Advertisement

ಗ್ರಾಮಗಳಲ್ಲಿ ಸೌಲಭ್ಯ ಕಲ್ಪಿಸಲು ಆಗ್ರಹ

04:30 PM Aug 07, 2019 | Naveen |

ರಾಯಚೂರು: ಜಿಲ್ಲೆಯ ವಿವಿಧ ತಾಲೂಕುಗಳ ಅನೇಕ ಗ್ರಾಮಗಳಲ್ಲಿ ರಸ್ತೆ, ಶುದ್ಧ ಕುಡಿಯುವ ನೀರು ಸೇರಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲದಾಗಿದ್ದು, ಕೂಡಲೇ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಜನ ಜಾಗೃತಿ ಸಮಿತಿ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧ‌ರಣಿ ಆರಂಭಿಸಿದರು.

Advertisement

ಧ‌ರಣಿ ನಡೆಸಿದ ಸಮಿತಿ ಸದಸ್ಯರು ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಾಕಷ್ಟು ಹಳ್ಳಿಗಳಲ್ಲಿ ಇಂದಿಗೂ ಸರಿಯಾದ ರಸ್ತೆ ಮಾರ್ಗವಿಲ್ಲ. ವಿದ್ಯುತ್‌, ಚರಂಡಿ ಸೌಲಭ್ಯಗಳಿಲ್ಲ. ಶುದ್ಧ ಕುಡಿಯುವ ನೀರಿಲ್ಲದೇ ಬಳಲುವ ಅನೇಕ ಗ್ರಾಮಗಳಿವೆ. ರಾಯಚೂರು, ಮಾನ್ವಿ, ದೇವದುರ್ಗ, ಲಿಂಗಸುಗೂರು, ಮಸ್ಕಿ, ಸಿರವಾರ ತಾಲೂಕುಗಳ ನೂರಾರು ಗ್ರಾಮಗಳು ಇಂಥ ಸಮಸ್ಯೆಗಳಿಂದ ಬಳಲುತ್ತಿವೆ. ಅಲ್ಲಿ ವಾಸಿಸುವ ಜನ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಶೇ.100ರಷ್ಟು ಬಯಲು ಶೌಚ ಮುಕ್ತ ಗ್ರಾಮಗಳೆಂದು ಘೋಷಣೆ ಮಾಡಿದ ಊರುಗಳಲ್ಲೇ ಅದೆಷ್ಟೋ ಕುಟುಂಬಗಳು ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಿಕೊಂಡಿಲ್ಲ. ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು ಇಂದಿಗೂ ಬಹಿರ್ದೆಸೆಗೆ ಬಯಲಿಗೆ ಹೋಗುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಮನ ಸೆಳೆಯಲು ಈ ಧ‌ರಣಿ ಪ್ರಾರಂಭಿಸಲಾಗಿದೆ ಎಂದರು.

ಮಾನ್ವಿ ತಾಲೂಕಿನ ಕುರ್ಡಿ-ಗಾರಲದಿನ್ನಿ ಗ್ರಾಮದವರೆಗೆ ಡಾಂಬರ್‌ ರಸ್ತೆ ನಿರ್ಮಿಸಬೇಕು. ಕುರ್ಡಿ ಗ್ರಾಮದ 4ನೇ ವಾರ್ಡ್‌ನ 60 ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಿಂಧ‌ನೂರು ತಾಲೂಕಿನ ಉಪ್ಪಳ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ವಿದ್ಯುತ್‌ ಸರಬರಾಜು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ರಾಯಚೂರು ತಾಲೂಕಿನ ಮಟಮಾರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದ್ದು, ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಮಟಮಾರಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಬೇಕು. ಮಸ್ಕಿ ತಾಲೂಕಿನ ಅಮೀನಗಡದಲ್ಲಿ ಕುಡಿಯುವ ನೀರಿನ ಸೌಲಭ್ಯ, ಸಿಸಿ ರಸ್ತೆ, ವಟಗಲ್ಗೆ ಕುಡಿಯುವ ನೀರಿನ ಸೌಲಭ್ಯ ಸೇರಿ ಸುಮಾರು 44 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

Advertisement

ಸಮಿತಿಯ ವಿಭಾಗೀಯ ಅಧ್ಯಕ್ಷ ರವಿಕುಮಾರ ಕುರ್ಡಿ, ಜಿಲ್ಲಾಧ್ಯಕ್ಷ ರಮೇಶ ಬಸಾಪುರ, ಮುಖಂಡರಾದ ಸುರೇಶ, ಸುಭಾಸ, ಗಂಗಮ್ಮ ಅಮೀನಗಡ, ವಿಜಯ ಆಲ್ಕೂರು, ಆನಂದ, ರಾಮಣ್ಣ ಬಾಗಲವಾಡ, ವೀರೇಶ ನಾಯಕ, ಪ್ರಸಾದ ಕುರ್ಡಿ, ಉಪ್ಪಳಪ್ಪ ಸೇರಿ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next