ರಾಯಚೂರು: ಬಹುವರ್ಷಗಳ ಬೇಡಿಕೆಯಾಗಿದ್ದ ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಫನೆಗೆ ಕೊನೆಗೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆ ಮೂಲಕ ಈ ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗೆ ಇತಿ ಹಾಡಿದಂತಾಗಿದೆ.
ಅಂದುಕೊಂಡಂತೆ ಆಗಿದ್ದರೆ 2017ರಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕಿತ್ತು. ಆದರೆ, ಆಗಿನ ಕಾಂಗ್ರೆಸ್ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸುವ ಮೂಲಕ ನನೆಗುದಿಗೆ ಬೀಳುವಂತಾಯಿತು. ಅದಾದ ಬಳಿಕ ಸರ್ಕಾರ ಸುಗ್ರಿವಾಜ್ಞೆ ಮೂಲಕ ಜಾರಿಗೆ ಮುಂದಾದರೂ ರಾಜ್ಯಪಾಲರು ತಿರಸ್ಕರಿಸಿದ್ದು, ಅಚ್ಚರಿ ಮೂಡಿಸಿತ್ತು. ಅಷ್ಟರಲ್ಲೇ ಸರ್ಕಾರ ಬದಲಾಗಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೂ ಪ್ರತ್ಯೇಕ ವಿವಿ ಬೇಡಿಕೆ ಈಡೇರಲಿಲ್ಲ. ಆದರೆ, ಪ್ರತಿ ಶೈಕ್ಷಣಿಕ ವರ್ಷ ಬಂದಾಗಲೂ ಪ್ರತ್ಯೇಕ ವಿವಿ ಸ್ಥಾಪನೆ ಬೇಡಿಕೆ ಮುನ್ನೆಲೆಗೆ ಬರುತ್ತಿತ್ತು. ಈಗ ಅನಿರೀಕ್ಷಿತವಾಗಿ ರಾಜ್ಯಪಾಲರು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ತಿದ್ದುಪಡಿ ಅಧಿನಿಯಮ 2020ಕ್ಕೆ ಅಂಕಿತ ಹಾಕುವ ಮೂಲಕ ವಿವಿ ಸ್ಥಾಪನೆಗೆ ಮುಂದಾಗಿದ್ದಾರೆ.
ಸಿಬ್ಬಂದಿ-ಸೌಲಭ್ಯ ಕೊರತೆ: ಈಗಾಗಲೇ ಯರಗೇರಾ ಸ್ನಾತಕೋತ್ತರ ಕೇಂದ್ರದಲ್ಲಿ 17 ಕೋರ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇಲ್ಲಿರುವುದು ಕೇವಲ ಮೂವರು ಕಾಯಂ ಪ್ರಾಧ್ಯಾಪಕರಿದ್ದಾರೆ. 70 ಅತಿಥಿ ಉಪನ್ಯಾಸಕರ ನೆರವಿನಿಂದಲೇ ಬೋಧಿಸಲಾಗುತ್ತಿದೆ. ಬಹುಶ ಈ ವರ್ಷದಿಂದ ವಿವಿ ಆರಂಭವಾದರೂ ಪರಿಪೂರ್ಣ ಪ್ರಮಾಣದಲ್ಲಿ ಸೇವೆ ನೀಡುವುದು ಕಷ್ಟಸಾಧ್ಯ. ಪ್ರತ್ಯೇಕ ವಿವಿ ಸ್ಥಾಪನೆ ಆದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆ ವ್ಯಾಪ್ತಿಯ 156ಕ್ಕೂ ಅಧಿಕ ಕಾಲೇಜ್‌ಗಳು ಒಳಪಡಲಿವೆ. ಈಗ ಇರುವ ಕಟ್ಟಡಗಳಲ್ಲೇ ಎಲ್ಲ ಕೋರ್ಸ್ ನಡೆಸಲಾಗುತ್ತಿದೆ. ಎಲ್ಲ ವಿಭಾಗಗಳಿಗೆ ಕಾಯಂ ಸಿಬ್ಬಂದಿ ನೇಮಕ, ಅಗತ್ಯ ಮೂಲ ಸೌಲಭ್ಯ ಸೇರಿದಂತೆ ಸಾಕಷ್ಟು ಸೌಲಭ್ಯ ನೀಡಬೇಕಿದ್ದು, ಅದಕ್ಕೆ ಇನ್ನೊಂದೆರಡು ವರ್ಷ ಬೇಕು ಎನ್ನಲಾಗುತ್ತಿದೆ.
ಈ ಭಾಗದ ಬಹುದಿನಗಳ ಬೇಡಿಕೆ ಈಡೇರಿದೆ. ಸರ್ಕಾರ ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷದಿಂದಲೇ ರಾಯಚೂರು ಪ್ರತ್ಯೇಕ ವಿವಿ ಆರಂಭಿಸಲಿದೆ. ಕೋವಿಡ್ ನಿಂದಾಗಿ ಶೈಕ್ಷಣಿಕ ವರ್ಷವನ್ನು ಸೆಪ್ಟೆಂಬರ್‌ನಿಂದ ಆರಂಭಿಸಲು ಯುಜಿಸಿ ಸೂಚಿಸಿದ್ದರಿಂದ ಅಗತ್ಯ ಸೌಲಭ್ಯ ಕಲ್ಪಿಸಲು ಕಾಲಾವಕಾಶ ಸಿಗಲಿದೆ.
ಡಾ| ಶಿವರಾಜ ಪಾಟೀಲ,
ನಗರ ಶಾಸಕ
ಯರಗೇರಾ ಸ್ನಾತಕೋತ್ತರ ಕೇಂದ್ರದಲ್ಲಿ 17 ಕೋರ್ಸ್‌ಗಳಿದ್ದು, ಮುಖ್ಯವಾಗಿ ಸಿಬ್ಬಂದಿ ಕೊರತೆ ಇದೆ. ಬಹುಶಃ ಈ ವರ್ಷ ವಿವಿ ಸ್ಥಾಪನೆಯಾದರೂ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾಗಬಹುದು.
ಪ್ರೊ| ಪಾರ್ವತಿ ಸಿ.ಎಸ್.,
ವಿಶೇಷಾಧಿಕಾರಿ ಯರಗೇರಾ ಪಿಜಿ ಸೆಂಟರ್