Advertisement

ಹಾರೋಪುರದಲ್ಲಿ ರೈಲು ಮಾದರಿ ಸರ್ಕಾರಿ ಶಾಲೆ!

03:34 PM Jul 08, 2018 | |

ಮೈಸೂರು: ಬಸ್‌ ಸೌಕರ್ಯ ಕೂಡ ಇಲ್ಲದ ನಂಜನಗೂಡು ತಾಲೂಕು ಹಾರೋಪುರ ಗ್ರಾಮದಲ್ಲಿ ರೈಲು ಬಂದು ನಿಂತಿದೆ.! ಹಳಿಯೇ ಇಲ್ಲದ ಇಲ್ಲಿಗೆ ರೈಲು ಹೇಗೆ ಬಂತು ಎಂದು ಅಚ್ಚರಿಗೊಳ್ಳಬೇಡಿ. ಈ ರೈಲು ಗ್ರಾಮಸ್ಥರನ್ನು ಇನ್ನೊಂದು ಊರಿಗೆ ಕರೆದೊಯ್ಯಲು ಬಂದಿರುವುದಲ್ಲ, ಗ್ರಾಮದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ದಿಕ್ಕಿಗೆ ಕರೆದೊಯ್ಯಲು ಜ್ಞಾನ ದೇಗುಲಕ್ಕೆ ಮಕ್ಕಳನ್ನು ಆಕರ್ಷಿಸಲು ಶಾಲೆಯ ಶಿಕ್ಷಕರ ಪರಿಕಲ್ಪನೆಯಲ್ಲಿ ಮೂಡಿರುವ ರೈಲಿನ ಚಿತ್ರಣವಿದು.

Advertisement

ನಂಜನಗೂಡು ತಾಲೂಕಿನ ಹಾರೋಪುರ ಗ್ರಾಮಕ್ಕೆ ಇಂದಿಗೂ ಸಾರ್ವಜನಿಕ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲ. ಈ ಗ್ರಾಮಕ್ಕೆ ಹೋಗಬೇಕಾದರೆ ಬಿಳುಗಲಿ ಗ್ರಾಮದ ಬಸ್‌ ನಿಲುಗಡೆಯಿಂದ 4 ಕಿ.ಮೀ, ತಾಯೂರು ಗ್ರಾಮದ ಬಸ್‌ ನಿಲುಗಡೆಯಿಂದ 4 ಕಿ.ಮೀ ಸೇರಿದಂತೆ ಯಾವ ಕಡೆಯಿಂದ ಬಂದು ಬಸ್‌ ಇಳಿದರೂ ಸುಮಾರು 4 ಕಿ.ಮೀ ಯಷ್ಟು ದೂರ ಕಾಲ್ನಡಿಗೆಯಲ್ಲೇ ತಲುಪಬೇಕು.

ಇಂತಹ ಸಾರಿಗೆ ಸಂಪರ್ಕ ಇಲ್ಲದ ಹಾರೋಪುರ ಗ್ರಾಮದಲ್ಲಿ ಸರ್ಕಾರ 1 ರಿಂದ 7ನೇ ತರಗತಿವರೆಗಿನ ಹಿರಿಯ ಪ್ರಾಥಮಿಕ ಶಾಲೆ ತೆರೆದಿದೆ. ಗ್ರಾಮದಲ್ಲಿ ಈ ಹಿಂದೆ ಪರಿಶಿಷ್ಟ ಜಾತಿಯವರು ವಾಸಿಸುವ ಬೀದಿಯಲ್ಲಿ ಎರಡು ಕೊಠಡಿ, ಉಪ್ಪಾರ ಜನಾಂಗದವರು ವಾಸಿಸುವ ಬೀದಿಯಲ್ಲಿ ಎರಡು ಕೊಠಡಿ ನಿರ್ಮಿಸಲಾಗಿತ್ತು. ಆದರೆ, ಪರಿಶಿಷ್ಟ ಜಾತಿಯವರ ಬೀದಿಯಲ್ಲಿನ ಶಾಲಾ ಕೊಠಡಿ ಇರುವಲ್ಲಿ ಆಟದ ಮೈದಾನ ಇರಲಿಲ್ಲ. 

ಹೀಗಾಗಿ ಖಾಸಗಿ ಕಂಪನಿಯವರು ಉಪ್ಪಾರ ಜನಾಂಗದವ ಬೀದಿಯಲ್ಲಿ ಹೆಚ್ಚುವರಿ ಶಾಲಾ ಕೊಠಡಿಯನ್ನು ಕಟ್ಟಿಸಿಕೊಟ್ಟಿದ್ದರಿಂದ ಈ ಶೈಕ್ಷಣಿಕ ವರ್ಷದಿಂದ ಪರಿಶಿಷ್ಟ ಜಾತಿಯವರ ಬೀದಿಯಲ್ಲಿದ್ದ ಶಾಲಾ ಕೊಠಡಿಯ ಮಕ್ಕಳನ್ನೂ ಇಲ್ಲಿಗೇ ವರ್ಗಾಯಿಸಲಾಗಿದೆ. 1 ರಿಂದ 7ನೇ ತರಗತಿಯವರೆಗೆ 55 ಮಕ್ಕಳಿದ್ದು, ಎರಡೂ ಕೋಮಿನ ಮಕ್ಕಳೂ ಪಾಠ-ಆಟ-ಬಿಸಿಯೂಟದಲ್ಲಿ ಅನ್ಯೋನ್ಯವಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಬಸವ ನಾಯಕ ಹೇಳುತ್ತಾರೆ.

ಆಕರ್ಷಣೆಗೆ ರೈಲು ಭೋಗಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಇಲ್ಲಿ ಎಲ್ಲಾ ಸೌಲಭ್ಯ ಇರುವುದರಿಂದ ಇನ್ನಷ್ಟು ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಹೊರ ನೋಟದಿಂದಲೂ ಶಾಲಾ ಕಟ್ಟಡ ಆಕರ್ಷಕವಾಗಿ ಕಾಣಬೇಕು ಎಂಬ ಉದ್ದೇಶದಿಂದ ಸಹ ಶಿಕ್ಷಕ ದೊರೆಸ್ವಾಮಿಯವರ ಪರಿಕಲ್ಪನೆಯಂತೆ ಇನ್ನಿಬ್ಬರು ಶಿಕ್ಷಕರಾದ ತರನಂ ಖಾನ್‌ ಹಾಗೂ ನೇತ್ರಾವತಿಯವರೂ ಕೈ ಜೋಡಿಸಿ, ಶಾಲೆಯ ನಾಲ್ವರೂ ಶಿಕ್ಷಕರೂ ಒಟ್ಟಾಗಿ ನಮ್ಮ ಕೈಯಿಂದಲೇ ಹಣ ಹಾಕಿ ಸುಮಾರು 25 ಸಾವಿರ ರೂ. ವೆಚ್ಚದಲ್ಲಿ ರೈಲು ಭೋಗಿಯ ಚಿತ್ರ ಬರೆಸಿದ್ದೇವೆ. 

Advertisement

ಇನ್ನೂ ನಲಿ-ಕಲಿ ಕೊಠಡಿಯ ಕೆಲಸ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ದಾನಿಗಳಿಂದ ಶಾಲೆಗೆ ಗಣಕಯಂತ್ರ(ಕಂಪ್ಯೂಟರ್‌), ಆಟಿಕೆ ಮತ್ತು ಕ್ರೀಡಾ ಸಾಮಗ್ರಿಗಳನ್ನು ಹೊಂದಿಸಬೇಕು ಎಂಬ ಉದ್ದೇಶವಿದೆ. ಶಾಲೆಯಲ್ಲಿ ಎರಡು ಶೌಚಾಲಯವಿದೆ. ಸುಮಾರು 20 ಮೀಟರ್‌ ಕಾಂಪೌಂಡ್‌ ನಿರ್ಮಾಣ ಆಗಿದ್ದು, ಇನ್ನೂ ಕಾಂಪೌಂಡ್‌ ಪೂರ್ಣ ಆಗಬೇಕಿದೆ. ಸ್ಥಳೀಯ ಗ್ರಾಮ ಪಂಚಾಯ್ತಿಯವರು ನಮ್ಮ ಮನವಿಗೆ ಸ್ಪಂದಿಸಿ ಕೆಲಸ ಮಾಡಿಕೊಡುತ್ತಿದ್ದಾರೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಬಸವನಾಯಕ.

ಗ್ರಾಮೀಣ ಪ್ರದೇಶದಲ್ಲಿರುವ ಈ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿ ಹೆಚ್ಚು ಮಕ್ಕಳನ್ನು ಆಕರ್ಷಿಸಬೇಕು ಎಂಬ ಉದ್ದೇಶದಿಂದ ನಾಲ್ವರೂ ಶಿಕ್ಷಕರು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ಶಿಕ್ಷಕ ದೊರೆಸ್ವಾಮಿಯವರ ಪರಿಕಲ್ಪನೆಯಂತೆ ಶಾಲಾ ಕಟ್ಟಡಕ್ಕೆ ರೈಲು ಭೋಗಿಯ ಚಿತ್ರ ಬರೆಸಲಾಗಿದೆ.
-ಬಸವನಾಯಕ, ಮುಖ್ಯಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next