ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ದರ್ಶನವನ್ನು ತಾತ್ಕಾಲಿಕವಾಗಿ ಮೂಂದೂಡಿದ್ದರೂ ಸಾರಿಗೆ ಸಂಸ್ಥೆ ಬಸ್‌ಗಳನ್ನು ಓಡಿಸುವ ಮೂಲಕ ಕೈ ಸುಟ್ಟುಕೊಂಡಿದೆ. ಪ್ರಯಾಣಿಕರೇ ಇಲ್ಲದ ಕಾರಣಕ್ಕೆ ಒಂದೇ ದಿನದಲ್ಲಿ ಮತ್ತೆ ಓಡಾಟ ನಿಲ್ಲಿಸಿದೆ.
ಜೂ.15ರಿಂದ ರಾಯರ ದರ್ಶನಕ್ಕೆ ಅವಕಾಶ ನೀಡುವುದಾಗಿ ಶ್ರೀಮಠ ತಿಳಿಸಿತ್ತು. ಆದರೆ, ಸುತ್ತಲಿನ ಪ್ರದೇಶದಲ್ಲಿ ಕೋವಿಡ್ ಹಾವಳಿ ಹೆಚ್ಚಾಗಿದೆ. ಮಠದಲ್ಲಿ ಭಕ್ತರಿಗೆ ಸೂಕ್ತ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕೆಲಸ ಕಾರ್ಯಗಳು ಮುಗಿದಿಲ್ಲ ಎಂಬ ಕಾರಣಕ್ಕೆ ದರ್ಶನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಸಂಗತಿ ಗೊತ್ತಿದ್ದೂ ಕೆಎಸ್‌ಆರ್‌ಟಿಸಿ ಮಂತ್ರಾಲಯಕ್ಕೆ ತೆರಳಲು ಟಿಕೆಟ್ ಮುಂಗಡ ಬುಕ್ಕಿಂಗ್ ಆರಂಭಿಸಿತು. ಜೂ.17ರಿಂದ ಎರಡು ಬಸ್ ಓಡಿಸಿತು. ಆದರೆ, ರಾಯಚೂರು ಘಟಕದಿಂದ ಬೆಂಗಳೂರಿಗೆ ಓಡಾಡಿದ ಸಾರಿಗೆ ಬಸ್ ಗಳಲ್ಲಿ ಒಬ್ಬ ಪ್ರಯಾಣಿಕರು ಇರಲಿಲ್ಲ. ಇದರಿಂದ ಎಚ್ಚೆತ್ತ ಸಾರಿಗೆ ಅಧಿಕಾರಿಗಳು ಒಂದೇ ದಿನಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ನಷ್ಟದಿಂದ ಹೊರ ಬಂದಿದ್ದಾರೆ. ಆದರೆ, ಬೆಂಗಳೂರಿಗೆ ನೇರವಾಗಿ ಹೋಗುತ್ತಿರುವ ಸಾಮಾನ್ಯ ಬಸ್‌ಗಳ ಪ್ರಯಾಣ ಮಾತ್ರ ಮುಂದುವರಿಸಿದ್ದು, ವಿಶೇಷ ಬಸ್‌ಗಳ ಓಡಾಟ ನಿಲ್ಲಿಸಲಾಗಿದೆ.
ಸದ್ಯಕ್ಕಿಲ್ಲ ದರ್ಶನ
ಮಂತ್ರಾಲಯ ಸುತ್ತಲಿನ ಪ್ರದೇಶಗಳಲ್ಲಿ ಕೋವಿಡ್ ನಿಯಂತ್ರಣದಲ್ಲಿಲ್ಲ. ಕರ್ನೂಲ್ ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಹೆಚ್ಚಾಗಿದೆ. ಮಂತ್ರಾಲಯ ಸುತ್ತಲಿನ ಗ್ರಾಮಗಳಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಅಲ್ಲಿ ಓಡಾಡುವವರಲ್ಲೂ ಸೋಂಕು ಹರಡುವ ಸಾಧ್ಯತೆ ಇದೆ. ಜೂ.21ರಂದು ದರ್ಶನ ಆರಂಭವಾಗಬಹುದು ಎನ್ನಲಾಗುತ್ತಿತ್ತು. ಆದರೆ, ಮಠದ ಮೂಲಗಳ ಪ್ರಕಾರ ಸದ್ಯಕ್ಕೆ ದರ್ಶನಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಇದೆ. ಇನ್ನೊಂದಿಷ್ಟು ದಿನ ಮುಂದಕ್ಕೆ ಹೋಗಬಹುದು ಎನ್ನಲಾಗುತ್ತಿದೆ.
ಮಂತ್ರಾಲಯ ಮಾರ್ಗವಾಗಿ ಬೆಂಗಳೂರಿಗೆ ಬಸ್‌ಗಳನ್ನು ಓಡಿಸಿದರೆ ಜನರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಬಸ್‌ಗಳು ಖಾಲಿ ಖಾಲಿ ಓಡಾಡುತ್ತಿವೆ. ಹೀಗಾಗಿ ಮತ್ತೆ ತಡೆ ಹಿಡಿಯಲಾಗಿದೆ. ಬೆಂಗಳೂರಿಗೆ ಈ ಮುಂಚೆ ಓಡಿಸುತ್ತಿದ್ದ ಬಸ್‌ಗಳನ್ನೇ ಓಡಿಸಲಾಗುತ್ತಿದೆ. ದರ್ಶನ ಆರಂಭವಾಗುವವರೆಗೂ ಮಂತ್ರಾಲಯಕ್ಕೆ ಬಸ್ ಸಂಚಾರ ಕಲ್ಪಿಸುವುದಿಲ್ಲ.
ರಾಜೇಂದ್ರ ಬಿ. ಜಾಧವ,
ಸಾರಿಗೆ ಅಧಿಕಾರಿ ರಾಯಚೂರು ವಿಭಾಗ