Advertisement

ಇನ್ನಿಂಗ್ಸ್‌ ಮುನ್ನಡೆಗಾಗಿ ರೈಲ್ವೇಸ್‌ ಹೋರಾಟ

12:16 PM Nov 27, 2017 | |

ಹೊಸದಿಲ್ಲಿ: ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಅಂತಿಮ ಲೀಗ್‌ ಪಂದ್ಯದಲ್ಲಿ ವಿನಯ್‌ ಕುಮಾರ್‌ ನೇತೃತ್ವದ ಕರ್ನಾಟಕ ಪಡೆ ನೀಡಿರುವ ಸವಾಲಿಗೆ ರೈಲ್ವೇಸ್‌ ದಿಟ್ಟ ಉತ್ತರ ನೀಡುತ್ತಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ರೈಲ್ವೇಸ್‌ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟಿಗೆ 241 ರನ್‌ ಗಳಿಸಿದೆ. ರೈಲ್ವೇಸ್‌ ಇನ್ನಿಂಗ್ಸ್‌ ಮುನ್ನಡೆ ಪಡೆಯಬೇಕಾದರೆ ಇನ್ನು ಉಳಿದ 6 ವಿಕೆಟ್‌ನಲ್ಲಿ 194 ರನ್‌ ಬಾರಿಸಬೇಕಾಗಿದೆ.

Advertisement

ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 6 ವಿಕೆಟ್‌ಗೆ 355 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿತ್ತು. ರವಿವಾರ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕ ತನ್ನ ಮೊತ್ತವನ್ನು 434 ರನ್ನಿಗೆ ವಿಸ್ತರಿಸಿತು. ಶ್ರೇಯಸ್‌, ಮಿಥುನ್‌ ವೇಗದ ಆಟ: ಒಂದು ಹಂತದಲ್ಲಿ ಕರ್ನಾಟಕ ತಂಡ 9 ವಿಕೆಟ್‌ಗೆ 388 ರನ್‌ ಬಾರಿಸಿ ಇನ್ನೇನು 400 ಗಡಿ ದಾಟುವುದು ಅನುಮಾನದಲ್ಲಿತ್ತು. ಆದರೆ ಶ್ರೇಯಸ್‌ ಗೋಪಾಲ್‌ ಮತ್ತು ಅಭಿಮನ್ಯು ಮಿಥುನ್‌ ಅಂತಿಮ ವಿಕೆಟಿಗೆ 46 ರನ್‌ಗಳ ಜತೆಯಾಟ ನೀಡಿದರು. ಆದರೆ ಮಿಥುನ್‌ ಅವರನ್ನು ಔಟ್‌ ಮಾಡುವ ಮೂಲಕ ಅಮಿತ್‌ ಮಿಶ್ರಾ ಈ ಜೋಡಿಯನ್ನು ಬೇರ್ಪಡಿಸಿದರು. ಶ್ರೇಯಸ್‌ 65 ಎಸೆತದಲ್ಲಿ ಅಜೇಯ 44 ರನ್‌ ಬಾರಿಸಿದರು. ಮಿಥುನ್‌ 30 ಎಸೆತದಲ್ಲಿ 31 ರನ್‌ ಬಾರಿಸಿ ಔಟ್‌ ಆದರು.

ಆರಂಭದಲ್ಲಿ ಎಡವಿದ ರೈಲ್ವೇಸ್‌: ಇನ್ನಿಂಗ್ಸ್‌ ಆರಂಭಿಸಿದ ರೈಲ್ವೇಸ್‌ಗೆ ಕರ್ನಾಟಕ ಬೌಲರ್‌ಗಳು ಆರಂಭದಲ್ಲಿಯೇ ಆಘಾತ ನೀಡಿದ್ದರು. ಶಿವಕಾಂತ್‌ ಶುಕ್ಲಾ (28 ರನ್‌), ಮ್ರುನಲ್‌ ದೇವಧರ್‌ (7 ರನ್‌), ಪ್ರಥಮ್‌ ಸಿಂಗ್‌ (35 ರನ್‌), ನಿತಿನ್‌ ಭಿಲ್ಲೆ (7 ರನ್‌) ಅಲ್ಪ ಮೊತ್ತಕ್ಕೆ ವಿಕೆಟ್‌ ಕಳೆದುಕೊಂಡು ಪೆವಿಲಿಯನ್‌ ಸೇರಿದರು. ಈ ಹಂತದಲ್ಲಿ ತಂಡದ ಮೊತ್ತ 4 ವಿಕೆಟಿಗೆ 83 ರನ್‌. ಮಿಥುನ್‌ ಮತ್ತು ಕೆ.ಗೌತಮ್‌ ತಲಾ 2 ವಿಕೆಟ್‌ ಪಡೆದು ಭರ್ಜರಿ ಆಘಾತ ನೀಡಿದ್ದರು.

ರೈಲ್ವೇಸ್‌ ಹಳಿ ಹತ್ತಿಸಿದ ಘೋಷ್‌, ರಾವತ್‌: ಹಳಿ ತಪ್ಪಿದ ರೈಲ್ವೇಸ್‌ ತಂಡವನ್ನು ಪುನಃ ಹಳಿಗೆ ತಂದ ಕೀರ್ತಿ ಅರಿಂದಮ್‌ ಘೋಷ್‌ ಮತ್ತು ಮಹೇಶ್‌ ರಾವತ್‌ಗೆ ಸೇರುತ್ತದೆ. 5ನೇ ವಿಕೆಟಿಗೆ ಈ ಜೋಡಿ ಕರ್ನಾಟಕ ಬೌಲರ್‌ಗಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು. ಆರಂಭದಲ್ಲಿ ನಿಧಾನವಾಗಿ ಆಡಿದ ಈ ಜೋಡಿ ಅನಂತರ ರನ್‌ ವೇಗವನ್ನು ಹೆಚ್ಚಿಸಿದರು. 

ಅಂತಿಮವಾಗಿ ಈ ಜೋಡಿ 158 ರನ್‌ಗಳ ಜತೆಯಾಟ ಆಡಿ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಘೋಷ್‌ 133 ಎಸೆತದಲ್ಲಿ 10 ಬೌಂಡರಿ, 2 ಸಿಕ್ಸರ್‌ ಸೇರಿದಂತೆ ಅಜೇಯ 70 ರನ್‌ ಬಾರಿಸಿದ್ದಾರೆ. ರಾವತ್‌ 97 ಎಸೆತದಲ್ಲಿ 10 ಬೌಂಡರಿ, 2 ಸಿಕ್ಸರ್‌ ಸೇರಿದಂತೆ ಅಜೇಯ 86 ರನ್‌ ಬಾರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next