ಭೋಪಾಲ: ಚಲಿಸುತ್ತಿದ್ದ ರೈಲಿನೊಂದಿಗೆ ಮಿಂಚಿನಂತೆ ಓಡಿದ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಕಾನ್‌ಸ್ಟೆಬಲ್, ಹಸಿದ ಮಗುವಿಗೆ ಅಗತ್ಯವಿದ್ದ ಹಾಲು ತಲುಪಿಸಿದ ಘಟನೆ ಭೂಪಾಲ ರೈಲು ನಿಲ್ದಾಣದಲ್ಲಿ ನಡೆದಿದೆ. ಕಾನ್‌ಸ್ಟೆಬಲ್ ರೈಲಿನೊಂದಿಗೆ ಓಡುವ ದೃಶ್ಯ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶ್ರಮಿಕ್ ಎಕ್ಸ್‌ಪ್ರೆಸ್‌ನಲ್ಲಿ ಗೋರಖ್‌ಪುರಕ್ಕೆ ಹೊರಟಿದ್ದ ಶಫಿಯಾ ಹಶೀಮ್, ತಮ್ಮ 4 ತಿಂಗಳ ಮಗುವಿಗಾಗಿ ಹಾಲು ತೆಗೆದುಕೊಳ್ಳುವುದನ್ನು ಮರೆತಿದ್ದರು. ರೈಲಿನಲ್ಲಿ ಪ್ರಯಾಣಿಸುವಾಗ ಹಸಿವಿನಿಂದ ಮಗು ಅಳಲು ಆರಂಭಿಸಿದ ಕಾರಣ ಬಿಸ್ಕೆಟ್‌ಗಳನ್ನು ನೀರಿನಲ್ಲಿ ಅದ್ದಿ ತಿನ್ನಿಸಿದ್ದರು.
ಅಷ್ಟರಲ್ಲೇ ರೈಲು ಭೋಪಾಲ ನಿಲ್ದಾಣ ತಲುಪಿದ್ದು, ಅಲ್ಲೇ ನಿಂತಿದ್ದ ಆರ್‌ಪಿಎಫ್ ಸಿಬ್ಬಂದಿ ಇಂದರ್ ಸಿಂಗ್ ಯಾದವ್ ಅವರನ್ನು ಕರೆದ ಶಫಿಯಾ, ಮಗುವಿಗೆ ಹಾಲು ತಂದು ಕೊಡುವಂತೆ ಕೋರಿದ್ದಾರೆ.
ತಕ್ಷಣ ಅಂಗಡಿಯತ್ತ ಹೋದ ಇಂದರ್, ಹಾಲು ಕೊಳ್ಳುವಷ್ಟರಲ್ಲಿ ರೈಲು ಮುಂದೆ ಸಾಗಿದೆ. ರೈಲು ಹೋಗುವುದನ್ನು ಗಮನಿಸಿದ ಇಂದರ್, ಒಂದು ಕೈನಲ್ಲಿ ಹಾಲಿನ ಪ್ಯಾಕೆಟ್ ಹಿಡಿದುಕೊಂಡು ಮಹಿಳೆ ಇದ್ದ ಕೋಚ್‌ನತ್ತ ವೇಗವಾಗಿ ಓಡಿ ಹೋಗಿ ಹಾಲು ತಲುಪಿಸಿದ್ದಾರೆ.
ಇಂದರ್‌ರ ಸಾಹಸ ಕಂಡು ರೈಲು ನಿಲ್ದಾಣದಲ್ಲಿದ್ದವರೆಲ್ಲಾ ಚಪ್ಪಾಳೆ ಮೂಲಕ ಪ್ರಶಂಸಿಸಿದ್ದಾರೆ. ಊರು ತಲುಪಿದ ಶಫಿಯಾ ಇಂದರ್ ಅವರಿಗೆ ಧನ್ಯವಾದ ಹೇಳಿದ್ದಲ್ಲದೆ, ಅವರು ನಮ್ಮ ಪಾಲಿನ ‘ರಿಯಲ್ ಹೀರೊ’ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ ಇಂದರ್ ಸಿಂಗ್ ಯಾದವ್‌ರ ಸಾಹಸವನ್ನು ಕೊಂಡಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, ಕಾನ್‌ಸ್ಟೆಬಲ್‌ಗೆ ನಗದು ಬಹುಮಾನ ಘೋಷಿಸಿರುವುದಾಗಿ ತಿಳಿಸಿದ್ದಾರೆ. ಜತೆಗೆ ಮಗುವಿನ ತಾಯಿಯು ಇಂದರ್ ಅವರಿಗೆ ಧನ್ಯವಾದ ತಿಳಿಸಿರುವ ವಿಡಿಯೋವನ್ನು ಸಚಿವರು ಟ್ವೀಟ್ ಮಾಡಿದ್ದಾರೆ.