ರಾಯಚೂರು: ಜಿಲ್ಲೆಯಲ್ಲಿ ಕೆರೆಗಳಿಗೆ ಸಂಬಂಧಿಸಿದ ಸ್ಥಳವನ್ನು ಒತ್ತುವರಿ ಮಾಡಿ ನಿರ್ಮಿಸಿದ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು. ಅಂಥ ಕಟ್ಟಡಗಳನ್ನು ನಿರ್ಮಿಸಿದ ಮಾಲೀಕರಿಗೆ ಕೂಡಲೇ ನೋಟಿಸ್ ಗಳನ್ನು ಜಾರಿಗೊಳಿಸಿ ತೆರವು ಮಾಡುವಂತೆ ಸೂಚನೆ ನೀಡಬೇಕು. ವಿವಿಧ ತಾಲೂಕುಗಳಲ್ಲಿ ಕೆರೆ ಸ್ಥಳ ಗುರುತಿಸಲು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿ ವರದಿ ನೀಡಬೇಕು ಎಂದು ಹೇಳಿದರು.
ಜಿಪಂ, ನೀರಾವರಿ, ಸಣ್ಣ ನೀರಾವರಿ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜಂಟಿಯಾಗಿ ತಾಲೂಕುವಾರು ಕೆರೆ ಒತ್ತುವರಿ ಸ್ಥಳ ಸರ್ವೆ ನಡೆಸಬೇಕು. ಮುಖ್ಯವಾಗಿ ರಾಯಚೂರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಕೆರೆಗಳನ್ನು ಸರ್ವೆ ಮಾಡಬೇಕು. 2014-15ರಲ್ಲಿ ಜಿಲ್ಲೆಯಲ್ಲಿ ಕೆರೆಗಳ ಸರ್ವೆ ಕಾರ್ಯ ನಡೆಸಲಾಗಿತ್ತು. ಈಗ ಪುನಃ ಸಮೀಕ್ಷೆ ಮಾಡುವುದು ಅತ್ಯವಶ್ಯಕ ಎಂದು ಹೇಳಿದರು.
ಕೆರೆ ಸುತ್ತಮುತ್ತ 30 ಮೀ. ಒಳಗೆ ಕಟ್ಟಡ ನಿರ್ಮಿಸಿದ್ದರೆ ಅಂತಹ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಬೇಕು. ನಗರಸಭೆ ಪೌರಾಯುಕ್ತರು, ಪುರಸಭೆ ಹಾಗೂ ಪಪಂ ಮುಖ್ಯಾಧಿಕಾರಿ ಕಡತಗಳಿಗೆ ಸಹಿ ಹಾಕುವ ವೇಳೆ ಎಲ್ಲ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಕೆರೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿರುವುದು ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾನ್ವಿ ತಾಲೂಕಿನಲ್ಲಿ ಎರಡು, ಲಿಂಗಸುಗೂರಿನಲ್ಲಿ ಎರಡು, ಮುದಗಲ್‌ನಲ್ಲಿ ಮೂರು ಮತ್ತು ದೇವದುರ್ಗ ತಾಲೂಕಿನಲ್ಲಿ ಮೂರು ಕೆರೆಗಳಿವೆ. ಕೆರೆಗಳನ್ನು ಸರ್ವೆ ಮಾಡಿದ ನಂತರ ಅವುಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ನಗರದ ಐತಿಹಾಸಿಕ ಮಾವಿನ ಕೆರೆ ಅಭಿವೃದ್ಧಿ ಪಡಿಸಬೇಕಾಗಿದೆ. ಕೆರೆ ಸುತ್ತ ಗಿಡ ನೆಡಬೇಕು. ಸಾರ್ವಜನಿಕರ ವಾಯು ವಿಹಾರಕ್ಕೆ ಮಾವಿನ ಕೆರೆ ಸುತ್ತ ರಸ್ತೆ ನಿರ್ಮಿಸಬೇಕು. ವಿದ್ಯುತ್ ದೀಪ ಅಳವಡಿಸಲಾಗುವುದು ಎಂದು ಹೇಳಿದರು. ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಮಹೇಂದ್ರಕುಮಾರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.