ರಾಯಚೂರು: ಪ್ರಯಾಣಿಕರ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಕೈಗೊಳ್ಳಲಾಗಿದೆ. ದಕ್ಷಿಣ ಮಧ್ಯ ರೈಲ್ವೆ ವಲಯದ ವ್ಯಾಪ್ತಿಗೆ ಬರುವ ತೆಲಂಗಾಣ, ಆಂಧ್ರ ಮತ್ತು ಕರ್ನಾಟಕ ರಾಜ್ಯದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ ಯಾದವ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ವಾರ್ಷಿಕ ಪ್ರಗತಿ ಪರಿಶೀಲನೆಗೆ ಆಗಮಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯವಾಗಿ ನಿಲ್ದಾಣಗಳ ಮೇಲ್ದರ್ಜೆ, ಹಳಿಗಳ ನಿರ್ಮಾಣ, ಸರ್ವೇ ಕಾರ್ಯ, ವಿದ್ಯುತ್ ಚಾಲಿತ ರೈಲು ಮಾರ್ಗ ನಿರ್ಮಾಣ, ಹೊಸ ರೈಲು ಮಾರ್ಗ ಸೇರಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಪ್ರಯಾಣಿಕರ ಸುರಕ್ಷತಾ ಕ್ರಮಗಳು, ಸ್ವತ್ಛತೆ, ಕಾಮಗಾರಿಗಳ ಪ್ರಗತಿ, ಸಿಬ್ಬಂದಿಗೆ ವಸತಿಗೃಹ ಸೇರಿ ವಿವಿಧ ವಿಚಾರಗಳನ್ನು ಪರಿಶೀಲಿಸಲಾಗಿದೆ ಎಂದು ವಿವರಿಸಿದರು.
ರಾಯಚೂರು ರೈಲು ನಿಲ್ದಾಣದಲ್ಲಿ ಮತ್ತೂಂದು ಎಫ್ ಒಬಿ (ಫುಟ್‌ಓವರ್ ಬ್ರಿಡ್ಜ್) ನಿರ್ಮಿಸುವುದರ ಜೊತೆಗೆ ಲಿಫ್ಟ್ ನಿರ್ಮಿಸಲಾಗುವುದು. ಎಲ್ಲ ನಿಲ್ದಾಣಗಳಲ್ಲಿ ಎಫ್‌ಬಿಒ ಕಡ್ಡಾಯವಾಗಿ ನಿರ್ಮಿಸಲು ಸೂಚಿಸಲಾಗಿದೆ. ಈ ವಲಯದಲ್ಲಿ ಪ್ಲಾಟ್‌ಫಾರಂ ಉದ್ದ ಮತ್ತು ಎತ್ತರ ಹೆಚ್ಚಿಸಲಾಗುವುದು. ಮುಂದಿನ ಆರು ತಿಂಗಳಲ್ಲಿ ಎಲ್ಲ ಕೆಲಸ ಮುಗಿಸುವಂತೆ ಸೂಚಿಸಿದ್ದಾಗಿ ತಿಳಿಸಿದರು.
ಕೃಷ್ಣ-ವಿಕಾರಾಬಾದ್ 120 ಕಿಮೀ ಮಾರ್ಗದ ಕೆಲಸವನ್ನು 484 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಎರಡು ಹೊಸ ಮಾರ್ಗಗಳಿಗಾಗಿ ಸರ್ವೇ ಕಾರ್ಯ ನಡೆದಿದೆ. ಅದರಲ್ಲಿ ಮಂತ್ರಾಲಯ-ಕರ್ನೂಲ್ 110 ಕಿಮೀ ಮಾರ್ಚ್ ವೇಳೆಗೆ ಮುಗಿಸಲಿದ್ದು, ಧರ್ಮಾವರಂ-ಬಳ್ಳಾರಿ 120 ಕಿಮೀ ಸರ್ವೇ ಮುಗಿಸಲಾಗುವುದು. ಗುಂಟೂರು-ಗುಂತಗಲ್ ವಿದ್ಯುದ್ದೀಕರಣ ಮುಗಿದಿದ್ದು ಡಬ್ಲಿಂಗ್ 2019ಕ್ಕೆ ಮುಗಿಯಲಿದೆ. ಗುಂತಕಲ್-ಕಲ್ಲೂರು ಡಬ್ಲಿಂಗ್ ಎರಡು ಬ್ಲಾಕ್ ಶುರುವಾಗಿದ್ದು, ಮತ್ತೆರಡು ಮಾರ್ಚ್‌ಗೆ ಮುಗಿಯಲಿವೆ. ಗುತ್ತಿ-ಧರ್ಮಾವರಂ 90 ಕಿಮೀ ಡಬ್ಲಿಂಗ್‌ನ್ನು 637 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಮತ್ತು ಡಬ್ಲಿಂಗ್ ಮಾಡಲಾಗವುದು. ಒಂದು ಬ್ಲಾಕ್ 2020ರಲ್ಲಿ ಪೂರ್ಣವಾಗಲಿದೆ ಎಂದು ಮಾಹಿತಿ ನೀಡಿದರು.
ರಾಯಚೂರು, ಯಾದಗಿರಿ, ಆದೋನಿ, ಮಂತ್ರಾಲಯ, ನಾಲ್ವಾರ, ಸೈದಾಪುರ, ಮಟಮಾರಿ, ಪ್ಲಾಟಫಾರಂ ವಿಸ್ತರಣೆ ಕಾಮಗಾರಿ ನಡೆಯುತ್ತಿವೆ. ದೇವಕರ್ದಾ-ಕೃಷ್ಣಾ ಹೊಸ ಮಾರ್ಗ, ಜಕ್ಲೀಯರ್-ಕೃಷ್ಣ 38 ಕಿಮೀ ಹೊಸ ಕಾಮಗಾರಿ ನಡೆಯುತ್ತಿದೆ. ಮುಂದಿನ ವರ್ಷ ಸೇವೆಗೆ ಲಭ್ಯವಾಗಲಿದೆ.
ಗುಂತಕಲ್-ಬಳ್ಳಾರಿ-ಹೊಸಪೇಟೆ ಮಾರ್ಗದಲ್ಲಿ ವಿದ್ಯುದ್ದೀಕರಣ ಕೆಲಸ ನಡೆದಿವೆ. ಗುಂತಕಲ್-ಬಳ್ಳಾರಿ ಮಾರ್ಗ ಮಾರ್ಚ್ ವೇಳೆಗೆ ಮುಗಿಯಲಿದ್ದು, ಗುಂತಕಲ್-ಹೊಸಪೇಟೆ ಡಿಸೆಂಬರ್‌ಗೆ ಮುಗಿಯಲಿದೆ ಎಂದು ತಿಳಿಸಿದರು.
ಲಿಂಕ್ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವ ನಿರ್ಧಾರಕ್ಕೆ ಇಲಾಖೆ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿ ಜಾರಿ ಮಾಡಲಾಗುವುದು. ರಾಜ್ಯದ ರೈಲು ನಿಲ್ದಾಣಗಳಲ್ಲಿ ಕನ್ನಡ ಬಳಕೆಗೆ ಒತ್ತಾಯ ಕೇಳಿ ಬಂದಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ಗುಂತಕಲ್ ವಿಭಾಗದ ವ್ಯವಸ್ಥಾಪಕ ವಿಜಯ ಪ್ರಸಾದ ಸಿಂಗ್, ಕಾರ್ಯನಿರ್ವಾಹಣ ಮುಖ್ಯಸ್ಥ ಮಧುಸೂದನ್ ರಾವ್ ಇದ್ದರು. ಬಳಿಕ ಆಧುನೀಕರಣಗೊಳಿಸಿದ ಆಫೀಸರ್ ವಿಶ್ರಾಂತಿ ಕೋಣೆಯನ್ನು ಉದ್ಘಾಟಿಸಿದರು. ನಂತರ ಮುಂಭಾಗದಲ್ಲಿ ನಿರ್ಮಿಸಿರುವ ಉದ್ಯಾನವನ್ನು ಪರಿಶೀಲಿಸಿದರು.