Advertisement

ವಚನಗಳ ಸಂದೇಶ ಸಾರ್ವಕಾಲಿಕ

11:42 AM Jan 27, 2020 | Naveen |

ರಾಯಚೂರು: 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿ ಸಾಮಾಜಿಕ ಸಮಾನತೆಯ ತತ್ವ ಸಂದೇಶಗಳನ್ನು ಸಾರಿದ ಶ್ರೇಷ್ಠ ವಚನಕಾರರಲ್ಲಿ ಶಿವಯೋಗಿ ಸಿದ್ಧರಾಮೇಶ್ವರರು ಕೂಡ ಪ್ರಮುಖರು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜ ಸುಧಾರಣೆಗಾಗಿ ಬದುಕನ್ನೇ ಸವೆಸಿದ ಅವರ ಹಾದಿಯಲ್ಲಿ ಸಾಗುವುದನ್ನು ರೂಢಿಸಿಕೊಳ್ಳಬೇಕು. ಸಿದ್ಧರಾಮೇಶ್ವರರು ವಚನಗಳ ಮೂಲಕ ಸಾಕಷ್ಟು ಕ್ರಾಂತಿ ಮೂಡಿಸಿದರು. ಸಮಾಜವನ್ನು ಸರಿ ದಾರಿಗೆ ತರಲು ಯತ್ನಿಸಿದರು. ಸಮಸ್ಯೆಗಳಿಗೆ ಹೆದರದೇ ಮುನ್ನುಗ್ಗಿ ಜನರ ಮನಸ್ಸಿನಲ್ಲಿ ಅರಿವು ಮೂಡಿಸುವ ಕೆ‌ಲಸ ಮಾಡಿದ್ದರು. ಅವರ ವಚನಗಳು ಇಂದಿಗೂ ಪ್ರಸ್ತುತ ಎಂದರು.

ಯಾವುದಾದರೂ ಸಮಾಜ ಇಂದಿಗೂ ಹಿಂದುಳಿದಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಶಿಕ್ಷಣ. ಭೋವಿ ಸಮಾಜದವರು ಈ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದಲ್ಲಿ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ ಸಮಾಜ ತನ್ನಿಂತಾನೆ ಬಲಿಷ್ಠವಾಗುತ್ತದೆ. ಪ್ರತಿ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಡಾ| ಎಸ್‌.ಶಿವರಾಜ ಪಾಟೀಲ ಮಾತನಾಡಿ, ಶ್ರಮಕ್ಕೆ ಮತ್ತೂಂದು ಹೆಸರೇ ಭೋವಿ ಸಮಾಜ. ಸಮಾಜ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾದ ಆಯುಧ ಎಂಬುದನ್ನು ಎಲ್ಲರೂ ಮನಗಾನಬೇಕು. ಹೀಗಾಗಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಉನ್ನತ ಶಿಕ್ಷಣ ಪಡೆಯಬೇಕು ಎಂದರು.

Advertisement

ಭೋವಿ ಸಮುದಾಯದ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಆಂಜನೇಯ ತುರಕಣದೋಣಿ ವಿಶೇಷ ಉಪನ್ಯಾಸ ನೀಡಿದರು. ಎಡಿಸಿ ದುರುಗೇಶ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ, ಸಮಾಜದ ತಾಲೂಕು ಘಟಕದ ಅಧ್ಯಕ್ಷ ಆಂಜನೇಯ, ನಗರಸಭೆ ಸದಸ್ಯ ವಿ.ನಾಗರಾಜ, ರಮೇಶ, ಮಹೇಂದ್ರರೆಡ್ಡಿ, ಎಂ.ನಾಗರಾಜ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಭೀಮರಾಯ ಸೇರಿದಂತೆ ಅನೇಕರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಗಳಾ ಬಿ. ನಾಯಕ ಸ್ವಾಗತಿಸಿದರು.

ಅದ್ಧೂರಿ ಮೆರವಣಿಗೆ: ಸಮಾರಂಭಕ್ಕೂ ಮುನ್ನ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರದ ಮೆರವಣೆಗೆ ನಡೆಸಲಾಯಿತು. ನಗರದ ಆಶಾಪುರ ರಸ್ತೆಯಲ್ಲಿರುವ ಶ್ರೀ ಸಿದ್ದರಾಮೇಶ್ವರ ವೃತ್ತದಲ್ಲಿ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಎಂಎಲ್‌ಸಿ ಎನ್‌.ಎಸ್‌.ಬೋಸರಾಜ್‌ ಮೆರವಣಿಗೆಗೆ ಚಾಲನೆ ನೀಡಿದರು. ಸ್ಟೇಶನ್‌ ವೃತ್ತದ ಮಾರ್ಗವಾಗಿ ರಂಗಮಂದಿರವರೆಗೆ ಮೆರವಣಿಗೆ ನಡೆಯಿತು. ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಜನಪ್ರತಿನಿ ಧಿಗಳು, ಸಮಾಜದ ಗಣ್ಯರು, ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next