ರಾಯಚೂರು: ಎಲ್ಲ ಧರ್ಮಗುರುಗಳು ಜನರಿಗೆ ಜಾಗೃತಿ ಮೂಡಿಸುವ ಮೂಲಕ ಮಹಾಮಾರಿ ಕೋವಿಡ್ ಸೋಂಕು ಹರಡದಂತೆ ತಡೆಯಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಮನವಿ ಮಾಡಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ ರವಿವಾರ ಹಮ್ಮಿಕೊಂಡಿದ್ದ ವಿವಿಧ ಧರ್ಮಗುರುಗಳ ಸಭೆಯಲ್ಲಿ ಮಾತನಾಡಿದರು. ಈವರೆಗೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆದರೆ, ವೈರಸ್ ಹರಡದಂತೆ ತಡೆಯುವಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯ. ಅದರಲ್ಲೂ ಎಲ್ಲ ಧರ್ಮ ಗುರುಗಳು ಈ ವಿಚಾರದಲ್ಲಿ ಹೆಚ್ಚು ಹೊಣೆ ಹೊರಬೇಕಿದೆ. ತಮ್ಮ ತಮ್ಮ ಧರ್ಮದ ಅನುಯಾಯಿಗಳಿಗೆ ಸೂಕ್ತ ಸಂದೇಶ ನೀಡಿ, ಮುಂದಿನ ಎರಡು ವಾರ ಹೊರಗೆ ಬರದಂತೆ ಮನವಿ ಮಾಡುವಂತೆ ಕೋರಿದರು.
ಜಿಲ್ಲೆಯು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಾರಣ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದ್ದು, ನಮ್ಮಲ್ಲಿ ಲಾಕ್‌ಡೌನ್ ಕಠಿಣವಾಗಿ ಪಾಲಿಸಬೇಕಿದೆ ಎಂದರು. ಬಿಚ್ಚಾಲಿಯ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲರೂ ಮನೆಯಲ್ಲಿ ಇದ್ದುಕೊಂಡೇ ದೇವರ ನಾಮ ಸ್ಮರಣೆ ಮಾಡಬೇಕು ಎಂದರು. ಕಿಲ್ಲೇಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೋವಿಡ್ ವೈರಸ್ ದೇಶಾದ್ಯಂತ ಆವರಿಸಿದೆ. ಆದರೆ, ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂಬುದೇ ನಮ್ಮ ಜಿಲ್ಲೆಯ ಜನರ ಅದೃಷ್ಟ. ಹಾಗಂತ ಮೈ ಮರೆಯುವಂತಿಲ್ಲ ಎಂದು ಎಚ್ಚರಿಸಿದರು.
ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿ ಸ್ಮಿತಾ, ಬೋರಾ ಶಾಂತಿಲಾಲ್ ಜೈನ್, ಅಂದ್ರೂನ್ ಖೀಲ್ಲಾದ ಮೌಲಾನ ಜಾಮಿಯಾ ಮಸೀದಿಯ ಅಲ್ಲಾಜ ಹಫೀಜ್ ರಫೆಲ್‌ಅಹ್ಮದ್ ಸಾಹೇಬ್ ಸೇರಿದಂತೆ ಅನೇಕ ಧರ್ಮಗುರುಗಳು ಮಾತನಾಡಿದರು.
ಶಾಸಕ ಡಾ| ಶಿವರಾಜ್ ಪಾಟೀಲ್ ಮಾತನಾಡಿ, ಕೊರೊನಾ ಈಗಿನ್ನೂ ಹುಟ್ಟಿದ ಮಗು. ಅದು ಮುಂದೆ ದೊಡ್ಡದಾಗಿ ಬೆಳೆಯದಂತೆ ನೋಡಿಕೊಳ್ಳಬೇಕಿದೆ. ಧರ್ಮಗುರುಗಳು ತಮ್ಮ ಅನುಯಾಯಿಗಳಿಗೆ ಕರೆ ನೀಡಿ ಮನೆಯಲ್ಲಿರುವಂತೆ ಸಂದೇಶ ನೀಡಬೇಕಿದೆ. ಮುಂದಿನ ಎರಡು ವಾರ ದೇಶಕ್ಕೆ ಬಲು ಕಠಿಣವಾಗಿರಲಿದೆ. ಅದಕ್ಕೆ ಎಲ್ಲರೂ ಮನೆಯಲ್ಲಿದ್ದು ಸಹಕರಿಸಬೇಕು. ಜನರಿಗೆ ಏನು ಬೇಕು ಎಲ್ಲ ಸೌಲಭ್ಯ ಸರ್ಕಾರ ಮನೆಗಳಿಗೆ ತಲುಪಿಸಲಿದೆ ಎಂದರು.
ಶಾಸಕ ಬಸವನಗೌಡ ದದ್ದಲ್, ಎಂಎಲ್‌ಸಿ ಎನ್.ಎಸ್. ಬೋಸರಾಜು, ಮಾಜಿ ಸಂಸದ ಬಿ.ವಿ. ನಾಯಕ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಇತರರು ಇದ್ದರು.