನು
ಮೋಡಗಳ ನಡುವೆ ಬಿಕ್ಕಿ ಅತ್ತು ಬಿಡು ನೀನು
ನಿನ್ನ ಕಣ್ಣೀರಹನಿ ಕೂಡ ಬೀಳದಿರಲಿ ಇಲ್ಲಿಗಿನ್ನು
ಕ್ಷಮಿಸಿಬಿಡು ಮಳೆರಾಯ ಇದೊಂದು ಬಾರಿ ನನ್ನ
ನೀ ಬರಲೇಬೇಕಿನ್ನು ಈ ಭೂಮಿಗಿಳಿದು
ನರಳಾಡುತ್ತಿಹಳು ನಿನ್ನವಳು ನೊಂದು
ಬರಡಾಗಿರುವಳು ನೀನಿರದೆ ಬೆಂದು
ನನ್ನ ಮಾತು ಕೇಳಿ ನೀ ಬಾರದಿರಲು
ಹೊತ್ತವಳ ಕೊಂದ ಪಾಪ ಸಲ್ಲುವುದು ನನಗೆ
ಬಾರಯ್ಯ ಕರುಣಾಳೆ ಮಹಾಮಳೆಯೇ ನೀನು
ನಿನ್ನವಳ ನೋವೆಲ್ಲ ಅರೆಕ್ಷಣಕೆ ಕೊಚ್ಚಿ ಹೋಗಿನ್ನು
ಶಿವರಾಮು ವಿ. ಗೌಡ
ಮಾನಸ ಗಂಗೋತ್ರಿ, ಮೈಸೂರು