ರಾಯಚೂರು: ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಅರ್ಹ ಫಲಾನುಭವಿಗಳಿಗೆ ಭೂಮಿ ಪಟ್ಟಾ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ದಂಡೋರಾ ಎಂಆರ್‌ಎಚ್ಎಸ್ (ಬೇರಿ ಬಣ) ಹಾಗೂ ಸರ್ಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಸದಸ್ಯರು ಶನಿವಾರ ಜಂಟಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಭೀಕರ ಬರವಿದ್ದು, ರೈತಾಪಿ ವರ್ಗ ಕಂಗಲಾಗಿದೆ. ಈ ಬಾರಿಯೂ ಮುಂಗಾರು ಇನ್ನೂ ಆಗಮಿಸಿಲ್ಲ. ಇಂಥ ವೇಳೆ ಸಾಗುವಳಿದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ನಿರ್ಗತಿಕರಿಗೆ ಆ ಭೂಮಿಯನ್ನು ಪಟ್ಟಾ ಮಾಡಿಕೊಡುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೆಲ ಅಕ್ರಮಕೋರರು ಸರ್ಕಾರಿ ಭೂಮಿಯನ್ನು ಕಬಳಿಸಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಈ ಅಕ್ರಮಕ್ಕೆ ಸರ್ಕಾರಿ ಅಧಿಕಾರಿಗಳೇ ಸಹಕಾರ ನೀಡುತ್ತಿದ್ದಾರೆ. ಸರ್ಕಾರಿ ಭೂ ಕಬಳಿಕೆ ನಡೆಸಿದ ಭೂಗಳ್ಳರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಸಾಕಷ್ಟು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ದಕ್ಕುತ್ತಿಲ್ಲ. ನಗರಗಳಲ್ಲಿ ವಾಸಿಸುವ ನಿರ್ಗತಿಕರಿಗೆ ನಿವೇಶನ ಹಂಚಿಕೆ ಮಾಡುತ್ತಿಲ್ಲ. ಈಗ ವಾಸಿಸುತ್ತಿರುವ ಕೆಲವರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಆ ಬಡಾವಣೆಗಳಿಗೆ, ಸ್ಲಂಗಳಿಗೆ ಮೂಲ ಸೌಲಭ್ಯ ಕಲ್ಪಿಸದೆ ವಂಚಿಸಲಾಗುತ್ತಿದೆ. ಎಲ್ಲ ಕಡೆಯೂ ಸೂಕ್ತ ಮೂಲ ಸೌಕರ್ಯ ಕಲ್ಪಿಸಬೇಕು. ನಗರದ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಬಡ ಜನರಿಗೆ ಆಶ್ರಯ ಮನೆ ಮಂಜೂರು ಮಾಡಬೇಕು. ದಲಿತ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರು ಸೇರಿ ಸರ್ಕಾರಿ ನೌಕರರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಕಾನೂನು ಜಾರಿಗೊಳಿಸಿ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಜೆ.ಮಲ್ಲಾಪುರದಲ್ಲಿ ದಲಿತರಿಗೆ ಹಂಚಿಕೆಯಾಗಿರುವ ನಿವೇಶನಗಳಲ್ಲಿ ಇತರ ಸಮುದಾಯದವರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಒತ್ತುವರಿದಾರರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಎಂಆರ್‌ಎಚ್ಎಸ್ ಜಿಲ್ಲಾ ವ್ಯವಸ್ಥಾಪಕ ಅಧ್ಯಕ್ಷ ಜೆ.ಶರಣಬಸವ, ವಿವಿಧ ಸಂಘಟನೆಗಳ ಸದಸ್ಯರಾದ ಶ್ರೀನಿವಾಸ ಕೊಪ್ಪರ, ನಾಗರಾಜ ಪಿರಂಗಿ, ಹನುಮೇಶ, ಎ.ಸೋಮಶೇಖರ, ರವಿ, ನರಸಪ್ಪ, ಬಸವರಾಜ, ಕರೆಯಪ್ಪ, ಶರಣಪ್ಪ, ಜೈ ಪ್ರಭು, ರಾಮು, ಜಿಂದಪ್ಪ ಇತರರಿದ್ದರು