ನವದೆಹಲಿ: ದೇಶಾದ್ಯಂತ ಸುಮಾರು 4 ಸಾವಿರಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿರುವ ವೈಫೈಗೆ ಸಂಬಂಧಿಸಿ ಪ್ರಿಪೇಯ್ಡ್ ಪ್ಲಾನ್ ಅನ್ನು ರೈಲ್‌ಟೆಲ್ ಸಂಸ್ಥೆ ಅನಾವರಣಗೊಳಿಸಿದೆ. ಪ್ರಸ್ತುತ ಈ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ದಿನಕ್ಕೆ 30 ನಿಮಿಷಗಳ ಕಾಲ 1ಎಂಬಿಪಿಎಸ್ ವೇಗದಲ್ಲಿ ಉಚಿತವಾಗಿ ವೈಫೈ ಸೇವೆ ಪಡೆಯುತ್ತಿದ್ದಾರೆ.
ಇನ್ನು ಮುಂದೆ, ಹೆಚ್ಚಿನ ವೇಗದಲ್ಲಿ ಅಂದರೆ 34 ಎಂಬಿಪಿಎಸ್ ವೇಗದಲ್ಲಿ ವೈಫೈ ಪಡೆಯಬೇಕೆಂದರೆ ಪ್ರಯಾಣಿಕರು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಗ್ರಾಹಕರು ನೆಟ್ ಬ್ಯಾಂಕಿಂಗ್, ವ್ಯಾಲೆಟ್, ಕ್ರೆಡಿಟ್ ಕಾರ್ಡ್ ಮೂಲಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಪ್ರಸ್ತುತ ರೈಲ್‌ಟೆಲ್ ಕಾರ್ಪೊರೇಷನ್ ದೇಶದ 5950ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ವೈಫೈಗೆ ಗ್ರಾಹಕರು ಹಣ ಪಾವತಿ ಮಾಡಬೇಕಾದ ಕಾರಣ, ರೈಲ್ವೆ ಇಲಾಖೆಯು ವಾರ್ಷಿಕ 10-15 ಕೋಟಿ ರೂ.ಗಳ ಆದಾಯ ಪಡೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಇರಾಕ್‌ಗೆ ಪೋಪ್ ಭೇಟಿ :ಕ್ರಿಶ್ಚಿಯನ್ನರ ನೆರವಿನಿಂದ ಇಸ್ಲಾಂ ರಾಷ್ಟ್ರ ಮರುಕಟ್ಟುವ ಚಿಂತನೆ
ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಳ ತಾತ್ಕಾಲಿಕ
ಕೆಲವು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಟಿಕೆಟ್ ದರವನ್ನು 50 ರೂ.ಗಳಿಗೆ ಹೆಚ್ಚಳ ಮಾಡಿರುವುದು ತಾತ್ಕಾಲಿಕ ನಿರ್ಧಾರವಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟನೆ ನೀಡಿದೆ.