ರಾಯಚೂರು: ರೈತಾಪಿ ವರ್ಗದ ಹಬ್ಬವೆಂದೇ ಬಿಂಬಿತಗೊಂಡಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಜೂ.16ರಿಂದ 18ರವರೆಗೆ ವೈಭವದಿಂದ ಜರುಗಲಿದೆ. ಮುನ್ನೂರು ಕಾಪು ಸಮಾಜದಿಂದ ಕಳೆದ 19 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಈ ಹಬ್ಬವನ್ನು ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಕೃಷಿ ಬದುಕಿಗೆ ಹೊಂದಿಕೊಂಡಿರುವ ಈ ಹಬ್ಬದ ಜತೆ ಸಂಸ್ಕೃತಿಯೂ ಮೇಳೈಸುವುದರಿಂದ ಅದನ್ನು ಕಣ್ತುಂಬಿಕೊಳ್ಳಲೆಂದೇ ನಾನಾ ಭಾಗಗಳಿಂದ ಜನ ಆಗಮಿಸುತ್ತಾರೆ. ಈ ಮೂರು ದಿನಗಳಲ್ಲಿ ಹಳ್ಳಿ ಸೊಗಡಿನ ಸಾಹಸ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮವಾಗಿರುತ್ತದೆ.
ಸಮೃದ್ಧ ಮಳೆಯಾಗಿ ಉತ್ತಮ ಬೆಳೆ ಬಂದು ರೈತರ ಬದುಕು ಹಸನಾಗಲಿ ಎಂಬ ಮಹತ್ಕಾರ್ಯದಿಂದ ಈ ಕಾರ್ಯಕ್ರಮವನ್ನು ಬಲು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿರುವುದು ಮುನ್ನೂರು ಕಾಪು ಸಮಾಜದ ಹೆಗ್ಗಳಿಕೆ. ಈಗಾಗಲೇ ಈ ನಿಮಿತ್ತ ಸಾಮೂಹಿಕ ವಿವಾಹಗಳು ಜರುಗಿದರೆ, ಶುಕ್ರವಾರ ಲಕ್ಷ್ಮಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಹೋಮ ಜರುಗಿಸಲಾಯಿತು.
ಮುಂಗಾರು ಶುರುವಿನ ಮುನ್ನ ರೈತರು ಕೃಷಿ ಚಟುವಟಿಕೆಗೆ ಸಿದ್ಧಗೊಳ್ಳುತ್ತಿರುತ್ತಾರೆ. ಇಂಥ ಹೊತ್ತಲ್ಲಿ ಅವರಿಗೆ ಮನರಂಜಿಸುವ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಅದರ ಜತೆಗೆ ಆದಿದೇವತೆ ಲಕ್ಷ್ಮಮ್ಮದೇವಿಗೆ ವಿಶೇಷ ಪೂಜೆ ನೆರವೇರಿಸಿ ರೈತರನ್ನು ನೆಮ್ಮದಿಯಿಂದ ಇಡುವಂತೆ ಪ್ರಾರ್ಥಿಸಲಾಗುತ್ತದೆ. ರೈತರು ಕೂಡ ಖುಷಿಯಿಂದಲೇ ಪಾಲ್ಗೊಳ್ಳುತ್ತಾರೆ.
ಕಾಪು ಎಂದರೆ ರಕ್ಷಕ: ಆಂಧ್ರ ಮೂಲದ ಕಾಪು ಸಮಾಜದ ಸಾಕಷ್ಟು ಜನ ಗಡಿಭಾಗವಾದ ರಾಯಚೂರಿನಲ್ಲಿ ನೆಲೆ ನಿಂತಿದ್ದಾರೆ. ಬಲಿಜ, ಬಲಿಜ ನಾಯ್ದು, ತೆಲಗ ಒಂಟಾರಿ ಹಾಗೂ ತುರಪುಕಾಪು ಎಂಬಿತ್ಯಾದಿ ಹೆಸರುಗಳಿಂದಲೂ ಈ ಜನರನ್ನು ಕರೆಯಲಾಗುತ್ತದೆ. ರಕ್ಷಕ ಎಂಬ ಅರ್ಥ ನೀಡುವ ಕಾಪು ಜನಾಂಗ ರೈತರ ಹಿತ ಕಾಯುವ ಕಾಯಕಕ್ಕೆ ಮುಂದಾಗಿರುವುದು ವಿಶೇಷ. ಕೃಷಿ ಮತ್ತು ಕೃಷಿಗೆ ಸಂಬಂಧಿತ ವ್ಯವಹಾರಗಳಲ್ಲೇ ತೊಡಗಿದ ಈ ಸಮಾಜ ಇಂದಿಗೂ ಅದರೊಂದಿಗಿನ ನಂಟು ಕಳೆದುಕೊಂಡಿಲ್ಲ. ತಮಿಳುನಾಡು, ಕೇರಳ, ಓರಿಸ್ಸಾ, ಕರ್ನಾಟಕ, ಮಹಾರಾಷ್ಟ ಹಾಗೂ ಛತ್ತೀಸಘಡ ರಾಜ್ಯಗಳಲ್ಲೂ ಈ ಸಮಾಜದ ಜನರನ್ನು ಕಾಣಬಹುದು. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಮುನ್ನೂರು ಕಾಪು ಸಮಾಜದ ಪಾತ್ರ ಸ್ಮರಣೀಯ. ಗಾಂಧೀಜಿಯವರ ಚಳವಳಿಗೆ ಮಾರು ಹೋಗಿ ಅದೆಷ್ಟೋ ಕಾಪು ಸಮಾಜದ ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ನಿದರ್ಶನಗಳಿವೆ.
ಎಪಿಎಂಸಿಯಲ್ಲಿ ವ್ಯಾಪಾರ ಹಿಡಿತ ಹೊಂದಿರುವ ಈ ಸಮಾಜದ ಜನ, ಶಿಕ್ಷಣ ಸಂಸ್ಥೆ, ಕಲ್ಯಾಣ ಮಂಟಪ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದೆ. ಈ ಸಮಾಜದ ನಾಯಕ, ಹಬ್ಬದ ರೂವಾರಿಯಾಗಿರುವ ಎ.ಪಾಪಾರೆಡ್ಡಿ ಹಿಂದೆ ನಗರದ ಶಾಸಕರಾಗಿಯೂ ಅಧಿಕಾರ ನಡೆಸಿದ್ದರು. ಸಮಾಜದ ಮುಖಂಡರಾದ ಬೆಲ್ಲಂ ನರಸರೆಡ್ಡಿ, ಜಿ.ಬಸವರಾಜ ರೆಡ್ಡಿ ಅನೇಕರು ತಮ್ಮದೇ ಕೊಡುಗೆ ನೀಡುತ್ತ ಬಂದಿರುವುದು ವಿಶೇಷ.