ಬಂಟ್ವಾಳ: ಇಲ್ಲಿನ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಲೊರೆಟ್ಟೋ ನಿವಾಸಿಗಳಾದ ಉಮ್ಮರ್ ಫಾರೂಕ್, ಆದಂ ಮತ್ತು ಆಸ್ಬಕ್ ಬಂಧಿತ ಆರೋಪಿಗಳು.
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲೊರೆಟ್ಟೋ ಟಿಪ್ಪು ನಗರದಲ್ಲಿ ಶಂಶುದ್ದೀನ್ ಎಂಬಾತನ ಮನೆಯ ಬಳಿಯ ಅಕ್ರಮ ಕಟ್ಟಡದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮುಂಜಾನೆ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ನೇತೃತ್ವದಲ್ಲಿ ಬಂಟ್ವಾಳ ಪೊಲೀಸರ ತಂಡ ದಾಳಿ ನಡೆಸಿತ್ತು.
ಬಂಧಿತರಿಂದ ನಾಲ್ಕು ಜಾನುವಾರು, ಎರಡು ಕಿಂಟ್ವಾಲ್ ದನದ ಮಾಂಸ ಎರಡು ದನದ ತಲೆ, ಒಂದು ಪಿಕಪ್ ವಾಹನ ಹಾಗೂ ಜಾನುವಾರು ಕಡಿದು ಮಾಂಸ ಮಾಡಲು ಉಪಯೋಗಿಸುವ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯ ವೇಳೆ ಮನೆಯ ಮಾಲಕ ಹಾಗೂ ಉಳಿದವರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟಕ್ಕೆ ತಯಾರು ಮಾಡುತ್ತಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ