ರಾಯಚೂರು: ಲೋಕ ಅದಾಲತ್ ಜನಸ್ನೇಹಿ ಕಾರ್ಯಕ್ರಮವಾಗಿದ್ದು, ಬಹು ವರ್ಷಗಳಿಂದ ನಡೆಯುತ್ತಿರುವ ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ನೆರವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ್ ಹೇಳಿದರು.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಶನಿವಾರ ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜನತಾ ನ್ಯಾಯಾಲಯದ ಲೋಕ ಅದಾಲತ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಅನೇಕ ನ್ಯಾಯಾಲಯಗಳಲ್ಲಿ ಹಲವು ವರ್ಷಗಳಿಂದ ಬಗೆಹರಿಯದ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬಹುದು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ ತ್ವರಿತ ವಿಚಾರಣೆಯ ಮೂಲಕ ನ್ಯಾಯ ಪಡೆಯುವುದು ಕಕ್ಷಿದಾರನ ಹಕ್ಕಾಗಿದೆ. ಜಿಲ್ಲಾ ಕೇಂದ್ರದಲ್ಲಿ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಲೋಕ ಅದಾಲತ್ ನಡೆಸುತ್ತಿದ್ದು, 4,752 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕವೇ ಇತ್ಯರ್ಥ ಮಾಡಲಾಗುತ್ತಿದೆ ಎಂದರು.
ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ 10 ಬೆಂಚ್ ಸ್ಥಾಪಿಸಿ ಪೀಠ ನ್ಯಾಯಾಧೀಶರು, ವಕೀಲರು ಹಾಗೂ ಸಂಧಾನಕಾರರು, ಕಕ್ಷಿದಾರರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡಲಾಗುವುದು. ಪ್ರತಿ ವರ್ಷ ನಾಲ್ಕು ಸಲ ಅದಾಲತ್ ಆಯೋಜಿಸಲಾಗುವುದು ಎಂದರು.
ಈ ಹಿಂದೆ ನಡೆದ ಅದಾಲತ್‌ನಲ್ಲಿ ಮಾಹಿತಿ ಕೊರತೆಯಿಂದ ಕಕ್ಷಕಿದಾರರಿಗೆ ಸ್ಪಂದನೆ ಸಿಕ್ಕಿರಲಿಲ್ಲ. ಈ ಬಾರಿ ಶೇ.60ಕ್ಕೂ ಪ್ರಕರಣ ಬಗೆಹರಿಸಲಾಗುವುದು. ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ 32,000 ಪ್ರಕರಣಗಳ ವಿಚಾರಣೆ ಬಾಕಿ ಉಳಿದಿವೆ. ಸಂಧಾನಕಾರರಿಗೆ ತರಬೇತಿ ನೀಡಲಾಗಿದೆ. ಎರಡೂ ಕಡೆಯವರಿಗೆ ತಿಳಿವಳಿಕೆ ಮೂಡಿಸಿ ರಾಜಿ ಮಾಡಿಕೊಡಲಾಗುವುದು. ಮೋಟಾರ್ ವಾಹನ ಕಾಯ್ದೆ, ವೈವಾಹಿಕ, ಕ್ರಿಮಿನಲ್, ಬ್ಯಾಂಕ್ ಹಾಗೂ ವಿಮಾ ಕ್ಷೇತ್ರ ಸೇರಿ ವಿವಿಧ ಬಗೆಯ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗುವುದು. ಜನತಾ ನ್ಯಾಯಾಲಯದಲ್ಲಿ ಬರುವ ರಾಜಿ ಸಂಧಾನದ ಪ್ರಕರಣಗಳಿಗೆ ಪೂರ್ವಭಾವಿ ತಯಾರಿಯಾಗಿ ಸಂಘ-ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಸರ್ಕಾರಿ ಅಭಿಯೋಜಕ ಟಿ.ಚಂದ್ರಶೇಖರ, ಸುಜಾತಾ, ಹೆಚ್ಚುವರಿ ನ್ಯಾಯಾಧೀಶ ಮುಸ್ತಫಾ, ಬೆಂಚ್ ಪೀಠದ ನ್ಯಾಯಾಧೀಶರು, ವಕೀಲರು, ನ್ಯಾಯಾಲಯ ಸಿಬ್ಬಂದಿ ಸೇರಿ ಇತರರಿದ್ದರು.