Advertisement

ರೈಲ್ವೆ ಕ್ರಾಸಿಂಗ್‌ ಕಾಮಗಾರಿ ಶೀಘ್ರ ಪೂರ್ಣ

04:24 PM Mar 17, 2020 | Suhan S |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ನೀರು ಹರಿಯಲು ಪ್ರಮುಖ ಅಡ್ಡಿಯಾಗಿದ್ದ ಅಜ್ಜಂಪುರ ಬಳಿಯ ರೈಲ್ವೆ ಕ್ರಾಸಿಂಗ್‌ ಕಾಮಗಾರಿಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.

Advertisement

ಸಂಸದ ಎ. ನಾರಾಯಣಸ್ವಾಮಿ ನೇತೃತ್ವದಲ್ಲಿ ಸೋಮವಾರ ಮೈಸೂರಿನ ನೈರುತ್ಯ ರೈಲ್ವೆ ಮುಖ್ಯ ಕಚೇರಿಯಲ್ಲಿ ವಿಭಾಗಿಯ ವ್ಯವಸ್ಥಾಪಕರಾದ ಅಪರ್ಣಾ ಗಾರ್ಗ್‌ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಾಮಗಾರಿ ವಿಳಂಬವಾಗುತ್ತಿದ್ದ ಕಾರಣಕ್ಕೆ ಸತತ ನಾಲ್ಕು ಸಭೆಗಳನ್ನು ನಡೆಸಿದ ಪರಿಣಾಮ ಇಂದು ಕಾಮಗಾರಿಗೆ ಇದ್ದ ಅಡ್ಡಿ ತಾರ್ಕಿಕವಾಗಿ ಅಂತ್ಯ ಕಂಡಂತಾಗಿದೆ ಎಂದು ಸಂಸದ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಕಾಮಗಾರಿಯ ವಿಳಂಬ ಕಾರಣಕ್ಕೆ ಗುತ್ತಿಗೆದಾರರ ಟೆಂಡರ್‌ ಅವಧಿ ಮುಕ್ತಾಯವಾಗಿತ್ತು. ಈಗ ಅದನ್ನು ಮತ್ತೆ ಸರಿಪಡಿಸಿ ಕಾಮಗಾರಿ ಆರಂಭಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಜೂನ್‌ ಅಂತ್ಯದ ವೇಳೆಗೆ ರೈಲು ಹಳಿಯ ಕೆಳ ಭಾಗದಲ್ಲಿ ನೀರು ಹರಿಯುವಂತೆ ಸೇತುವೆ ನಿರ್ಮಾಣ ಮಾಡಿಕೊಡುವುದಾಗಿ ಗುತ್ತಿಗೆದಾರರು ಒಪ್ಪಿದ್ದಾರೆ. ಗೊಂದಲದ ಗೂಡಾಗಿದ್ದ ಅಜ್ಜಂಪುರ ಬಳಿಯ ಕಾಮಗಾರಿ ಈ ವಾರದಲ್ಲೇ ಆರಂಭವಾಗುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಕಾಮಗಾರಿ ಪದೇ ಪದೇ ವಿಳಂಬವಾದರೆ ನೀರನ್ನು ಹೇಗೆ ಬಿಡಲು ಸಾಧ್ಯ. ಇದೇ ಕಾರಣಕ್ಕೆ ಅಧಿಕಾರಿಗಳು, ಗುತ್ತಿಗೆದಾರರ ಬೆನ್ನು ಬಿದ್ದು ಕೆಲಸ ಮಾಡಿಸುತ್ತಿದ್ದೇನೆ ಎಂದು ಸಂಸದರು ಹೇಳಿದರು.

ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಭದ್ರಾ ಮೇಲ್ದಂಡೆ ಅಧಿಕಾರಿಗಳ ಸಭೆಯಲ್ಲಿ ನೈರುತ್ಯ ರೈಲ್ವೆ ಹಿರಿಯ ಅಭಿಯಂತರ ಕೆ. ರವಿಚಂದ್ರನ್‌, ವಿಭಾಗೀಯ ಅಭಿಯಂತರ ವೆಂಕಟರಾವ್‌, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್‌ ಶಿವಕುಮಾರ್‌ ಹಾಗೂ ಗುತ್ತಿಗೆದಾರ ಕೋಟೇಶ್ವರ ರಾವ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next