ರಾಯಚೂರು: 10 ದಿನಗಳ ಹಿಂದೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಸಾಕಷ್ಟು ವಸ್ತುಗಳು ಸುಟ್ಟು ಹೋಗಿದ್ದವು. ಅದರ ದುರಸ್ತಿ ಕಾರ್ಯ ಇನ್ನೂ ನಡೆಯುತ್ತಿದ್ದು, ದೈನಂದಿನ ಕೆಲಸ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ ಎನ್ನಲಾಗುತ್ತಿದೆ.
ಜೂ.9ರಂದು ರಾತ್ರಿ ವಿದ್ಯುತ್ ಅವಘಡ ಸಂಭವಿಸಿದ್ದು, 10ನೇ ತಾರೀಖು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಕಚೇರಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ನಾಲ್ಕಾರು ಕಂಪ್ಯೂಟರ್‌ಗಳು, ಕೆಲ ದಾಖಲೆಗಳು ಹಾಗೂ ಪೀಠೊಪಕರಣಗಳು ಸುಟ್ಟು ಹೋಗಿದ್ದವು. ಈಗ ಕಚೇರಿಯಲ್ಲಿ ಸಂಪೂರ್ಣ ಮರು ವೈರಿಂಗ್ ಕಾರ್ಯ ಕೈಗೆತ್ತಿಕೊಂಡಿದ್ದು, 10 ದಿನ ಕಳೆದರೂ ಇನ್ನೂ ನಡೆಯುತ್ತಿದೆ. ಅದರ ಜತೆಗೆ ಪೀಠೊಪಕರಣಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಆದರೆ, ನಾನಾ ಕೆಲಸ ಹೊತ್ತು ಆಗಮಿಸುವ ಸಾರ್ವಜನಿಕರಿಗೆ ತಕ್ಷಣಕ್ಕೆ ಕೆಲಸ ಆಗುತ್ತಿಲ್ಲ. ಇದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿ ಹೋಗಬೇಕಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣಕ್ಕೆ ಈಗ ಕೆಲ ಕಂಪ್ಯೂಟರ್‌ಗಳನ್ನು ಸ್ಥಳಾಂತರ ಮಾಡಿದ್ದು, ತುರ್ತು ಕೆಲಸಗಳನ್ನು ಅಲ್ಲಿಯೇ ಮಾಡಿಕೊಡಲಾಗುತ್ತಿದೆ. ಆದರೆ, ಉಳಿದ ಕೆಲಸ ಯಾವುದೇ ಕೆಲಸಗಳಿದ್ದರೂ ಸದ್ಯಕ್ಕೆ ಆಗುವುದಿಲ್ಲ ಎಂದು ಹಿಂದಕ್ಕೆ ಕಳುಹಿಸಲಾಗುತ್ತಿದೆ.
ಹಳೇ ಕಟ್ಟಡವಾದ್ದರಿಂದ ಸಮಸ್ಯೆ: ಜಿಲ್ಲಾಧಿಕಾರಿ ಕಚೇರಿ ತುಂಬಾ ಹಳೇ ಕಟ್ಟಡವಾಗಿದ್ದು, ಅಲ್ಲಿ ಈ ಮುಂಚೆ ಮಾಡಿದ್ದ ವೈರಿಂಗ್ ಕೂಡ ಹಳೇ ಮಾದರಿಯಲ್ಲಿತ್ತು. ಈಗ ಎಲ್ಲವನ್ನು ಹೊಸದಾಗಿ ಮಾಡುತ್ತಿದ್ದು, ಸಮಸ್ಯೆಯಾಗುತ್ತಿದೆ. ಮುಖ್ಯವಾಗಿ ಕಂಪ್ಯೂಟರ್‌ಗಳಿಗೆ ವೈರಿಂಗ್ ವ್ಯವಸ್ಥೆ ಮಾಡಬೇಕಿದೆ. ಈಗ ನಡೆದ ಅವಘಡದಿಂದ ಇನ್ ವಾರ್ಡ್‌ನ ಬಹುತೇಕ ಕಂಪ್ಯೂಟರ್‌ಗಳ ಸಂಪರ್ಕ ಕಡಿದು ಹೋಗಿದೆ. ಕೆಲ ಕಂಪ್ಯೂಟರ್‌ಗಳ ಹಾರ್ಡ್ ಡಿಸ್ಕ್ಗೂ ಧಕ್ಕೆ ಆಗಿದೆ ಎನ್ನಲಾಗುತ್ತಿದೆ.
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಕೆಲಸ ಮುಗಿಯಲು ಇನ್ನೂ ನಾಲ್ಕಾರು ದಿನಗಳಾದರೂ ಬೇಕಾಗಬಹುದು. ವೈರಿಂಗ್ ಸಂಪೂರ್ಣ ಹಾಳಾಗಿದ್ದರಿಂದ ಎಲ್ಲವನ್ನು ಹೊಸದಾಗಿ ಮಾಡಲಾಗುತ್ತಿದೆ. ಹೀಗಾಗಿ ಕೆಲಸ ತುಸು ವಿಳಂಬವಾಗುತ್ತಿದೆ. ಆದಷ್ಟು ಶೀಘ್ರದಲ್ಲೇ ದುರಸ್ತಿ ಮಾಡಿ ಮುಗಿಸುವುದಾಗಿ ತಿಳಿಸುತ್ತಾರೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ.
ಕಂಪ್ಯೂಟರ್‌ಗಳ ಕೊರತೆಯಿಂದ ಸಿಬ್ಬಂದಿಗೂ ಕೆಲಸವಿಲ್ಲದಾಗಿದೆ. ಪ್ರತಿ ಒಬ್ಬ ಸಿಬ್ಬಂದಿಗೂ ಪ್ರತ್ಯೇಕ ಕಂಪ್ಯೂಟರ್ ನೀಡಿದ್ದು, ಬಹುತೇಕ ಕೆಲಸ ಕಾರ್ಯಕ್ಕೂ ಅವುಗಳನ್ನೇ ಅವಲಂಬಿಸಲಾಗಿತ್ತು. ಈಗ ಏನು ಕೇಳಿದರೂ ಕಂಪ್ಯೂಟರ್ ಇಲ್ಲ ಎನ್ನುವ ಸಿದ್ಧ ಉತ್ತರ ಸಿಗುತ್ತಿದೆ.
ಆದರೆ, ಜಿಲ್ಲೆಯ ನಾನಾ ಭಾಗಗಳಿಂದ ನಿತ್ಯ ಒಂದಲ್ಲ ಒಂದು ಕೆಲಸದ ಮೇಲೆ ಬರುವವರಿಗೆ ಅನನುಕೂಲ ಆಗದ ರೀತಿಯಲ್ಲಿ ತ್ವರಿತಗತಿಯಲ್ಲಿ ಕೆಲಸ ಮಾಡಿ ಮುಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.