Advertisement

ತಪ್ಪು ಮಾಡಿದ್ರೆ ನನ್ನ ಮನೆ ಮೇಲೂ ಐಟಿ ದಾಳಿ ನಡೆಸಲಿ: ಪ್ರಧಾನಿ ಮೋದಿ

08:44 AM Apr 27, 2019 | Nagendra Trasi |

ಮಧ್ಯಪ್ರದೇಶ: ಒಂದು ವೇಳೆ ನಾನೇನಾದರೂ ತಪ್ಪು ಮಾಡಿದ್ದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆಯ ಮೇಲೂ ದಾಳಿ ನಡೆಸಲಿ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಮೂಲಕ ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

Advertisement

ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಧ್ಯಪ್ರದೇಶದ ಸಿಧಿಯಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆದಾಯ ತೆರಿಗೆ ದಾಳಿ ನಂತರ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ, ನಾವು ಜನಪ್ರತಿನಿಧಿಗಳು, ಹೀಗಾಗಿ ಯಾಕೆ ನಮ್ಮ ಮನೆ, ಕಚೇರಿ ಮೇಲೆ ದಾಳಿ ನಡೆಸಬೇಕು ಅಂತ? ದೇಶದ ಕಾನೂನು ಎಲ್ಲರಿಗೂ ಒಂದೇ. ಒಂದು ವೇಳೆ ಮೋದಿ ಏನಾದರೂ ತಪ್ಪು ಮಾಡಿದರೂ ಕೂಡಾ ಮೋದಿ ಮನೆಯ ಮೇಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲೇಬೇಕು ಎಂದು ಚಾಟಿ ಬೀಸಿದರು.

ಲೋಕಸಭೆ ಚುನಾವಣೆ ವೇಳೆ ಪ್ರತಿಪಕ್ಷಗಳ ಹಲವು ಮುಖಂಡರು, ವಿಪಕ್ಷಗಳ ಆಪ್ತರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದಕ್ಕೆ ವಿರೋಧಪಕ್ಷಗಳು ಟೀಕಿಸಿದ್ದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಈ ತಿರುಗೇಟು ನೀಡಿದ್ದಾರೆ.

ತುಘಲಕ್ ರಸ್ತೆಯ ಚುನಾವಣಾ ಅಕ್ರಮದ ಹಣವನ್ನು ಈ ನಾಮ್ ದಾರ್(ವಂಶರಾಜಕಾರಣ)ಗಳು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ದೆಹಲಿಯಿಂದ ಭೋಪಾಲ್ ವರೆಗೆ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದೆ. ನಿಮ್ಮ ಚೌಕಿದಾರ್ ಭ್ರಷ್ಟಾಚಾರ ನಡೆಯದಂತೆ ಕಾಯುತ್ತಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next