ರಾಯಚೂರು: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಟಾಕಿ ವ್ಯಾಪಾರಿಗಳು ಚೀನಾ ಸರಕಿಗೆ ಗುಡ್ ಬೈ ಹೇಳಿದ್ದಾರೆ. ಆದರೆ, ಪರಿಸರ ಪಟಾಕಿಗಳ ಬಳಕೆ ಮಾತ್ರ ನೆಪ ಮಾತ್ರಕ್ಕೆ ಎನ್ನುವಂತಿದೆ. ಪಟಾಕಿ ವಿಚಾರದಲ್ಲಿ ಪರಿಸರ ಹಾನಿ ಬಗ್ಗೆ ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಎಲ್ಲಿಯೂ ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಅದರ ಜತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿಲ್ಲ. ಹೀಗಾಗಿ ಗ್ರಾಹಕರು ಎಂದಿನಂತೆ ಪರಿಸರಕ್ಕೆ ಧಕ್ಕೆ ಆಗುವಂಥ ಪಟಾಕಿಗಳನ್ನೇ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನ ಇರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಚೀನಾ ಸರಕುಗಳನ್ನು ಸಂಪೂರ್ಣ ತ್ಯಜಿಸಿದ್ದಾರೆ. ಮೇಡ್ ಇನ್ ಇಂಡಿಯಾ, ಮೇಡ್ ಇನ್ ಶಿವಕಾಶಿ ಪಟಾಕಿಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ, ಅವುಗಳನ್ನೇ ಪರಿಸರ ಪಟಾಕಿ ಎಂದು ವರ್ತಕರು ಹೇಳುತ್ತಿದ್ದಾರೆ.
ಸಂಘ ಸಂಸ್ಥೆಗಳು ಗೌಣ: ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾವುದೇ ಸಂಘ ಸಂಸ್ಥೆಗಳು ಕೂಡ ಹೆಚ್ಚೇನು ಮುತುವರ್ಜಿ ವಹಿಸಿಲ್ಲ. ಯಾವುದೇ ಜಾಗೃತಿ ರ್ಯಾಲಿಗಳಾಗಲಿ, ಕಾರ್ಯಕ್ರಮಗಳಾಗಲಿ ಆಯೋಜಿಸಿಲ್ಲ. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವ ಕೆಲಸವಾಗುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪಟಾಕಿ ವ್ಯಾಪಾರ ಮಾತ್ರ ಎಗ್ಗಿಲ್ಲದೇ ಸಾಗುತ್ತಿದೆ.
ಎಸ್‌ಪಿ ಜಾಗೃತಿ: ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟಲು ಪಟಾಕಿಗಳನ್ನು ಹಚ್ಚುವ ವೇಳೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ| ಸಿ.ಬಿ. ವೇದಮೂರ್ತಿ ಪ್ರಕಟಣೆ ನೀಡಿ ಜಾಗೃತಿಗೆ ಮುಂದಾಗಿದ್ದಾರೆ.
ಪಟಾಕಿಗಳನ್ನು ಹಚ್ಚುವ ವೇಳೆ ಕಾಟನ್ ಬಟ್ಟೆ ಧರಿಸಬೇಕು. ಬಕೆಟ್ ನೀರು ಮತ್ತು ಮರಳು ಸಂಗ್ರಹಿಸಿರಬೇಕು. ಹತ್ತಿರದ ಆಸ್ಪತ್ರೆಗಳು, ಆಂಬ್ಯುಲೆನ್ಸ್‌ಗಳ ಮೊಬೈಲ್ ನಂಬರ್ ಹೊಂದಿರಬೇಕು. ಮಕ್ಕಳು, ವೃದ್ಧರು, ವಾಹನಗಳು, ದನ-ಕರುಗಳು ಮತ್ತು ಇನ್ನಿತರ ಪ್ರಾಣಿಗಳ ಓಡಾಟ ನೋಡಿಕೊಂಡು ಪಟಾಕಿ ಹಚ್ಚಬೇಕು. ರಾಕೆಟ್ ಪಟಾಕಿಗಳು ಮೇಲಕ್ಕೆ ಹೋಗಿ ಸಿಡಿಯುವುದರಿಂದ ಬಯಲು ಸ್ಥಳದಲ್ಲಿ ಅಥವಾ ಮನೆಯ ಮಾಳಿಗೆ ಮೇಲೆ ಹಚ್ಚಬೇಕು. ಸರ ಪಟಾಕಿಗಳನ್ನು ಒಮ್ಮೆಲೆ ಹಚ್ಚುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಆಗಲಿದ್ದು, ಅಂಥವುಗಳನ್ನು ಸುಪ್ರಿಂಕೋರ್ಟ್ ನಿಷೇಧಿ ಸಿದೆ. ಸುಪ್ರೀಂಕೋರ್ಟ್
ನಿರ್ದೇಶನದಂತೆ ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಸಿಡಿಸಬೇಕು. ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಪ್ರಾರಂಭಿಸಿರುವ ಅಂಗಡಿಗಳಲ್ಲಿ ಮಾತ್ರ ಸಾರ್ವಜನಿಕರು
ಪಟಾಕಿಗಳನ್ನು ಖರೀದಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.