Advertisement

ರೈಲ್ವೆ ಯೋಜನೆ: ಶೀಘ್ರ ಭೂ ಸ್ವಾಧೀನಕ್ಕೆ ಚಾಲನೆ

10:53 AM Nov 23, 2018 | Team Udayavani |

ರಾಯಚೂರು: ರೈಲ್ವೆ ಇಲಾಖೆ ವಿಫಲ ಯೋಜನೆಗಳು, ಮುಗಿಯದ ಆದರ್ಶ ಗ್ರಾಮ ಕೆಲಸಗಳು, ಅರೆಬರೆಯಾಗಿರುವ ರಸ್ತೆಯಲ್ಲಿ ಟೋಲ್‌ಗೇಟ್‌ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾ ಅಭಿವೃದ್ಧಿ ಮತ್ತು ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಚರ್ಚೆಗೆ ಒಳಪಟ್ಟವು.

Advertisement

ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಯಚೂರು ಮತ್ತು ಕೊಪ್ಪಳ ಸಂಸದರಾದ ಬಿ.ವಿ. ನಾಯಕ, ಸಂಗಣ್ಣ ಕರಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯರು ಮಾತನಾಡಿ, ಮಾನ್ವಿಯಲ್ಲಿ ರೈಲ್ವೆ ಯೋಜನೆಗೆ ಯಾವ ಕಡೆ ಭೂ ಸ್ವಾಧೀನ ಮಾಡಿಕೊಳ್ಳುವರು ಎಂಬ ಮಾಹಿತಿ ಇಲ್ಲ. ಕರಡಿಗುಡ್ಡ ಹಾಗೂ ಮುಷ್ಟೂರು ಎರಡು ಕಡೆ ಈ ವಿಚಾರ ಚರ್ಚೆಯಾಗುತ್ತಿದೆ. ಇದರಿಂದ ಲೇಔಟ್‌ ಮಾಡಲು ಜನ ಹಿಂದೇಟಾಕುವಂತಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಡಿಸಿ ಗೋವಿಂದ ರೆಡ್ಡಿ, ಮಾನ್ವಿ ತಾಲೂಕಿನ 20 ಹಳ್ಳಿಗಳಲ್ಲಿ 650ಕ್ಕೂ ಅಧಿಕ ಎಕರೆ ಪ್ರದೇಶ
ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ವಾರದೊಳಗೆ ಸಂಬಂಧಿಸಿದ ರೈತರಿಗೆ ನೋಟಿಸ್‌ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಶಾಸಕ ಡಾ| ಶಿವರಾಜ ಪಾಟೀಲ ರೈಲ್ವೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವು ಜಾರಿಗೊಳಿಸಿದ ಒಂದೇ ಒಂದು ಯೋಜನೆ ಚಾಲನೆಯಲ್ಲಿಲ್ಲ. ಮಿಸ್ಟ್‌ ಕೂಲಿಂಗ್‌ ಒಂದು ತಿಂಗಳು ಕೂಡ ಕೆಲಸ ಮಾಡಲಿಲ್ಲ. ವೈ-ಫೈ ಕೂಡ ಸರಿಯಾಗಿ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಈ ರೀತಿ ದುಡ್ಡು ಹಾಳು ಮಾಡಲು ನಿಮಗೆ ಅಧಿಕಾರ ನೀಡಿದವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.

ರೈಲ್ವೆ ಇಲಾಖೆ ಇಂಜಿನಿಯರ್‌, ಕೆಲ ತಾಂತ್ರಿಕ ಸಮಸ್ಯೆಯಿಂದ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಸಮಜಾಯಿಷಿ ನೀಡಿದರು. ಈ ವೇಳೆ ಗೂಡ್‌ಶೆಡ್‌ ಸ್ಥಳಾಂತರ ವಿಚಾರ ಏನಾಯಿತು, ದೊಡ್ಡ ರೈಲ್ವೆ ನಿಲ್ದಾಣ ಇದ್ದರೂ ಪಾರ್ಕಿಂಗ್‌ಗೆ ಕೇವಲ 3500 ರೂ. ದರ ನಿಗದಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Advertisement

ಗೂಡ್‌ಶೆಡ್‌ ಸ್ಥಳಾಂತರ ವಿಚಾರ ಅಂತಿಮಗೊಂಡಿಲ್ಲ. ಆದರೆ, ಎಕ್ಸ್‌ಲೇಟರ್‌ ನಿರ್ಮಾಣ ಕಾರ್ಯ ಜನವರಿಯಲ್ಲಿ ಶುರು ಮಾಡುವುದಾಗಿ ಅಧಿಕಾರಿ ವಿವರಿಸಿದರು. ಸಂಸದರಿಬ್ಬರು ಆದರ್ಶ ಗ್ರಾಮಗಳ ಬಗ್ಗೆ ಮಾಹಿತಿ ಕೇಳಿದರು ವಿವರಣೆ ನೀಡಿದ ಯೋಜನಾಧಿಕಾರಿ ಶರಣಬಸವ, ಆರ್‌ಎಚ್‌ ಕ್ಯಾಂಪ್‌ನಲ್ಲಿ 370 ಕೆಲಸ ಮುಗಿದಿವೆ. ನಾಲ್ಕು ಅಂಗನವಾಡಿ ಮುಗಿದಿವೆ. ಜಾಗೀರ್‌ ವೆಂಕಟಾಪುರದಲ್ಲಿ 47 ಕೋಟಿಯಲ್ಲಿ 43 ಕೋಟಿ ಖರ್ಚಾಗಿದೆ ಎಂದರು.
 
ಶಾಸಕ ದದ್ದಲ್‌ ಬಸನಗೌಡ ಯಾವುದೇ ಕೆಲಸಗಳು ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ಜಮೀನು ಕೊಡಲು ಅಲ್ಲಿನ ರೈತರು ಮುಂದಾದರೂ ಯಾಕೆ ಪಡೆಯುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕೂಡಲೇ ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸೂಚಿಸಿದರು.

ರಾಯಚೂರು ತುಂಗಭದ್ರಾ ಎನ್‌ಎಚ್‌ ರಸ್ತೆ ನಿರ್ಮಾಣ ಇನ್ನೂ ಎಷ್ಟು ವರ್ಷ ಮಾಡುತ್ತೀರಿ ಎಂದು ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದರು. ನವೆಂಬರ್‌ಗೆ ಮುಗಿಸಬೇಕಿತ್ತು. ಸ್ವಲ್ಪ ವಿಳಂಬವಾಗಿದೆ ಎಂದು ಇಂಜಿನಿಯರ್‌ ತಿಳಿಸಿದರು. ಅಲ್ಲಿ ರಸ್ತೆಯೇ ಸರಿಯಾಗಿ ನಿರ್ಮಿಸಿಲ್ಲ. ಆಗಲೇ ಟೋಲ್‌ಗೇಟ್‌ ವಸೂಲಿ ಮಾಡಲು ಅಳವಡಿಸಿದ್ದೀರಾ ಎಂದು ಶಾಸಕ ಬಸನಗೌಡ ತರಾಟೆಗೆ ತೆಗೆದುಕೊಂಡರು. ನಂತರ ವಿವಿಧ ಇಲಾಖೆಗಳ ಕುರಿತು ಚರ್ಚಿಸಲಾಯಿತು.

ಶಾಸಕ ಡಿ.ಎಸ್‌.ಹೂಲಗೇರಿ, ಜಿಲ್ಲಾಧಿಕಾರಿ ಶರತ್‌ ಬಿ., ಸಿಇಒ ನಲಿನ್‌ ಅತುಲ್‌ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next