Advertisement

ಮಹಿಳಾ ಸುರಕ್ಷೆಗೆ ರೈಲ್ವೇ ಪ್ರಸ್ತಾವ: ಬದಲಾಗಲಿ ವ್ಯವಸ್ಥೆ

06:00 AM Sep 26, 2018 | Team Udayavani |

ಮಹಿಳಾ ಸುರಕ್ಷೆಯೆನ್ನುವುದು ಇಂದಿಗೂ ದೇಶವನ್ನು ಚಿಂತೆಗೆ ದೂಡುವಂಥ ವಿಷಯ. ಯಾವುದೇ ಕ್ಷೇತ್ರದಲ್ಲಾದರೂ ಆಗಲಿ ಮಹಿಳೆಗೆ ಹಿಂಸೆ ತಪ್ಪಿದ್ದಲ್ಲ ಎನ್ನುವಂತಾಗಿಬಿಟ್ಟಿದೆ. ಅದರಲ್ಲೂ ನಿತ್ಯವೂ ಕೆಲಸಕ್ಕಾಗಿ ಸಂಚರಿಸುವ ಮಹಿಳೆಯರ ಸಂಕಷ್ಟವಂತೂ ಅವರಿಗೇ ಗೊತ್ತು. ಬಸ್ಸುಗಳಲ್ಲಿ, ರೈಲುಗಳಲ್ಲಿ ಅವರು ಪೀಡಕರಿಂದ ಕಿರುಕುಳ ಅನುಭವಿಸುವುದು ನಿಂತಿಲ್ಲ. ಅದರಲ್ಲೂ ನಿತ್ಯ ಓಡಾಟಕ್ಕಾಗಿ ರೈಲುಗಳನ್ನು ಅವಲಂಬಿಸಿರುವ ಮಹಿಳೆಯರಿಗೆ ನಿತ್ಯವೂ ಚುಡಾಯಿಸುವವರಿಂದ ಹಿಡಿದು ಲೈಂಗಿಕ ಶೋಷಣೆಯ ರೂಪದವರೆಗೂ ಅಪಾಯ ಎದುರಿಸುತ್ತಿರುತ್ತಾರೆ. 

Advertisement

ಇಂಥ ಅಪರಾಧಗಳಿಂದ ರಕ್ಷಿಸುವುದಕ್ಕಾಗಿಯೇ ಮಹಿಳೆಯರಿಗಾಗಿಯೇ ರೈಲುಗಳಲ್ಲಿ ಪ್ರತ್ಯೇಕ ಬೋಗಿ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಮಹಿಳೆಯರಿಗೆ ಮೀಸಲಾದ ಆ ಡಬ್ಬಿಗಳಲ್ಲೂ ನುಗ್ಗಿ ಅವರಿಗೆ ಕಿರುಕುಳ ಕೊಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಹೀಗೆ ನುಗ್ಗಿದ ಗಂಡಸರನ್ನು ಹೊರಹಾಕುವುದಕ್ಕೂ ಮಹಿಳೆಯರು ಹರಸಾಹಸ ಪಡಬೇಕಾಗುತ್ತದೆ. ಅನೇಕ ಬಾರಿ ರೈಲ್ವೆ ಪೊಲೀಸರು(ಆರ್‌ಪಿಎಫ್) ಬಂದಾಗ ಮಾತ್ರ ಈ ಪೀಡಕರು ಪಲಾಯನ ಮಾಡುತ್ತಾರೆ. ಇಂಥ ಸ್ಥಿತಿಗಳನ್ನು ನಿರ್ವಹಿಸಲು ರೈಲ್ವೆ ಅಧಿನಿಯಮಗಳಲ್ಲಿ ಯಾವುದೇ ಪ್ರಾವಿಶನ್‌ಗಳಿಲ್ಲ. ಹೀಗಾಗಿ ರೈಲ್ವೆ ಸುರûಾ ದಳಕ್ಕೆ ಹೆಚ್ಚು ಗಂಭೀರವಾಗಿ ಕ್ರಮ ಕೈಗೊಳ್ಳಲು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ ರೈಲೆ ಪೊಲೀಸ್‌ ಪಡೆ, ಮಹಿಳೆಯರಿಗೆ ಮೀಸಲಾದ ಬೋಗಿಗಳಲ್ಲಿ ಹತ್ತುವ ಪುರುಷರಿಗೆ ದಂಡದ ಪ್ರಮಾಣವನ್ನು 500 ರೂಪಾಯಿಯಿಂದ ಸಾವಿರ ರೂಪಾಯಿಗೆ ಹೆಚ್ಚಿಸುವ, ಹಾಗೂ ಟ್ರೇನ್‌ನಲ್ಲಿ ಮಹಿಳೆಯರಿಗೆ ಹಿಂಸೆ ನೀಡುವ ದೋಷಿಗಳಿಗೆ ಮೂರು ವರ್ಷದ ಜೈಲು ಶಿಕ್ಷೆ ವಿಧಿಸಬೇಕೆಂಬ ಪ್ರಸ್ತಾವವನ್ನು ಎದುರಿಟ್ಟಿದೆ. ಈಗ ಇರುವ ಕಾನೂನಿನನ್ವಯ ಮಹಿಳೆಯರಿಗೆ ರೈಲ್ವೆಯಾಗಲಿ ಇನ್ನಿತರ ಸಾರಿಗೆ ವ್ಯವಸ್ಥೆಯಲ್ಲಾಗಲಿ ಕಿರುಕುಳ ಕೊಡುವವರಿಗೆ ಭಾರತೀಯ ದಂಡ ಸಂಹಿತೆಯ ಆಧಾರದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 

ದೇಶದಲ್ಲಿ ನಿರ್ಭಯಾ ಹತ್ಯೆ ಪ್ರಕರಣದ ನಂತರದಿಂದ ಮಹಿಳಾ ಸುರಕ್ಷೆಯ ವಿಷಯದಲ್ಲಿ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು, ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಹೀಗಿದ್ದರೂ ಮಹಿಳೆಯರ ಜೀವನ ಸಹಜ ಮತ್ತು ಸುರಕ್ಷಿತವಾಗಿಲ್ಲ. ಈಗಲೂ ಮನೆಯಿಂದ ಹೊರಗೆ ಭಯದಲ್ಲೇ ಕಾಲಿಡಬೇಕಾದ ಸ್ಥಿತಿಯನ್ನು ಅವರು ಎದುರಿಸುತ್ತಿದ್ದಾರೆ. ನಿತ್ಯವೂ ದೇಶದ ಒಂದಲ್ಲಾ ಒಂದು ಭಾಗದಿಂದ ಅಪರಾಧಿಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಬಹುತೇಕ ಬಾರಿ ಮಹಿಳೆಯರು ತಮಗೆ ಕಿರುಕುಳವಾದರೂ ಸಮಾಜಕ್ಕೆ ಅಂಜಿ ಸುಮ್ಮನಾಗಿಬಿಡುತ್ತಾರೆ. ಹೀಗಾಗಿ ಅವರು ತಮ್ಮ ವಿರುದ್ಧದ ದೌರ್ಜನ್ಯವನ್ನು ಪೊಲೀಸ್‌ ಠಾಣೆಗೆ ಕೊಂಡೊಯ್ಯುವಂಥ ಪೂರಕ ಸಾಮಾಜಿಕ ವಾತಾವರಣ ಸೃಷ್ಟಿಯಾಗಲೇಬೇಕಿದೆ. ಒಂದು ವೇಳೆ ಒಬ್ಬ ಮಹಿಳೆ ಧೈರ್ಯ ತೋರಿಸಿ ಕಾನೂನಿನ ಮೊರೆ ಹೋದರೂ ಕಾನೂನಿನ ಜಟಿಲ ಪ್ರಕ್ರಿಯೆ ಹೇಗಿದೆಯೆಂದರೆ ಆರೋಪಿ ಹೆಸರಿಗಷ್ಟೇ ಶಿಕ್ಷೆ ಅನುಭವಿಸಿ ಹೊರಬಂದುಬಿಡುತ್ತಾನೆ, ಇಲ್ಲವೇ ಪ್ರಕರಣಗಳು ಅತ್ಯಂತ ವಿಳಂಬದಿಂದ ನಡೆದು ದೂರದಾರ ಮಹಿಳೆ ಮತ್ತವಳ ಮನೆಯವರ ಮಾನಸಿಕ ನೆಮ್ಮದಿಯನ್ನು ಕದಡಿಬಿಡುತ್ತದೆ. ಹೊಸ ಕಾನೂನುಗಳು, ನಿಯಮಗಳನ್ನು ತಂದರಷ್ಟೇ ಸಾಲದು, ಅಪರಾಧಿಗಳಿಗೆ ನಿಜಕ್ಕೂ ಪೂರ್ಣ ಶಿಕ್ಷೆಯಾಗುವಂತೆಯೂ ಅದರ ಸುತ್ತಲಿನ ಕಾನೂನು, ಅಧಿಕಾರ ಸಂರಚನೆಯನ್ನು ಬಿಗಿಗೊಳಿಸುವ ಅಗತ್ಯವಿದೆ. 

ಖೇದದ ಸಂಗತಿಯೆಂದರೆ ಎಷ್ಟೇ ಕಾನೂನುಗಳು ಬಂದರೂ ಬದಲಾವಣೆಯೇನೂ ಆಗದು ಎಂಬ ನಿರಾಶೆ ಜನ ಸಾಮಾನ್ಯರಲ್ಲಿ ಮಡುಗಟ್ಟಿರುವುದು. 2014ರಿಂದ 2016ರವರೆಗಿನ ಅವಧಿಯಲ್ಲಿ ರೈಲುಗಾಡಿಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಸಂಖ್ಯೆ 35 ಪ್ರತಿಶತಕ್ಕೆ ಏರಿದೆ ಎಂದು ಖುದ್ದು ರೈಲ್ವೆ ಸಚಿವರೇ ಹೇಳಿದ್ದಾರೆ. ಮಹಿಳಾ ಪೀಡಕರ ಸಂಖ್ಯೆ ಹೆಚ್ಚುತ್ತಲೇ ಇದೆಯೆಂದರೆ ನಮ್ಮ ಕಾನೂನುಗಳು ಅವರ ಹೆಡೆಮುರಿಕಟ್ಟಲು ಯಾವ ಮಟ್ಟದಲ್ಲಿ ಸೋತಿವೆ ಎನ್ನುವುದನ್ನು ಸೂಚಿಸುತ್ತದೆ. ಹೀಗಾಗಿ ಹೊಸ ಸಂಹಿತೆ ಬಂದರೆ ಅದರ ಅನುಷ್ಠಾನವೂ ಅಷ್ಟೇ ಸಕ್ಷಮವಾಗಿ ಆಗುವಂತಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next