ಸಿಂಧನೂರು: ಮೆಹಬೂಬನಗರ- ಗಿಣಿಗೇರಾ ರೈಲ್ವೆ ಮಾರ್ಗದಿಂದ ಭತ್ತದ ಬೀಡು ಖ್ಯಾತಿಯ ತಾಲೂಕುಗಳು ಒಳಗೊಂಡು ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ ವಾಣಿಜ್ಯ, ವ್ಯಾಪಾರ ವೃದ್ಧಿಯಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಮಂಗಳವಾರ ನಗರದ ತಾಲೂಕು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 165 ಕಿ.ಮೀ. ಉದ್ದದ ಈ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಈಗಾಗಲೇ ಕಾರಟಗಿವರೆಗೆ ಪೂರ್ಣಗೊಂಡಿದೆ. ಅಲ್ಲಿಂದ ಸಿಂಧನೂರಿನವರಿಗೆ ಪ್ರಗತಿಯಲ್ಲಿದೆ. ಸಿಂಧನೂರಿನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಸ್ಟೇಷನ್ ಕಾಮಗಾರಿಗಳು ನಡೆಯಲಿವೆ ಎಂದರು.
ಗಂಗಾವತಿ, ಕಾರಟಗಿ, ಸಿಂಧನೂರು, ಸಿರುಗುಪ್ಪ, ಮಾನ್ವಿ ಸೇರಿದಂತೆ ಸುತ್ತಲಿನ ನಗರಗಳಿಗೆ ರೈಲ್ವೆ ಮಾರ್ಗದಿಂದ ಅನುಕೂಲವಾಗಲಿದೆ. ಕಡಿಮೆ ವೆಚ್ಚದಲ್ಲಿ ದೂರ ಊರುಗಳಿಗೆ ಪ್ರಯಾಣ ಮಾಡಬಹುದು. ಈಗಾಗಲೇ ಗಂಗಾವತಿಯಿಂದ ರೈಲು ಓಡಿಸಲಾಗಿದ್ದು, ಆಟೋ ದರಕ್ಕಿಂತ ಕಡಿಮೆ ಎಂದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೂನ್ 22ರ ವೇಳೆಗೆ ಸಿಂಧನೂರುವರೆಗೂ ರೈಲು ಓಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಂದಾಜು 2,565 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ 1,350 ಕೋಟಿ ರೂ. ಖರ್ಚಾಗಿದೆ. ಬಾಕಿ ಕೆಲಸಗಳು ಕೂಡ ನಡೆಯಲಿವೆ ಎಂದರು.
ಬಿಜೆಪಿ ಸರಕಾರದ ಕೊಡುಗೆ: 2014ಕ್ಕೂ ಮುನ್ನ ಈ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಕುಂಠಿತವಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮತ್ತು ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸಹಕಾರದಿಂದ ಯೋಜನೆ ಸಿಂಧನೂರು ತನಕ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಂತಿಗೆ ಇರುವುದರಿಂದ ಎರಡು ಸರಕಾರ ಕೈಜೋಡಿಸಿದ್ದರಿಂದ ಪ್ರಗತಿ ಸಾಧ್ಯವಾಗಿದೆ. ನನ್ನ ಅವಧಿ ಪೂರ್ಣಗೊಳ್ಳುವುದರೊಳಗೆ ಕಾಮಗಾರಿ ಸಂಪೂರ್ಣಗೊಳಿಸುವ ಗುರಿಯಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಪಿಎಲ್‌ಡಿಬಿ ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡಬವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಸಿದ್ದಾಂತಿಮಠ, ಮಲ್ಲಿಕಾರ್ಜುನ ಜಿನೂರು, ಲಿಂಗರಾಜ್ ಸೇರಿದಂತೆ ಇತರರು ಇದ್ದರು.