ರಾಯಚೂರು: ಬಿಜೆಪಿ ಹೈಕಮಾಂಡ್ ಪಾಲಿಗೆ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದ್ದ ಮಸ್ಕಿ ಕ್ಷೇತ್ರ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಮದ್ದರೆಯಲು ಹೈಕಮಾಂಡ್ ಕಾಡಾ ಬಳಸಿಕೊಂಡಿದೆ. ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಬಸನಗೌಡ ತುರ್ವಿಹಾಳ ಅವರಿಗೆ ಮುನಿರಾಬಾದ್‌ನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿ ಕಾರ ಅಧ್ಯಕ್ಷ ಸ್ಥಾನ ಕರುಣಿಸುವ ಮೂಲಕ ಬಂಡಾಯ ಶಮನಕ್ಕೆ ಮುನ್ನುಡಿ ಬರೆದಿದೆ.
ಈ ಕುರಿತು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಿಎಂ ಬಿ.ಎಸ್ .ಯಡಿಯೂರಪ್ಪ, ರಾಜ್ಯ ಸಚಿವ ದರ್ಜೆ ಸ್ಥಾನಮಾನದೊಂದಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶ ಹೊರಡಿಸುವಂತೆ ಸೂಚನೆ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 212 ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಸನಗೌಡ ತುರ್ವಿಹಾಳ ಉಪ ಚುನಾವಣೆಯಲ್ಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಟಿಕೆಟ್ ಪಕ್ಕಾ ಎಂಬ ಆಶ್ವಾಸನೆ ಮೇರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪ್ರತಾಪಗೌಡ ಪಾಟೀಲರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಅವರ ಆತಂಕಕ್ಕೆ ಕ್ಷೇತ್ರದಲ್ಲಿರುವ ವಿರೋ ಧಿ ಅಲೆ ಹಾಗೂ ಬಸನಗೌಡರ ಪರ ಹೆಚ್ಚುತ್ತಿರುವ ಒಲವೂ ಕಾರಣ. ಆದರೆ, ಬಸನಗೌಡರನ್ನು ಮುಖ್ಯ ವೇದಿಕೆಯಿಂದ ಪಕ್ಕಕ್ಕೆ ಸರಿಸುವ ಮೂಲಕ ಬಿಜೆಪಿ ಹೈಕಮಾಂಡ್ ಅನರ್ಹ ಶಾಸಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ.
ಪ್ರತ್ಯೇಕ ಸಭೆ ನಡೆಸಿ ಪ್ರಚಾರ: ದಿನೇದಿನೆ ಬಸನಗೌಡ ಚುನಾವಣೆ ತಯಾರಿ ಚಟುವಟಿಕೆಗಳು ಹೆಚ್ಚಾಗಿದ್ದವು. ಈಚೆಗೆ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ ಮತ್ತು ಬಸನಗೌಡ ತುರ್ವಿಹಾಳ ಒಂದೇ ದಿನ ಪ್ರತ್ಯೇಕ ಸಭೆ ನಡೆಸಿದ್ದರು. ಇದರಿಂದ ಬಸನಗೌಡ ಬಂಡಾಯಕ್ಕೆ ಅಣಿಯಾಗುತ್ತಿರುವ ಸಂದೇಶ ಹೈಕಮಾಂಡ್‌ಗೂ ತಲುಪಿತ್ತು. ಆದರೆ, ಬಸನಗೌಡ ಮಾತ್ರ ತಾವು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದಷ್ಟೇ ಹೇಳಿಕೊಂಡು ಓಡಾಡುತ್ತಿದ್ದು, ಬಂಡಾಯದ ಬಗ್ಗೆ ಎಲ್ಲೂ ಚಕಾರ ಎತ್ತಿರಲಿಲ್ಲ.
ಸೋಲಿನ ಭೀತಿ: ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲದಲ್ಲಿದ್ದವು. ಶಾಸಕರ ರಾಜೀನಾಮೆ ಬಳಿಕ ಬಿಜೆಪಿ ಬಲ ಹೆಚ್ಚಾಗಿದೆ. ಕಾಂಗ್ರೆಸ್ ಶಾಸಕರೇ ಪಕ್ಷ ತೊರೆದಿರುವುದು ಕೈ ಪಕ್ಷದ ಹಿನ್ನಡೆಗೆ ಕಾರಣವಾಗಿತ್ತು. ಈಗ ಬಸನಗೌಡರಿಗೆ ಟಿಕೆಟ್ ಸಿಗದೆ ಬಂಡಾಯಕ್ಕೆ ಮುಂದಾದಲ್ಲಿ ಅವರ ಮೇಲಿನ ಅನುಕಂಪದ ಅಲೆ ಬಿಜೆಪಿಗೆ ಶಾಪವಾಗಿ ಕಾಡಬಹುದು. ಹೀಗಾಗಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದರ ಜತೆಗೆ ಬಂಡಾಯ ಸಾರದಂತೆ ಬಿಜೆಪಿ ತಂತ್ರ ಹೆಣೆದಿದೆ.
ಮಗನಿಗೂ ವೇದಿಕೆ: ಈಚೆಗೆ ಉಪ ಚುನಾವಣೆ ದಿನಾಂಕ ಘೋಷಣೆಯಾದಾಗ ಮಸ್ಕಿ ಕ್ಷೇತ್ರಕ್ಕೆ ಮಾತ್ರ ಘೋಷಣೆ ಆಗಿರಲಿಲ್ಲ. ಅಡ್ಡ ಮತದಾನವಾಗಿದ್ದು ಶಾಸಕ ಸ್ಥಾನ ರದ್ದುಗೊಳಿಸುವಂತೆ ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ನ್ಯಾಯಾಲಯದ ಮೊರೆ ಹೋಗಿದ್ದರು. ಅದರ ಜತೆಗೆ ಪ್ರತಾಪಗೌಡ ಅನರ್ಹತೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಒಂದು ವೇಳೆ ಪ್ರತಾಪಗೌಡ ಸ್ಪರ್ಧಿಸದಿದ್ದಲ್ಲಿ ಅವರ ಪುತ್ರ ಪ್ರಸನ್ನ ಪಾಟೀಲರನ್ನು ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾರ ನಡೆದಿತ್ತು.