Advertisement

ರೈಲ್ವೆ ಲೋಕೊ ಪೈಲಟ್‌ ವರ್ಗಾವಣೆ ಖಂಡಿಸಿ ಧರಣಿ

03:28 PM Mar 24, 2017 | Team Udayavani |

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಲೋಕೊ ಪೈಲಟ್‌ ಧನಂಜಯ ಕುಮಾರ ಅವರನ್ನು ಹುಬ್ಬಳ್ಳಿಯಿಂದ ಮೈಸೂರಿಗೆ ವರ್ಗಾಯಿಸಿದ್ದನ್ನು ಖಂಡಿಸಿ ನೈರುತ್ಯ ರೈಲ್ವೆ ಮಜ್ದೂರ ಸಂಘದ ವತಿಯಿಂದ ಗುರುವಾರ ರೈಲ್ವೆ ನಿಲ್ದಾಣದಲ್ಲಿ ಧರಣಿ ನಡೆಯಿತು. ಲೋಕೊ ಪೈಲಟ್‌ಗಳಿಗೆ ನಿಯಮಕ್ಕನುಗುಣವಾಗಿ 16 ಗಂಟೆ ಹೆಡ್‌ ಕ್ವಾರ್ಟ್‌ರ್‌ನಲ್ಲಿ ವಿಶ್ರಾಂತಿ ನೀಡುತ್ತಿಲ್ಲ. ಅವಿರತವಾಗಿ ದುಡಿಸಲಾಗುತ್ತಿದೆ.

Advertisement

ಹಕ್ಕನ್ನು ಕೇಳಿದರೆ ಕಿರುಕುಳ ನೀಡಲಾಗುತ್ತಿದೆ. ಹಕ್ಕು ಕೇಳಿದ್ದಕ್ಕೆ ವರ್ಗಾಯಿಸಲಾಗಿದೆ. ನನಗೆ ನ್ಯಾಯ ಸಿಗುವವರೆಗೂ ನಾನು ಹೋರಾಟ ಮುಂದುವರಿಸುತ್ತೇನೆ ಎಂದು ಧನಂಜಯಕುಮಾರ ಹೇಳಿದರು. ಮುಖ್ಯ ಇಲೆಕ್ಟ್ರಿಕಲ್‌ ಎಂಜಿನಿಯರ್‌ ರಾಜೀವ್‌ಕುಮಾರ ಅವರು ವರ್ಗಾವಣೆ ನಿಯಮಕ್ಕೆ ವಿರುದ್ಧವಾಗಿ ಧನಂಜಯಕುಮಾರ ಅವರನ್ನು ವರ್ಗಾಯಿಸಿದ್ದಾರೆ. ಇದನ್ನು ಹಿಂಪಡೆಯುವವರೆಗೆ ಧರಣಿ ನಡೆಸಲಾಗುವುದು ಎಂದರು.

ಹಿರಿಯ ಅಧಿಕಾರಿಗಳು ನೌಕರರನ್ನು ಶೋಷಣೆ ಮಾಡುತ್ತಿದ್ದು, ಸಮರ್ಪಕವಾಗಿ ರಜೆ ನೀಡುತ್ತಿಲ್ಲ. ರಜೆ ಕೇಳಿದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಆರೋಪಿಸಿದರು. ಸುಮಾರು 40 ಲೋಕೊ ಪೈಲಟ್‌ಗಳು ಧರಣಿಯಲ್ಲಿ ಪಾಲ್ಗೊಂಡರು. ಮೆಕ್ಯಾನಿಕಲ್‌ ಎಂಜಿನಿಯರ್‌ ಸುಧೀಂದ್ರ ಶಿಣವಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿರಿಯ ಅಧಿಕಾರಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿ ನಿಂದಿಸಿದ್ದರಿಂದ ಲೋಕೊ ಪೈಲಟ್‌ ಧನಂಜಯಕುಮಾರ ಅವರನ್ನು ಮೈಸೂರಿಗೆ ವರ್ಗಾಯಿಸಲಾಗಿದೆ. 

ಇದನ್ನು ಖಂಡಿಸಿ ಅವರು ಧರಣಿ ಮಾಡುತ್ತಿದ್ದು, ಅವರಿಗೆ ಬೆಂಬಲ ಸೂಚಿಸಿ ಬಿಹಾರದ ಕೆಲವು ಲೋಕೊ ಪೈಲಟ್‌ ಹಾಗೂ ಸಹಾಯಕ ಲೋಕೊ ಪೈಲಟ್‌ಗಳು ಧರಣಿಯಲ್ಲಿ ಪಾಲ್ಗೊಂಡಿದ್ದು,ಅವರೆಲ್ಲ ವೈದ್ಯಕೀಯ ರಜೆ ಪಡೆದು ಧರಣಿ ನಡೆಸುತ್ತಿದ್ದು ಕ್ರಮ ಕೈಗೊಳ್ಳಲಾಗುವುದು ಎಂದರು. ಕೆಲವು ಸರಕು ಸಾಗಣೆ ರೈಲುಗಳ ಸಂಚಾರದಲ್ಲಿ ಸ್ವಲ್ಪ ತೊಂದರೆಯಾಗಿದೆ. ಆದರೆ ಪ್ರಯಾಣಿಕರ ರೈಲುಗಳ ಸಂಚಾರ ಎಂದಿನಂತೆ ನಡೆದಿದೆ.

ವಲಯದಲ್ಲಿ ಸುಮಾರು 1000 ಲೋಕೊ ಪೈಲಟ್‌ಗಳಿದ್ದು, 30-40 ಲೋಕೊ ಪೈಲಟ್‌ಗಳು ಧರಣಿ ನಡೆಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಧರಣಿ ಮುಂದುವರಿಸಿದರೆ ಲೋಕೊ ಪೈಲಟ್‌ ಗಳ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.  ಲೋಕೊ ಪೈಲಟ್‌ಗಳ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ಆದರೆ ಕೆಲವರು ದುರ್ವರ್ತನೆ ತೋರುತ್ತಿರುವುದನ್ನು ಸಹಿಸುವುದಿಲ್ಲ. ಕೆಲ ಲೋಕೊ ಪೈಲಟ್‌ ಗಳು ನೈರುತ್ಯ ರೈಲ್ವೆ ಅಧಿಕಾರಿಗಳ ವಿರುದ್ಧ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದರು. 

Advertisement

ಕೆಲಸಕ್ಕೆ ಹಾಜರಾಗಿ: ಹಿರಿಯ ಅಧಿಕಾರಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿದ್ದರಿಂದ ವರ್ಗಾವಣೆಗೊಳಪಟ್ಟ ಧನಂಜಯಕುಮಾರಗೆ ಬೆಂಬಲಿಸಿ ವೈದ್ಯಕೀಯ ರಜೆ ಪಡೆದು ಧರಣಿ ನಡೆಸುತ್ತಿರುವ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕೆಂದು ವಿಭಾಗೀಯ ವ್ಯವಸ್ಥಾಪಕ ಅರುಣಕುಮಾರ ಜೈನ್‌ ತಿಳಿಸಿದ್ದಾರೆ. 

ರನ್ನಿಂಗ್‌ ಸ್ಟಾಫ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಿಮ್ಮ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಲಾಗುವುದು. ಲೋಕೊ ಪೈಲಟ್‌ಗಳ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ವಿಭಾಗದ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಲೋಕೊ ಪೈಲಟ್‌ಗಳು, ಸಹಾಯಕ ಲೋಕೊ ಪೈಲಟ್‌ ಗಳು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.   

Advertisement

Udayavani is now on Telegram. Click here to join our channel and stay updated with the latest news.

Next