Advertisement

Pandeshwar, ಹೊಗೆಬಜಾರ್‌ ಮಾರ್ಗಕ್ಕೆ ರೈಲೇ ವಿಲನ್‌!

07:52 PM Aug 22, 2024 | Team Udayavani |

ಪಾಂಡೇಶ್ವರ: ಒಂದೇ ದಿನದಲ್ಲಿ 8 ರೈಲುಗಳು ಆಗಮನ-ನಿರ್ಗಮನ ಸೇರಿ 16 ಬಾರಿ ಅತ್ತಿಂದಿತ್ತ ಸಂಚಾರ. ಒಮ್ಮೆ ಸಂಚರಿಸುವಾಗ ಕನಿಷ್ಠ 15 ನಿಮಿಷ ರೈಲು ಗೇಟ್‌ ಬಂದ್‌-ವಾಹನ ಸಂಚಾರ ಸ್ತಬ್ಧ. ಹೀಗಾಗಿ 16 ಬಾರಿ ರೈಲು ಅತ್ತಿಂದಿತ್ತ ಹೋಗಲು ದಿನದಲ್ಲಿ ಬರೋಬ್ಬರಿ 4 ಗಂಟೆ ವಾಹನ ಸಂಚಾರವೇ ಬಂದ್‌! ಗೇಟ್‌ ಆಚೀಚೆ ಹಿಡಿಶಾಪ ಹಾಕುವ ವಾಹನ ಸವಾರರು…

Advertisement

ಇದು, ಮಂಗಳೂರಿನ ನಿತ್ಯ ವಾಹನ ದಟ್ಟಣೆಯ ಹೃದಯ ಭಾಗವಾದ ಪಾಂಡೇಶ್ವರ ಹಾಗೂ ಹೊಗೆಬಜಾರ್‌ ರೈಲ್ವೇ ಲೆವೆಲ್‌ ಕ್ರಾಸಿಂಗ್‌ನಲ್ಲಿ ರೈಲ್ವೇ ಇಲಾಖೆ ನಿರ್ಮಿಸುವ ನಿತ್ಯದ ಅಘೋಷಿತ ಬಂದ್‌ ಪರಿಸ್ಥಿತಿ!

ಹೊಗೆಬಜಾರ್‌ನ ಗೂಡ್ಸ್‌ಶೆಡ್‌ ಈಗ ಗೂಡ್ಸ್‌ ರೈಲು ನಿಲುಗಡೆಯ ಜತೆಗೆ ದಕ್ಷಿಣ ರೈಲ್ವೆಯ ಪ್ರಯಾಣಿಕ ರೈಲುಗಳ ತಂಗುದಾಣ ವಾಗಿ ಬದಲಾಗಿದೆ. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ಈ ಮೊದಲು ಒಂದೆರಡು ಗೂಡ್ಸ್‌ ರೈಲುಗಳು ಗೂಡ್ಸ್‌ಶೆಡ್‌ಗೆ ಹೋಗು ತ್ತಿದ್ದರೆ, ಈಗ ದಿನದಲ್ಲಿ 8ಕ್ಕೂ ಅಧಿಕ ಪ್ರಯಾಣಿಕ ರೈಲುಗಳು ಸಂಚರಿಸುತ್ತಿದೆ. ರೈಲುಗಳ ನಿರ್ವ ಹಣೆ ಇಲ್ಲಿ ನಡೆಯುತ್ತದೆ. ಈ ಕಾರಣದಿಂದ ಪಾಂಡೇಶ್ವರ-ಹೊಗೆಬಜಾರ್‌ನ ರೈಲ್ವೇ ಕ್ರಾಸಿಂಗ್‌ ಬಳಿ ರೈಲು ಪ್ರಯಾಣಿಸುವ ಸಂದರ್ಭ ದಿನದಲ್ಲಿ ವಾಹನ ಸವಾರರು ತಾಸುಗಟ್ಟಲೆ ನಿಲ್ಲುವ ಪ್ರಮೇಯ ಉಂಟಾಗಿದೆ.

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ!

Advertisement

ನಗರ ಮಧ್ಯೆಯಿಂದ ಗೂಡ್ಸ್‌ಶೆಡ್‌ಗೆ ತೆರಳುವ ರೈಲು ಹಳಿಯಲ್ಲಿ ಹಲವು ಬಾರಿ ಹಿಂದೆ ಅನಾವಶ್ಯಕವಾಗಿ ಗೂಡ್ಸ್‌ ರೈಲು ಎಂಜಿನ್‌ಗಳ ಓಡಾಟ, ಗೂಡ್ಸ್‌ ರೈಲುಗಳ ನಿರಂತರ ಓಡಾಟದಿಂದಾಗಿ ಸ್ಥಳೀಯರಿಗೆ ಸಮಸ್ಯೆ ಆಗುತ್ತಿತ್ತು. ಮುಂದೆ “ಗೂಡ್ಸ್‌ಶೆಡ್‌’ ಉಳ್ಳಾಲಕ್ಕೆ ಸ್ಥಳಾಂತರವಾದ ಪರಿಣಾಮ ಇಲ್ಲಿ ಕಿರಿಕಿರಿ ತಪ್ಪಿತು ಎಂದೇ ಭಾವಿಸಲಾಗಿತ್ತು. ಆದರೆ, ಈಗ ಗೂಡ್ಸ್‌ ರೈಲಿನ ಜತೆಗೆ ಪ್ರಯಾಣಿಕ ರೈಲುಗಳ ನಿಲುಗಡೆ ಮಾಡುತ್ತಿರುವ ಪರಿಣಾಮ ಸ್ಥಳೀಯರಿಗೆ ಸಮಸ್ಯೆ ಮತ್ತೆ ವಕ್ಕರಿಸಿದೆ.

ಏನು ಮಾಡಬಹುದು?

ಶಾಶ್ವತ ಪರಿಹಾರವಾಗಿ ಗೂಡ್ಸ್‌ ಶೆಡ್‌ ಅನ್ನು ಇತರ ಕಡೆಗೆ ಸಂಪೂರ್ಣವಾಗಿ ಸ್ಥಳಾಂತರಿಸುವುದು.

ಪಾಂಡೇಶ್ವರ-ಹೊಗೆ ಬಜಾರ್‌ನಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗಲು ರೈಲ್ವೇ ಓವರ್‌ಪಾಸ್‌ ನಿರ್ಮಾಣ

ತಾತ್ಕಾಲಿಕವಾಗಿ ವಾಹನ ದಟ್ಟಣೆಯ ಅವಧಿ (ಬೆಳಗ್ಗೆ-ಸಂಜೆ) ರೈಲು ಸಂಚಾರದ ಸಮಯವನ್ನು ತುರ್ತಾಗಿ ಬದಲಾಯಿಸಬೇಕು.

ಪಾಂಡೇಶ್ವರ, ಹೊಗೆ ಬಜಾರ್‌ ಹಳಿದಾಟುವ ಪ್ರದೇಶವನ್ನು ಸಾಧ್ಯವಿದ್ದಷ್ಟು ಅಗಲಗೊಳಿಸುವುದು.

ಪ್ರಮುಖ ರಸ್ತೆಯಲ್ಲಿ  ಸಂಚಾರ ಸ್ತಬ್ಧ

ಜಪ್ಪು, ಮಂಗಳಾದೇವಿ, ಬೋಳಾರ, ಎಮ್ಮೆಕೆರೆ, ಹೊಗೆ ಬಜಾರ್‌ ಭಾಗದ ಜನರಿಗೆ ನಗರ ಪ್ರವೇಶಕ್ಕೆ ಇದುವೇ ಪ್ರಮುಖ ರಸ್ತೆ.

ತೊಕ್ಕೊಟ್ಟು, ಮೋರ್ಗನ್‌ಗೇಟ್‌ ಕಡೆಯಿಂದ ಸ್ಟೇಟ್‌ ಬ್ಯಾಂಕ್‌, ಬಂದರಿಗೆ ಬರುವವರು ಬಳಸುವ ರಸ್ತೆ ಇದು.

ಪಾಂಡೇಶ್ವರ ಮತ್ತು ಹೊಗೆ ಬಜಾರ್‌ನಲ್ಲಿ ರೈಲ್ವೇ ಕ್ರಾಸಿಂಗ್‌ ಬಂದ್‌ ಆದರೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಸಂಪೂರ್ಣ ಸ್ತಬ್ಧ.

ಅದರಲ್ಲೂ ಬೆಳಗ್ಗೆ 7 ರಿಂದ 10.30ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆಯವರೆಗೆ ವಾಹನ ದಟ್ಟಣೆ ಅಧಿಕ.

ರೈಲ್ವೇ ಹಳಿಯ ಅಕ್ಕ ಪಕ್ಕದಲ್ಲಿಯೇ ಸುಮಾರು 8 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇರುವ ಕಾರಣದಿಂದ ಮಕ್ಕಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ರೈಲ್ವೇ ಗೇಟ್‌ನಿಂದಾಗಿ ಬೆಳಗ್ಗೆ ಹಲವು ಮಕ್ಕಳಿಗೆ ನಿಗದಿತ ಸಮಯಕ್ಕೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಪಕ್ಕದಲ್ಲಿರುವ ಅಗ್ನಿಶಾಮಕದಳದ ವಾಹನ ತುರ್ತಾಗಿ ಹೋಗಲು ಇಲ್ಲಿ ಸಾಧ್ಯವಿಲ್ಲ.

ಮಂಗಳಾದೇವಿ ದೇವಸ್ಥಾನ, ನೆಕ್ಸಸ್‌

ಫಿಜಾ ಮಾಲ್‌ ಸಹಿತ ವಿವಿಧ ಮುಖ್ಯ ಕೇಂದ್ರ ಇಲ್ಲೇ ಇರುವುದರಿಂದ ಸವಾರರಿಗೆ ಇಲ್ಲಿ ಕಾಯುವ ಸ್ಥಿತಿ.

ಸಚಿವರು ಬಂದರೂ… ರೈಲು ನಿಂತಿಲ್ಲ !

ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಇತ್ತೀಚೆಗೆ ಮಂಗಳೂರು ಭೇಟಿ ನೀಡಿದ ಸಂದರ್ಭ ಈ ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಗಿತ್ತು. ಅದಾದ ಕೆಲವೇ ದಿನದಲ್ಲಿ ಗೂಡ್ಸ್‌ಶೆಡ್‌ಗೆ ಬರುವ ರೈಲುಗಳ ಸಂಖ್ಯೆ ಇಳಿಕೆಯಾಗಿತ್ತು. ಸಮಸ್ಯೆ ನಿವಾರಣೆ ಆಯಿತು ಎಂದು ಆಗ ಕೆಲವರು ಅಂದುಕೊಂಡಿದ್ದರು. ಆದರೆ, ಆ ವೇಳೆಗೆ ಗುಡ್ಡ ಕುಸಿತ ಕಾರಣದಿಂದ ಮಂಗಳೂರು-ಬೆಂಗಳೂರು ರೈಲು ಸ್ಥಗಿತವಾಗಿ ರೈಲುಗಳಿಲ್ಲದೆ ಗೂಡ್ಸ್‌ಶೆಡ್‌ಗೆ ಬರುವ ರೈಲು ಕಡಿಮೆಯಾಗಿತ್ತು; ಈಗ ಮತ್ತೆ ಹಿಂದಿನಂತೆ ರೈಲುಗಳ ಸಂಖ್ಯೆ ಏರಿಕೆಯಾಗುತ್ತಿದೆ!

ಪ್ರಯಾಣಿಕರಿಗೆ, ನಿವಾಸಿಗಳಿಗೆ ಅನ್ಯಾಯ

ದಿನದಲ್ಲಿ 8 ರೈಲುಗಳಂತೆ 16 ಬಾರಿ ಅತ್ತಿಂದಿತ್ತ ಹೋಗುವಾಗ ಗೇಟ್‌ ಹಾಕಿ ಪ್ರಯಾಣಿಕ ವಾಹನಗಳನ್ನು ನಿಲ್ಲಿಸಲಾಗುತ್ತದೆ. ದಿನದಲ್ಲಿ 2 ರೈಲು ಮಾತ್ರ ಗೂಡ್ಸ್‌ಶೆಡ್‌ ಹೋಗುತ್ತಿದೆ ಎಂದು ರೈಲು ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ರೈಲು ಹಳಿಯ ಬಳಿಗೆ 1 ದಿನ ಅಧಿಕಾರಿಗಳು ಬಂದು ನೋಡಲಿ. ಎಷ್ಟು ರೈಲು ಸಂಚರಿಸುತ್ತದೆ ಹಾಗೂ ಜನರಿಗೆ ಏನು ಸಮಸ್ಯೆ ಆಗುತ್ತಿದೆ ಎಂಬುದು ನೋಡಲಿ. ಶಾಲೆ ಕಾಲೇಜಿಗೆ, ಕೆಲಸಕ್ಕೆ ಹೋಗುವವರು ಸಮಸ್ಯೆ ಅನುಭವಿಸುತ್ತಿದ್ದಾರೆ. ರೈಲ್ವೇ ಅಧಿಕಾರಿಗಳು ಮಾನವೀಯತೆ ಪ್ರದರ್ಶಿಸಿ ಸಮಸ್ಯೆ ಪರಿಹರಿಸಲಿ. -ದಿವಾಕರ ಪಾಂಡೇಶ್ವರ, ಸ್ಥಳೀಯ ಕಾರ್ಪೊರೇಟರ್‌

ವಿದ್ಯಾರ್ಥಿಗಳು, ಕಾರ್ಮಿಕರಿಗೆ ಸಮಸ್ಯೆ

ಶಾಲಾ-ಕಾಲೇಜುಗಳು, ಧಾರ್ಮಿಕ ಕೇಂದ್ರಗಳು, ಖಾಸಗಿ ಸಂಸ್ಥೆಗಳು ಇರುವ ಪ್ರದೇಶಕ್ಕೆ ಸಂಪರ್ಕ ರಸ್ತೆಯೇ ಪಾಂಡೇಶ್ವರ-ಹೊಗೆ ಬಜಾರ್‌ ರೈಲ್ವೇ ಗೇಟ್‌. ಜಪ್ಪು, ಬೋಳಾರ, ಮಂಗಳಾದೇವಿ, ಉಳ್ಳಾಲ, ತಲಪಾಡಿ, ಕೊಣಾಜೆ ಭಾಗದ ಜನರಿಗೆ ಇದೇ ರಸ್ತೆ ಮುಖ್ಯ ಸಂಪರ್ಕಕ್ಕೆ ದಾರಿ. ಬಂದರಿಗೂ ಇದೇ ರಸ್ತೆಯೇ ಆಧಾರ. ಮೊದಲು ಗೂಡ್ಸ್‌ರೈಲು ಹೋಗುವಾಗಲೇ ಇಲ್ಲಿ ವಾಹನ ಸವಾರರಿಗೆ ಕಷ್ಟವಾಗುತ್ತಿತ್ತು. ಆದರೆ ಈಗ ಪ್ರಯಾಣಿಕ ರೈಲು ಎಡೆಬಿಡದೆ ಬರುವ ಕಾರಣದಿಂದ ನಾಗರಿಕರಿಗೆ ಬಾರೀ ಸಮಸ್ಯೆಗಳಾಗುತ್ತಿದೆ.

-ಅಬ್ದುಲ್‌ ಲತೀಫ್‌, ಕಾರ್ಪೊರೇಟರ್‌

ವರದಿ: ದಿನೇಶ್‌ ಇರಾ

ಚಿತ್ರ: ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next