ಹಾವೇರಿ: ಕಳೆದ ಎರಡು ದಶಕಗಳಲ್ಲಿ ಉತ್ತರ ಕರ್ನಾಟಕದ ಹೆಬ್ಟಾಗಿಲು ಹಾವೇರಿ ಜಿಲ್ಲೆಗೆ ಮಂಜೂರಾಗಿರುವ ರೈಲ್ವೆ ಯೋಜನೆಗಳಲ್ಲಿ ಕೆಲವು ರೈಲು ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿದ್ದರೆ, ಕೆಲವು ಯೋಜನೆಗಳು ನನೆಗುದಿಗೆ ಬಿದ್ದಿವೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಗದಗ-ಹಾವೇರಿ, ಶಿರಸಿ-ಹಾವೇರಿ, ರಾಣಿಬೆನ್ನೂರ-ಶಿವಮೊಗ್ಗ, ಹೊಸಪೇಟಿ-ಹಾವೇರಿ-ಕಾರವಾರ ರೈಲ್ವೆ ಮಾರ್ಗ ನಿರ್ಮಿಸುವಂತೆ ಹಲವು ದಶಕಗಳಿಂದ ಬೇಡಿಕೆ ಇದ್ದರೂ ಒಂದೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಲ್ಲಿ ಗದಗ-ಹಾವೇರಿ, ಶಿರಸಿ-ಹಾವೇರಿ ಮಾರ್ಗದ ರೈಲ್ವೆ ಯೋಜನೆಗಳು ಐದಾರು ವರ್ಷಗಳ ಹಿಂದೆಯೇ ಘೋಷಣೆಯಾಗಿದ್ದರೂ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರ ಪ್ರತಿ ಸಾರಿ ಬಜೆಟ್ ಮಂಡಿಸುವಾಗಲೂ ಜಿಲ್ಲೆಯ ಜನರು ಯಾವುದಾದರೂ ಬೇಡಿಕೆ ಈಡೇರುತ್ತವೆಯೇ ಎಂದು ಆಶಾಭಾವನೆಯಿಂದ ಕಾಯುತ್ತಿರುತ್ತಾರೆ. ಆದರೆ, ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಒಂದೂ ಬೇಡಿಕೆ ಈಡೇರಿದ ಉದಾಹರಣೆ ಇಲ್ಲ ಎಂಬ ಕೊರಗು ಜನರಲ್ಲಿದೆ.
ಗದಗ-ಹಾವೇರಿ ಮಾರ್ಗ ನನೆಗುದಿಗೆ: ಹಾವೇರಿ ಜಿಲ್ಲೆಗಿಂತ ಗದಗ ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಹಾವೇರಿ-ಗದಗ ರೈಲ್ವೆ ಮಾರ್ಗ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಗದಗ ಭಾಗದ ಜನತೆ ಬೆಂಗಳೂರಿಗೆ ತೆರಳಲು ಹುಬ್ಬಳ್ಳಿಗೆ ಹೋಗಿ ಮರಳಿ ಹಾವೇರಿ ಮಾರ್ಗವಾಗಿಯೇ ತೆರಳಬೇಕು. ಸದ್ಯ ಯಲವಿಗಿವರೆಗೆ ರೈಲು ಸಂಪರ್ಕವಿದ್ದು, ಯಲವಿಗಿಯಿಂದ ಗದಗವರೆಗೆ ಹೊಸ ಮಾರ್ಗ ನಿರ್ಮಿಸಿದರೆ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದರೆ, ಗದಗ-ಹಾವೇರಿ ರೈಲ್ವೆ ಮಾರ್ಗದ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಯೋಜನಾ ಆಯೋಗದ ಶಿಫಾರಸ್ಸಿನೊಂದಿಗೆ ರೈಲ್ವೆ ಬೋರ್ಡ್‌ಗೆ ವರದಿ ಕಳುಹಿಸಿ ಅನುಮೋದನೆ ಪಡೆಯಲಾಗಿದೆ ಎನ್ನಲಾಗುತ್ತಿದೆ.
ಈ ಮಾರ್ಗದ ನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಪಾಲಿನ ಅನುದಾನ ಮೀಸಲಿಟ್ಟಿದ್ದು, ಡಿಸೆಂಬರ್ ಅಂತ್ಯಕ್ಕೆ ಯೋಜನೆಯ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದೆ.
ಹಳ್ಳ ಹಿಡಿದ ಹಾವೇರಿ-ಶಿರಸಿ ರೈಲು ಮಾರ್ಗ: ಹಾವೇರಿಯಿಂದ ಕರಾವಳಿ ಭಾಗಕ್ಕೆ ರೈಲ್ವೆ ಮಾರ್ಗ ಕಲ್ಪಿಸುವ ಹಾವೇರಿ-ಶಿರಸಿ ರೈಲ್ವೆ ಮಾರ್ಗದ ಸಮೀಕ್ಷೆಗೆ ಹಲವು ವರ್ಷಗಳ ಹಿಂದೆಯೇ ಒಪ್ಪಿಗೆ ಸಿಕ್ಕಿತ್ತು. ಸರ್ವೇ ಕಾರ್ಯಕ್ಕೆ ಘೋಷಣೆಯಾದಾಗ ಈ ಭಾಗದ ಜನರು ಸಾಕಷ್ಟು ಕನಸು ಕಂಡಿದ್ದರು. 2017ರ ಏಪ್ರಿಲ್‌ಗೆ ಹಾವೇರಿ-ಶಿರಸಿ 80.80ಕಿಮೀ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ವರದಿ ತಯಾರಿಸುವ ಹಂತದಲ್ಲಿಯೇ ನನೆಗುದಿಗೆ ಬಿದ್ದಿದೆ. ಅಲ್ಲದೇ, ಈ ಯೋಜನೆಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾದ ಕಾರಣ ಯೋಜನೆ ಬಹತೇಕ ಹಳ್ಳ ಹಿಡಿದಂತಾಗಿದೆ.
ರಾಣಿಬೆನ್ನೂರ-ಶಿಕಾರಪುರ ಮಾರ್ಗ: ಮಲೆನಾಡಿನೊಂದಿಗೆ ರೈಲ್ವೆ ಸಂಪರ್ಕ ಕಲ್ಪಿಸಲು 2012ರಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರ ಹೊಸ ಮಾರ್ಗ ಸರ್ವೇಗೆ ಸಮ್ಮಿತಿ ದೊರೆತು ಸರ್ವೇ ಕಾರ್ಯ ಪೂರ್ಣಗೊಂಡು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ರೈಲ್ವೆ ಮಾರ್ಗದಿಂದ ಜಿಲ್ಲೆಯಲ್ಲಿ ನೂತನವಾಗಿ ಹಲಗೇರಿ, ರಟ್ಟಿಹಳ್ಳಿ, ಮಾಸೂರನಲ್ಲಿ ರೈಲ್ವೆ ನಿಲ್ದಾಣ ಆರಂಭಗೊಳ್ಳಲಿದೆ. ಜಿಲ್ಲೆಯ ರಟ್ಟಿಹಳ್ಳಿ ಹಾಗೂ ಹಿರೇಕೆರೂರ ತಾಲೂಕಿಗೆ ರೈಲ್ವೆ ಸಂಪರ್ಕ ಸಾಧ್ಯವಾಗಲಿದೆ. ಈ ಭಾಗದ ಜನರ ಕನಸು ಸಾಕಾರಗೊಳ್ಳಲು ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.
ಸಮನ್ವಯತೆ ಕೊರತೆಯಿಂದ ಯೋಜನೆ ವಿಳಂಬ
ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯತೆ ಕೊರತೆಯೇ ಹಲವಾರು ಯೋಜನೆಗಳ ವಿಳಂಬಕ್ಕೆ ಕಾರಣವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದಲ್ಲಿ ಯೋಜನೆಗಳ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಯೋಜನೆಗೆ ಭೂಸಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಈ ವೇಳೆ ಜಮೀನು ನೀಡಿದ ರೈತರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮನ್ವಯತೆ ಕೊರತೆಯಿಂದ ಸಮಸ್ಯೆ ಎದುರಾಗುತ್ತಿದೆ. ಕೆಲವು ರೈತರಿಗೆ ಪರಿಹಾರ ಹಣ ಬಂದರೆ, ಇನ್ನು ಕೆಲವು ರೈತರಿಗೆ ಹಣ ತಲುಪಿಲ್ಲ. ಹೀಗಾಗಿ, ರೈತರಿಂದ ಯೋಜನೆಗೆ ವಿರೋಧ ವ್ಯಕ್ತವಾಗುತ್ತದೆ. ಇದರಿಂದಾಗಿ ಯೋಜನೆಗಳ ವಿಳಂಬಕ್ಕೂ ಕಾರಣವಾಗುತ್ತಿದೆ. ಈ ಬಗ್ಗೆ ಸಂಸದರು ಧ್ವನಿ ಎತ್ತುವ ಮೂಲಕ ಕೇಂದ್ರದ ಗಮನಕ್ಕೆ ತರಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹಲವು ಯೋಜನೆಗಳು ಪ್ರಗತಿಯಲ್ಲಿ
ಗದಗ-ಯಲವಿಗಿ 56ಕಿಮೀ ರೈಲ್ವೆ ಮಾರ್ಗ ನಿಮಾ ಣಕ್ಕೆ ಸಂಬಂ ಧಿಸಿದಂತೆ ರೈಲ್ವೆ ಬೋರ್ಡ್‌ಗೆ ವರದಿ ಸಲ್ಲಿಸಿ ಅನುಮೋದನೆ ಪಡೆಯಲಾಗಿದ್ದು, ಶೀಘ್ರದಲ್ಲಿ ಈ ಮಾರ್ಗದ ಕಾಮಗಾರಿ ಆರಂಭಗೊಳ್ಳಲಿದೆ. ಹುಬ್ಬಳ್ಳಿ-ಹಾವೇರಿ-ಚಿಕ್ಕಜಾಜೂರ ಮಧ್ಯೆ 190ಕಿಮೀ ದ್ವಿಪಥ ರೈಲು ಮಾರ್ಗ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ಜೊತೆಗೆ ಎಲೆಕ್ಟ್ರಿಕ್ ಲೈನ್ ನಿರ್ಮಾಣದ ಕಾಮಗಾರಿಯೂ ನಡೆಯುತ್ತಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಯಲವಿಗಿ-ಗದಗ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಬೋರ್ಡ್‌ನಿಂದ ಅನುಮತಿ ದೊರೆತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಈ ಯೋಜನೆಗೆ ರಾಜ್ಯದ ಪಾಲಿನ ಅನುದಾನ ಮೀಸಲಿಟ್ಟಿದ್ದು, ಡಿಸೆಂಬರ್ ಅಂತ್ಯಕ್ಕೆ ಈ ಯೋಜನೆ ಕಾಮಗಾರಿ ಆರಂಭಗೊಳ್ಳಲಿದೆ. ರಾಣಿಬೆನ್ನೂರ-ಶಿಕಾರಿಪುರ ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಹಾವೇರಿ ಹಾಗೂ ರಾಣಿಬೆನ್ನೂರು ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೇಟರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಜೆಪಿ ಸರ್ಕಾರ ಅಧಿ ಕಾರಕ್ಕೆ ಬಂದ ನಂತರ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. –
ಶಿವಕುಮಾರ ಉದಾಸಿ, ಸಂಸದರು
ವೀರೇಶ ಮಡ್ಲೂರ