Advertisement

300+ರೌಡಿಗಳ ಮನೆ, ಕಚೇರಿ ಮೇಲೆ ದಾಳಿ

11:37 AM Apr 21, 2023 | Team Udayavani |

ಬೆಂಗಳೂರು: ಕೆಲ ದಿನಗಳಲ್ಲೇ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಪಶ್ಚಿಮ ಮತ್ತು ದಕ್ಷಿಣ ವಿಭಾಗದ ಪೊಲೀಸರು ಗುರುವಾರ ನೂರಾರು ಮಂದಿ ರೌಡಿಶೀಟರ್‌ಗಳ ಮನೆ ಮತ್ತು ಕಚೇರಿಗಳ ಮೇಲೆ ದಿಢೀರ್‌ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

Advertisement

ಸೇನಾ ಪಡೆಗಳು ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಮುಂಜಾನೆ 7 ಗಂಟೆಯಿಂದ ಅಪರಾಹ್ನ 12 ಗಂಟೆವರೆಗೂ ದಾಳಿ ನಡೆಸಿದ್ದು, ಪಶ್ಚಿಮ ವಿಭಾಗ ಪೊಲೀಸರು 200ಕ್ಕೂ ಹೆಚ್ಚು ಮಂದಿ ಮತ್ತು ದಕ್ಷಿಣ ವಿಭಾಗದ ಪೊಲೀಸರು ನೂರಕ್ಕೂ ಹೆಚ್ಚು ಮಂದಿ ರೌಡಿಶೀಟರ್‌ಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲ ರೌಡಿಶೀಟರ್‌ಗಳ ಮನೆಗಳಲ್ಲಿ ಮಾರಕಾಸ್ತ್ರಗಳು ಸಿಕ್ಕಿವೆ. ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಹಾಗೆಯೇ ಕೆಲ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ಗಳು ಹಾಗೂ ಕೋರ್ಟ್‌ಗೆ ಹಾಜರಾಗದೆ ಜಾಮೀನು ರಹಿತ ವಾರೆಂಟ್‌ ಹೊರಡಿಸಿದರೂ ನಾಪತ್ತೆಯಾಗಿದ್ದ ರೌಡಿಶೀಟರ್‌ಗಳನ್ನು ಕೋರ್ಟ್‌ ಮುಂದೆ ಹಾಜರು ಪಡಿಸಲಾಗಿದೆ. ಜತೆಗೆ, ಪ್ರಸ್ತುತ ಮಾಡುತ್ತಿರುವ ಉದ್ಯೋಗ, ಹಣಕಾಸಿನ ವ್ಯವಹಾರಗಳು ಹಾಗೂ ಮೊಬೈಲ್‌ ನಂಬರ್‌, ಪರ್ಯಾಯ ಮನೆ ವಿಳಾಸ ಸೇರಿ ಕೆಲ ಮಾಹಿತಿ ಸಂಗ್ರಹಿಸಲಾಗಿದೆ.

ಕೆಲ ರೌಡಿಗಳನ್ನು ಠಾಣೆಗೆ ಕರೆಸಿಕೊಂಡು ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು, ಶಾಂತಿ ಮತ್ತು ಸುವ್ಯವಸ್ಥೆ ಕದಡಬಾರದು, ರೌಡಿ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದರು.

ದಕ್ಷಿಣ ವಿಭಾಗದಲ್ಲಿ ನೂರಕ್ಕೂ ಹೆಚ್ಚು ಮಂದಿ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಗಳನ್ನು ಬಂಧಿಸಲಾಗಿದೆ. ಬೆರಳಚ್ಚು ಸಹಾಯದಿಂದ ಕಲಾಸಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಸರ ಕಳವು ಪ್ರಕರಣದ ಆರೋಪಿ ಇಮ್ರಾನ್‌ಪಾಷಾ ಎಂಬಾತನನ್ನು ಬಂಧಿಸಲಾಗಿದೆ.

Advertisement

ನಾಲ್ಕು ಮಂದಿ ರೌಡಿಗಳನ್ನು ಇದೇ ವೇಳೆ ಗಡಿಪಾರು ಮಾಡಲಾಗಿದೆ. ಇತರೆ ಮೂವರು ರೌಡಿಗಳ ಗಡಿ ಪಾರು ಮಾಡಲು ಆಯುಕ್ತರಿಗೆ ಮನವಿ ಮಾಡಿದ್ದು, ಇಬ್ಬರಿಗೆ ಅನುಮತಿ ನೀಡಿದ್ದಾರೆ. ಮೂವರಿಗೆ ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್‌ ಹೇಳಿದರು. ಇನ್ನು ಪಶ್ಚಿಮ ವಿಭಾಗ ಪೊಲೀಸರು 200ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಜಾಮೀನು ರಹಿತ ವಾರೆಂಟ್‌ ಹೊರಡಿಸಿದರೂ ನಾಪತ್ತೆಯಾಗಿದ್ದ 67 ಮಂದಿಯನ್ನು ಬಂಧಿಸಿದ್ದಾರೆ.

ಹಾಗೆಯೇ ಇಬ್ಬರು ರೌಡಿಗಳ ಮನೆಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next