Advertisement

ಸಮ ಸಮಾಜದ ಹರಿಕಾರ ಕನಕದಾಸರು

11:55 AM Nov 16, 2019 | Naveen |

ರಾಯಚೂರು: ಸಮ ಸಮಾಜದ ತಿರುಳು ಹೊಂದಿದ್ದ ಸಾಹಿತ್ಯ ರಚಿಸುವ ಮೂಲಕ ಸಾಮಾಜಿಕ ಕ್ರಾಂತಿ ಮೂಡಿಸಿದ ಕನಕದಾಸರ ಆದರ್ಶ ಎಂದೆಂದಿಗೂ ಆದರ್ಶಪ್ರಾಯ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಭಿಪ್ರಾಯ ಪಟ್ಟರು.

Advertisement

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತಕವಿ ಕನಕದಾಸರ 532ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಾಸಶ್ರೇಷ್ಠ, ಸಂತಕವಿ ಕನಕದಾಸರ ತತ್ವಾದರ್ಶಗಳನ್ನು ಅನುಸರಿಸಿದಾಗಲೇ ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ. ಹರಿದಾಸ ಪರಂಪರೆಗೆ 500 ವರ್ಷಗಳ ಇತಿಹಾಸವಿದೆ. ಕನಕದಾಸರ ಮೂಲ ಹೆಸರು ತಿಮ್ಮಯ್ಯ ನಾಯಕ. ಮುಂದೆ ಅವರು ಹಾಡುತ್ತಲೇ ಕನಕದಾಸರಾಗಿ ಪ್ರಸಿದ್ಧಿ ಪಡೆದರು. ಜನರಿಗಾಗಿ ಬದುಕು ಮುಡಿಪಾಗಿಟ್ಟ ಇಂಥ ಶ್ರೇಷ್ಠ ಸಂತರ ಮೌಲ್ಯಗಳನ್ನು ಅರಿತು ಅವರ ದಾರಿಯಲ್ಲಿ ಸಾಗಬೇಕು. ಕನಕದಾಸರು ಮನುಕುಲದ ಆಸ್ತಿ. ಹಾಲುಮತ ಸಮಾಜ ಹಾಲಿನಷ್ಟೇ ಶ್ರೇಷ್ಠ ಎಂಬ ಮಾತಿದೆ. ಸಮಾಜದ ಜನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದರು.

ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ಕನಕ ಎಂದರೆ ಚಿನ್ನ. ಅಂತಹ ಚಿನ್ನವನ್ನು  ಧಿಕ್ಕರಿಸಿ ಬಡವರ ಕಷ್ಟಗಳಿಗೆ ಶ್ರಮಿಸುವಂತಹ ಗುಣ ಕನಕದಾಸರು ಹೊಂದಿದ್ದರು. ಹಾಲುಮತ ಹಾಗೂ ವಾಲ್ಮೀಕಿ ಸಮಾಜ ಸೋದರ ಭಾವ ಹೊಂದಿವೆ. ಆದರೆ, ಕೆಲ ಕಿಡಿಗೇಡಿಗಳು ಸಮಾಜಗಳ ಮಧ್ಯೆ ದ್ವೇಷ ಸೃಷ್ಟಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹರಿಬಿಡುತ್ತಿದ್ದು, ಅದಕ್ಕೆಲ್ಲ ಕಿವಿಗೊಡದೆ ಶಾಂತವಾಗಿರಬೇಕು ಎಂದು ಕರೆ ನೀಡಿದರು.

ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ| ಸಾಗರ್‌ ಎಚ್‌.ತೆಕ್ಕಣನವರ್‌ ವಿಶೇಷ ಉಪನ್ಯಾಸ ನೀಡಿ, ಬುದ್ಧ, ಬಸವೇಶ್ವರ, ವಾಲ್ಮೀಕಿ, ಕನಕದಾಸರಂತಹ ಶ್ರೇಷ್ಠರು ಯಾವುದೋ ಒಂದು ಸಮಾಜ ಆಸ್ತಿಯಲ್ಲ. ಕೀರ್ತನೆಗಳ ಮೂಲಕ ಸಮಾಜದ ಸುಧಾರಣೆ ಮಾಡಿದರು.

Advertisement

ಸಂಸದ ರಾಜಾ ಅಮರೇಶ್ವರ ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರಿಗೆ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ, ಎಡಿಸಿ ದುರುಗೇಶ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿಬಾಬು, ಗುರುವಿನ ಚನ್ನಬಸವ ಗಬ್ಬೂರು, ಮುಖಂಡ ನೀಲಕಂಠ ಬೇವಿನ್‌, ಸ್ವಾಗತ ಸಮಿತಿ ಅಧ್ಯಕ್ಷ ಬಿ.ಬಸವರಾಜ, ನೌಕರರ ಸಂಘದ ಅಧ್ಯಕ್ಷ ರಾಜಶೇಖರ ದಿನ್ನಿ, ತಾಲ್ಲೂಕು ಅಧ್ಯಕ್ಷ ನಾಗರಾಜ ಇತರರಿದ್ದರು, ಹನುಮಂತಪ್ಪ ಜಾಲಿಬೆಂಚಿ, ಎಂ.ಬಿ.ಪಾಟೀಲ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next