ರಾಯಚೂರು: ಕೋವಿಡ್ ನಿಂದ ಇಡೀ ವಿಶ್ವದ ಮಾರುಕಟ್ಟೆಯೇ ತಲ್ಲಣಗೊಂಡರೆ, ರಾಜ್ಯದ ರೈಸ್ ಮಿಲ್‌ಗಳು ಮಾತ್ರ ಕಳೆದ ವರ್ಷಕ್ಕಿಂತ ಹೆಚ್ಚೇ ಕಾರ್ಯೋನ್ಮುಖವಾಗಿವೆ. ಲಾಕ್‌ಡೌನ್ ವೇಳೆಯೂ ನಿರೀಕ್ಷೆ ಮೀರಿ ಅಕ್ಕಿ ಉತ್ಪಾದನೆ ಮಾಡಿದ್ದು, ಬೇಡಿಕೆಯಷ್ಟು ಪೂರೈಸಲು ಸಿದ್ಧವಾಗಿವೆ.
ಲಾಕ್‌ಡೌನ್ ಆರಂಭದ ವೇಳೆ ಯಾವುದೇ ವಾಹನ ಸಂಚಾರಕ್ಕೆ ಅನುವು ನೀಡುವುದಿಲ್ಲ ಎಂದು ತಿಳಿಸಿದ್ದರಿಂದ ರೈಸ್‌ಮಿಲ್ ಮಾಲೀಕರು ಕೂಡ ಮೌನಕ್ಕೆ ಶರಣಾಗಿದ್ದರು. ಇದು ರೈತಾಪಿ ವರ್ಗವನ್ನೂ ಕಂಗೆಡಿಸಿತ್ತು. ಯಾವಾಗ ಉತ್ಪಾದನೆಗೆ ನಿರ್ಬಂಧ ತೆರವುಗೊಂಡಿತೋ ಮಿಲ್‌ಗಳು ಪುನಾರಂಭಗೊಂಡವು. ಇದರಿಂದ ಭತ್ತ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.
2 ಸಾವಿರ ಮಿಲ್‌ಗಳು: ರಾಜ್ಯದಲ್ಲಿ ಎರಡು ಸಾವಿರ ರೈಸ್‌ಮಿಲ್‌ಗಳು ಕಾರ್ಯಾರಂಭಿಸುತ್ತಿವೆ. ಈ ಪೈಕಿ ಒಂದು ಸಾವಿರ ಮಿಲ್‌ಗಳು ಎರಡು ಟನ್ ಹಾಗೂ ಒಂದು ಸಾವಿರ ನಾಲ್ಕು ಟನ್ ಸಾಮರ್ಥ್ಯದ ಮಿಲ್ ಗಳಿವೆ. ಒಂದೊಂದು ಮಿಲ್‌ನಲ್ಲಿ ಕನಿಷ್ಟ ಸಾವಿರ ಕ್ವಿಂಟಲ್ ಅಕ್ಕಿ ಉತ್ಪಾದನೆ ಆಗುತ್ತಿದೆ. ನಿತ್ಯ ಎರಡು ಲಕ್ಷ ಚೀಲ ಭತ್ತ ಮಿಲ್‌ಗಳಿಗೆ ಬರುತ್ತಿದೆ. ಬೇರೆ ರಾಜ್ಯದಿಂದ ಈಗ ಅಕ್ಕಿ ಆಮದು ಸ್ಥಗಿತಗೊಂಡಿದ್ದು, ರಾಜ್ಯದ ಅಕ್ಕಿಗೆ ಇಲ್ಲಿಯೇ ನಿರೀಕ್ಷೆ ಮೀರಿ ಬೇಡಿಕೆ ಇದೆ. ಎಷ್ಟೇ ಬೇಡಿಕೆ ಬಂದರೂ ಪೂರೈಸುವಷ್ಟು ಅಕ್ಕಿ ಉತ್ಪಾದನೆ ಮಾಡಲಾಗುತ್ತಿದೆ ಎನ್ನುತ್ತಾರೆ ರೈಸ್ ಮಿಲ್ ಮಾಲೀಕರು.
ಎರಡು ಬೆಳೆಗೆ ನೀರು: ಭತ್ತದ ಕಣಜ ಎಂದೇ ಖ್ಯಾತಿ ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಜಿಲ್ಲೆಯ ಅಕ್ಕಿ ದೇಶ-ವಿದೇಶಗಳಿಗೂ ರಫ್ತಾಗುತ್ತಿದೆ. ಪ್ರತಿ ವರ್ಷ ಮಳೆ ಪ್ರಮಾಣ ಕಡಿಮೆಯಾಗಿ ಒಂದು ಬೆಳೆಗೆ ನೀರು ಸಿಗುತ್ತಿತ್ತು. ಆದರೆ, ಈ ಬಾರಿ ಉತ್ತಮ ಮಳೆಯಾಗಿದ್ದು, ತುಂಗಭದ್ರಾ ಜಲಾಶಯದಿಂದ ಎರಡು ಬೆಳೆಗೆ ನೀರು ಸಿಕ್ಕಿದೆ. ಹೀಗಾಗಿ ಭತ್ತ ಉತ್ಪಾದನೆ ಪ್ರಮಾಣವೂ ಹೆಚ್ಚಾಗಿದೆ.
ಆಂಧ್ರದಿಂದ ಆಮದು ಸ್ಥಗಿತ: ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ನೆರೆ ರಾಜ್ಯದ ಭತ್ತ ಆಮದು ನಿಲ್ಲಿಸಿರುವುದೂ ಒಂದು. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಬಹುತೇಕ ರೈತರು ಜಿಲ್ಲೆಯ ರೈಸ್‌ಮಿಲ್‌ಗಳಿಗೆ ಭತ್ತವನ್ನು ಕಳುಹಿಸುತ್ತಿದ್ದರು. ಆ ರಾಜ್ಯಗಳಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದ ಕಾರಣ ಅಲ್ಲಿನ ಭತ್ತವನ್ನು ತಂದರೆ ಖರೀದಿಸುವುದಿಲ್ಲ ಎಂದು ರೈಸ್‌ಮಿಲ್‌ಗಳ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ರಾಜ್ಯದ ಬೆಳೆಗಾರರು ಬೇರೆ ರಾಜ್ಯಗಳಿಗೆ ಕಳುಹಿಸುವುದಕ್ಕೆ ಅವಕಾಶ ಇಲ್ಲ. ಇದರಿಂದ ರಾಜ್ಯದ ಮಿಲ್‌ಗಳಿಗೆ ಬಿಡುವಿಲ್ಲದ ಸನ್ನಿವೇಶವಿದೆ.
ಅಕ್ಕಿ ಉತ್ಪಾದನೆ ಕ್ಷೇತ್ರದ ಮೇಲೆ ಕೊರೊನಾ ಯಾವುದೇ ಪರಿಣಾಮ ಬೀರಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಿರಂತರವಾಗಿ ಭತ್ತ ಉತ್ಪಾದನೆಯಲ್ಲಿ ತೊಡಗಿದ್ದೇವೆ. ರಾಜ್ಯದಿಂದ ಎಷ್ಟೇ ಬೇಡಿಕೆ ಬಂದರೂ ಪೂರೈಸುವಷ್ಟು ಅಕ್ಕಿ ಉತ್ಪಾದಿಸಲಾಗುತ್ತಿದೆ. ಇದರಿಂದ ಭತ್ತ ಬೆಳೆಗಾರರು ಕೂಡ ನಿರುಮ್ಮಳರಾಗಿದ್ದಾರೆ. ಅನ್ಯ ರಾಜ್ಯದ ಭತ್ತ ಖರೀದಿಸುತ್ತಿಲ್ಲ. ಇದರಿಂದ ರಾಜ್ಯದ ರೈತರು ಎಷ್ಟೇ ಬೆಳೆದರೂ ತೊಂದರೆ ಎದುರಿಸುವ ಸಾಧ್ಯತೆ ಕಡಿಮೆ.
ಸಾವಿತ್ರಿ ಪುರುಷೋತ್ತಮ,
ಕಾರ್ಯಾಧ್ಯಕ್ಷರು, ರಾಜ್ಯ ರೈಸ್ ಮಿಲ್
ಅಸೋಸಿಯೇಶನ್
ಸಿದ್ದಯ್ಯಸ್ವಾಮಿ ಕುಕುನೂರು