Advertisement

ಜನರಿಗೋಸ್ಕರವೇ ಪದವಿ ಮುಡಿಪು

11:54 AM May 25, 2019 | Naveen |

ರಾಯಚೂರು: ದೇಶದಲ್ಲಿ ಎದ್ದ ಮೋದಿ ಅಲೆಯಲ್ಲಿ ಗೆದ್ದ ಸ್ಥಾನಗಳಲ್ಲಿ ರಾಯಚೂರು ಕೂಡ ಒಂದು. ಹಾಲಿ ಸಂಸದ ಬಿ.ವಿ. ನಾಯಕ ಅವರನ್ನು 1,17,716 ಮತಗಳ ಅಂತರದಿಂದ ಹೀನಾಯವಾಗಿ ಸೋಲಿಸುವ ವಿಕ್ರಮ ಮೆರೆದ ರಾಜಾ ಅಮರೇಶ್ವರ ನಾಯಕ ಜಿಲ್ಲೆಯ ಬಗ್ಗೆ ತಮ್ಮದೇ ಚಿಂತನೆ ಹೊಂದಿದ್ದಾರೆ. ಅವರ ಉದ್ದೇಶ, ಅಧಿಕಾರಾವಧಿಯಲ್ಲಿ ಹಾಕಿಕೊಂಡಿರುವ ಯೋಜನೆ ಸೇರಿ ಇನ್ನಿತರ ವಿಚಾರಗಳನ್ನು ‘ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ.

Advertisement

ಪ್ರಚಂಡ ಬಹುಮತದಿಂದ ಗೆದ್ದು ವಿಜಯ ಸಾಧಿಸಿದ್ದೀರಿ. ಈ ಗೆಲುವನ್ನು ಹೇಗೆ ವಿಶ್ಲೇಷಿಸುತ್ತೀರಿ?
ಅಮರೇಶ್ವರ ನಾಯಕ: ಇದು ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವು. ಜನರ ಆಶೀರ್ವಾದಕ್ಕೆ ನಾನು ಚಿರಋಣಿ. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ.

•ಯಾವ ಪ್ರಮುಖ ಮಾನದಂಡಗಳು ನಿಮ್ಮ ಗೆಲುವಿಗೆ ನೆರವಾಯಿತು?ಅಮರೇಶ್ವರ ನಾಯಕ: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ನಾನು ಹೊಸಬನಲ್ಲ. ಈ ಹಿಂದೆ ಎರಡು ಬಾರಿ ಶಾಸಕನಾಗಿ, ಸಚಿವನಾಗಿ ಜನರಿಗೆ ಪರಿಚಿತನಾಗಿದ್ದೆ. ನನಗೂ ಸಾಕಷ್ಟು ರಾಜಕೀಯ ಅನುಭವವಿದೆ. ಜನರ ಜತೆಗಿದ್ದ ಹಳೇ ಬಾಂಧವ್ಯ ನನ್ನ ಕೈ ಹಿಡಿಯಿತು. ಅದರ ಜತೆಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಗೆಲುವಿಗೆ ಸಾಕಷ್ಟು ಶ್ರಮಿಸಿತು. ನಾನು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು, ವರಿಷ್ಠರು ನಡೆಸಿದ ಪ್ರಚಾರ ಗೆಲುವಿಗೆ ಅನುಕೂಲವಾಯಿತು.

•ಮುಂದಿನ ಧ್ಯೇಯೋದ್ದೇಶಗಳೇನು?
ಅಮರೇಶ್ವರ ನಾಯಕ: ನನಗೆ ಈ ಸ್ಥಾನ ನೀಡಿದ್ದು ಕ್ಷೇತ್ರದ ಮತದಾರರು. ಅವರಿಗೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಬೇಕು ಎಂಬುದು ನನ್ನ ಗುರಿ. ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಅವುಗಳಿಗೊಂದು ಅಂತ್ಯ ಹಾಡಬೇಕಿದೆ.

ಸಂಸದರಾಗಿ ಆಯ್ಕೆಯಾದ ಮೇಲೆ ನಿಮ್ಮ ಮೊದಲ ಆದ್ಯತೆ ಯಾವವು?
ಅಮರೇಶ್ವರ ನಾಯಕ: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಸಾಕಷ್ಟು ವಿಚಾರಗಳಲ್ಲಿ ಹಿಂದುಳಿದಿವೆ. ಕುಡಿಯುವ ನೀರಿಗೆ ಮೊದಲಾದ್ಯತೆ ನೀಡುತ್ತೇನೆ. ನನೆಗುದಿಗೆ ಬಿದ್ದ ಅನೇಕ ಯೋಜನೆಗಳಿಗೆ ಕಾಯಕಲ್ಪ ನೀಡಬೇಕಿದೆ. ಹಿಂದೆ ನಾನು ಸಚಿವನಾಗಿದ್ದಾಗ ರಾಂಪುರ ಏತ ನೀರಾವರಿಗೆ ಚಾಲನೆ ನೀಡಿದ್ದೆ. ಬಲದಂಡೆ ಯೋಜನೆಗೂ ಚಾಲನೆ ನೀಡಲಾಗಿತ್ತು. ಜನರು ಇಂದಿಗೂ ಆ ಯೋಜನೆಗಳನ್ನು ಸ್ಮರಿಸುತ್ತಾರೆ. ಅದರ ಜತೆಗೆ ಹೊಸ ನೀರಾವರಿ ಯೋಜನೆಗಳು, ನನೆಗುದಿಗೆ ಬಿದ್ದ ರೈಲ್ವೆ ಯೋಜನೆಗಳನ್ನು ಮುಗಿಸಲು ಒತ್ತು ನೀಡಲಾಗುವುದು. ಶೈಕ್ಷಣಿಕವಾಗಿ ಹಿಂದುಳಿದ ಕ್ಷೇತ್ರದಲ್ಲಿ ಅದಕ್ಕೆ ಪೂರಕ ಸಂಸ್ಥೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು.

Advertisement

ಈಗಾಗಲೇ ಸಾಕಷ್ಟು ಯೋಜನೆ ಗಳಿದ್ದರೂ ನೀರು ಸಿಗುತ್ತಿಲ್ಲ. ಅವುಗಳ ವಿಚಾರ?
ಅಮರೇಶ್ವರ ನಾಯಕ: ಖಂಡಿತ ಆ ವಿಚಾರವೂ ತಲೆಯಲ್ಲಿದೆ. ನನ್ನ ತವರೂರಾದ ಗುರುಗುಂಟಾದಲ್ಲಿ 22 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರುಪಯುಕ್ತವಾಗಿದೆ. ಕೆಲ

ಗುತ್ತಿಗೆದಾರರು ಇಂಥ ಯೋಜನೆಗಳಲ್ಲಿ ಕೋಟಿ ಕೋಟಿಗಟ್ಟಲೇ ಲೂಟಿ ಮಾಡಿಕೊಂಡಿದ್ದಾರೆ. ಅಂಥ ಯೋಜನೆಗಳ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಯತ್ನ ಮಾಡುತ್ತೇನೆ. ಅಲ್ಲದೇ, ನನೆಗುದಿಗೆ ಬಿದ್ದ ಯೋಜನೆಗಳ ಜಾರಿಗೆ ಒತ್ತು ನೀಡುತ್ತೇನೆ.

ನಿಮ್ಮ ಯೋಜನೆಗಳ ಸಾಕಾರಕ್ಕೆ ರಾಜ್ಯ ಸರ್ಕಾರದ ಸಾಥ್‌ ಸಿಗುವ ವಿಶ್ವಾಸವಿದೆಯೇ?
ಅಮರೇಶ್ವರ ನಾಯಕ: ರಾಜ್ಯದಲ್ಲಿ ಶೀಘ್ರವೇ ಬಿಜೆಪಿ ಸರ್ಕಾರ ಬರುವ ವಿಶ್ವಾಸವಿದೆ. ಜನರು 104 ಸ್ಥಾನ ಗೆಲ್ಲಿಸಿದ್ದು, ಸರ್ಕಾರ ನಡೆಸಲಿ ಎಂದೇ. ಈಗಲೂ 25 ಸ್ಥಾನ ನಮಗೆ ಬಂದಿವೆ ಎಂದರೆ ಜನರಿಗೆ ಬಿಜೆಪಿ ಆಡಳಿತದ ಮೇಲೆ ವಿಶ್ವಾಸವಿದೆ.

ಆದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆಯಲ್ಲವೇ?
ಅಮರೇಶ್ವರ ನಾಯಕ: ಜನರು ಮೈತ್ರಿಯನ್ನು ತಿರಸ್ಕರಿಸಿದ್ದಾರೆ ಎನ್ನಲಿಕ್ಕೆ ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಸಭೆ ಚುನಾವಣೆ ಫಲಿತಾಂಶದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಹಿಂದೆ ರಾಮಕೃಷ್ಣ ಹೆಗಡೆ ಇಂಥ ಸ್ಥಿತಿ ಎದುರಾದಾಗ ರಾಜೀನಾಮೆ ನೀಡಿದ್ದರು. ರಾಜ್ಯ ಸರ್ಕಾರಕ್ಕೆ ಜನಾದೇಶವಿಲ್ಲ. ಅದನ್ನು ಅರ್ಥ ಮಾಡಿಕೊಂಡು ಅವರೇ ಹಿಂದೆ ಸರಿಯವುದು ಸೂಕ್ತ.

ಕೊನೆಯದಾಗಿ. ಹಿಂದಿನ ಸಂಸದರು ಜನರ ಕೈಗೆ ಸಿಗಲಿಲ್ಲ ಎಂಬ ಅಪವಾದವಿದೆ. ಈ ಬಗ್ಗೆ ನಿಮ್ಮ ನಿಲುವೇನು?
ಅಮರೇಶ್ವರ ನಾಯಕ: ಜನರಿಂದ ಸಿಕ್ಕ ಪದವಿ ಜನರಿಗೋಸ್ಕರವೇ ಮುಡಿಪು ಎಂಬುದು ನನ್ನ ಸಿದ್ಧಾಂತ. ನನಗೆ ಅಧಿಕಾರ ಕೊಟ್ಟವರು ಜನರು. ಅವರ ಸೇವೆಯನ್ನು ಎಷ್ಟು ಸಾಧ್ಯವೋ ಅಷ್ಟಾಗಿ ಮಾಡುವೆ. ನಾನು ಜನರ ಮಧ್ಯೆಯೇ ಇರುವವ. ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿ ಜನರ ವಿಶ್ವಾಸ ಗಳಿಸುವೆ.

Advertisement

Udayavani is now on Telegram. Click here to join our channel and stay updated with the latest news.

Next