Advertisement

ರೈಲ್ವೆ ಮಾರ್ಗ ಪದೇ ಪದೇ ಬದಲಿಗೆ ಆಕ್ರೋಶ

03:39 PM Oct 24, 2021 | Team Udayavani |

ಬಾಗಲಕೋಟೆ: ಕಳೆದ ಒಂದು ದಶಕದಿಂದಲೂ ಹೆಚ್ಚು ದಿನಗಳ ಬೇಡಿಕೆಯಾದ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಳ್ಳುತ್ತಿಲ್ಲ. ಭೂಸ್ವಾಧೀನ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆಯಲ್ಲಿ ಸಮನ್ವಯತೆ ಇಲ್ಲ. ಅಲ್ಲದೇ ಪ್ರಭಾವಿಗಳ ಒತ್ತಡಕ್ಕೆ ಮಣಿದು ಖಜ್ಜಿಡೋಣಿ-ಲೋಕಾಪುರ ಮಧ್ಯೆ ಮಾರ್ಗ ನಿರ್ಮಾಣದ ಯೋಜನೆ ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್‌ ಖಾಜಿ ಆರೋಪಿಸಿದ್ದಾರೆ.

Advertisement

ಶನಿವಾರ ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ನೈರುತ್ಯ ರೈಲ್ವೆ ವಿಭಾಗದ ಮಹಾ ವ್ಯವಸ್ಥಾಪಕ ಸಂಜೀವಕಿಶೋರ, ವಿಭಾಗೀಯ ಮಹಾ ವ್ಯವಸ್ಥಾಪಕ ಅರವಿಂದ ಮಲಖೇಡ ಅವರು ಒಳಗೊಂಡ ಹಿರಿಯ ಅ ಧಿಕಾರಿಗಳಿಗೆ ಹಲವು ಬೇಡಿಕೆಗಳ ಕುರಿತು ಮನವಿ ಸಲ್ಲಿಸಿ ಈ ವೇಳೆ ಅವರು ಮಾತನಾಡಿದರು.

ಕಳೆದ ದಶಕದಿಂದ ನೆನೆಗುದಿಗೆ ಬಿದ್ದಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಖಜ್ಜಿಡೋಣಿಯಿಂದ ಕಾಮಗಾರಿ ಪ್ರಾರಂಭಿಸಬೇಕು. ಖಜ್ಜಿಡೋಣಿಯಿಂದ-ಲೋಕಾಪುರವರೆಗೆ ಟೆಂಡರ್‌ ಕರೆಯಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಒಂದು ವರ್ಷದಿಂದ ಹೇಳುತ್ತಲೇ ಇದ್ದಾರೆ. ಕಾಮಗಾರಿ ಯಾವಾಗ ಪ್ರಾರಂಭಿಸುತ್ತೀರಿ ಎಂದು ಪ್ರಶ್ನಿಸಿದರು.

9 ಕಿ.ಮಿ. ರೈಲ್ವೆ ಮಾರ್ಗಕ್ಕೆ 144 ಎಕರೆ ಭೂಮಿ ಅವಶ್ಯಕತೆ ಇದ್ದು, ಈಗಾಗಲೇ 111 ಎಕರೆ ಜಮೀನನ್ನು ಜಿಲ್ಲಾಡಳಿತ, ಇಲಾಖೆಗೆ ಹಸ್ತಾಂತರಿಸಿದೆ. ಇನ್ನುಳಿದ 33 ಎಕರೆ ಭೂಮಿಯನ್ನು ರೈತರಿಂದ ಜಿಲ್ಲಾಡಳಿತವು ಕಾಮಗಾರಿ ಪ್ರಾರಂಭಿಸಲು ಒಪ್ಪಿಗೆ ಪಡೆದಿದೆ ಎಂದು ಸ್ವತಃ ಜಿಲ್ಲಾಡಳಿತವೇ ಹೇಳುತ್ತಿದೆ. ಕಾಮಗಾರಿ ಪ್ರಾರಂಭಿಸಲು ಯಾವುದೇ ಅಡೆತಡೆ ಇಲ್ಲ. ಆದರೂ ರೈಲ್ವೆ ಇಲಾಖೆ, ಸುಳ್ಳು ಭರವಸೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾರದಲ್ಲಿ ಕಾಮಗಾರಿ ಪ್ರಾರಂಬಿಸಬೇಕು. ಇಲಾಖೆಯ ತಪ್ಪು ನೀತಿಗಳಿಂದ ಅಂದರೆ ಖಜ್ಜಿಡೋಣಿಯಿಂದ ಪದೇ ಪದೇ ಮಾರ್ಗ ಬದಲಾವಣೆ ಮಾಡುವುದರ ಮುಖಾಂತರ ಭೂಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಳಂಬವಾಗಿದೆ. ಇನ್ನು ಮುಂದೆ ಇಂತಹ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳದೇ ಸರಳವಾಗಿ ಕಾಮಗಾರಿ ಆರಂಬಿಸಬೇಕು. ಇಲ್ಲದಿದ್ದಲ್ಲಿ ಮಾರ್ಗ ಬದಲಾವಣೆ ಹಗರಣದಲ್ಲಿ ಯಾರಿಗೋ ಅನುಕೂಲ ಮಾಡುವ ಸಲುವಾಗಿ ಜನರ ಹಿತಾಸಕ್ತಿಯನ್ನು ಬಲಿಪಶು ಮಾಡಿದ್ದೀರಿ, ಯೋಜನೆ ವೆಚ್ಚ 816 ಕೋಟಿಯಿಂದ ಮೂರು ಪಟ್ಟು ಹೆಚ್ಚಾಗಿ ಸಾರ್ವಜನಿಕ ಬೊಕ್ಕಸಕ್ಕೆ ರೈಲ್ವೆ ಇಲಾಖೆ ಮತ್ತು ಜನಪ್ರತಿನಿಧಿಗಳು ಸೇರಿ ಮಾಡಿದ್ದೀರಿ. ಖಜ್ಜಿಡೋಣಿಯಿಂದ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಸಮಿತಿಯು ಬಾಗಲಕೋಟೆ-ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ನಡೆಸುತ್ತೇವೆ. ರೈಲ್ವೆ ಮಾರ್ಗ ಅನುಷ್ಠಾನದಲ್ಲಿ ಆದಂತಹ ಅವ್ಯವಹಾರ ಬಯಲಿಗೆಳೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಕಳೆದ ವಾರ ಭೇಟಿ ಮಾಡಿದ್ದಾಗ ಪ್ಯಾಸೆಂಜರ್‌ ರೈಲು ಮತ್ತು ಸ್ಥಗಿತಗೊಂಡ ಎಲ್ಲ ರೈಲುಗಳ ಪ್ರಾರಂಭ ಮತ್ತು ಜೋಡಿ ಮಾರ್ಗದ ಕಾಮಗಾರಿ ಅತಿ ಶೀಘ್ರ ಪೂರ್ಣಗೊಳಿಸಿ ವಿದ್ಯುತ್‌ಕರ್ಣಗೊಳಿಸಲು ಒತ್ತಾಯ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ತಾವುಗಳು ನ. 1ರಿಂದ ಪ್ಯಾಸೆಂಜರ್‌ ರೈಲು ಬಿಜಾಪುರ-ಹುಬ್ಬಳ್ಳಿ ಮಧ್ಯದಲ್ಲಿ ಬಿಜಾಪುರ-ಮಂಗಳೂರ ರೈಲುಗಳ ಪ್ರಾರಂಭಿಸಲು ಆದೇಶಿಸಿದ್ದು ಹೋರಾಟ ಸಮಿತಿ ಸ್ವಾಗತಿಸುತ್ತದೆ. ಅದರಂತೆ ಜೋಡಿ ಮಾರ್ಗ ಪ್ರಗತಿ ಪರಿಶೀಲಿಸುತ್ತಿರುವುದು ಸ್ವಾಗತಾರ್ಹ ಎಂದರು.

ರೈಲು ನಿಲ್ದಾಣ ಕೌಂಟರಗಳಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ಟಿಕೆಟ ದೊರೆಯುವಂತೆ ಮಾಡಬೇಕು. ಹೊಂಬಳ, ಬಳಗಾನೂರ, ಹೊಳೆಆಲೂರ, ಬಾದಾಮಿ, ಗುಳೇದಗುಡ್ಡ ಸೇರಿದಂತೆ ಗದಗ-ವಿಜಯಪುರ ಮಾರ್ಗಕ್ಕೆ ಒಳಪಡುವ ಎಲ್ಲ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಮೇಲು ಸೇತುವೆಗಳ, ಆಸನಗಳ, ಶುದ್ಧ ಕುಡಿಯುವ ನೀರು, ವಿದ್ಯುತ್‌ ದೀಪಗಳು, ನೈರ್ಮಲ್ಯ ಶೌಚಾಲಯಗಳ, ಡಿಜಿಟಲ್‌ ಇಂಡಿಕೇಷನ್‌ ಬೋರ್ಡ್‌ಗಳು, ರೈಲು ಮಾರ್ಗದಲ್ಲಿ ಅಗತ್ಯ ಇರುವ ಕಡೆ ಎಲ್‌.ಸಿ. ಗೇಟ್‌ಗಳ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ, ಗದಗ-ವಿಜಯಪುರ ಮಾರ್ಗಕ್ಕೆ ಒಳಪಡುವ ಎಲ್ಲ ರೈಲು ನಿಲ್ದಾಣಗಳ ಮೂಲಭೂತ ಸೌಲಭ್ಯ, ಜೋಡಿ ಮಾರ್ಗದ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಹೋರಾಟ ಸಮಿತಿಯ ಪರಶುರಾಮ ಬಳ್ಳಾರಿ, ಜಯಶ್ರೀ ಗುಳಬಾಳ, ಸಂಗಪ್ಪ ಸಾಳಗುಂದಿ, ಆಸೀಫ ಖಾಜಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next