ರಾಯಚೂರು: ಹೈದರಾಬಾದ್‌ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಂಧ್ರ, ತೆಲಂಗಾಣಕ್ಕೆ ಹೊಂದಿಕೊಂಡಿರುವ ಗಡಿಜಿಲ್ಲೆ ರಾಯಚೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸೋಂಕಿತರು ಒಳ ಬಾರದಂತೆ ವಿಶೇಷ ನಿಗಾ ವಹಿಸಿದೆ.
ಬೆಳಗ್ಗೆಯಿಂದಲೇ ಈ ಕುರಿತು ಆರೋಗ್ಯ ಇಲಾಖೆ ಸೂಕ್ತ ನಿರ್ದೇಶನ ನೀಡಿತ್ತು. ಕೆಲ ದಿನಗಳ ಹಿಂದೆಯೇ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿತ್ತು. ಕೊರೊನಾ ಕಾಯಿಲೆಯ ಲಕ್ಷಣಗಳಿದ್ದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ, ಹೈದರಾಬಾದ್‌ನಲ್ಲಿ ಕಾಯಿಲೆ ಪತ್ತೆಯಾಗುತ್ತಿದ್ದಂತೆ ವೈದ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ.
ರಾಯಚೂರು ಜಿಲ್ಲೆಗೆ ಇತ್ತ ತೆಲಂಗಾಣ, ಅತ್ತ ಆಂಧ್ರಪ್ರದೇಶ ಎರಡೂ ರಾಜ್ಯಗಳು ಹೊಂದಿಕೊಂಡ ಕಾರಣ, ಆ ಭಾಗದ ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲು ಸೂಚಿಸಲಾಗಿದೆ. ಒಟ್ಟು ಐದು ಚೆಕ್ ಪೋಸ್ಟ್‌ಗಳನ್ನು ರಚಿಸಿದ್ದು, ಆ ಕಡೆಯಿಂದ ಬರುವ ಪ್ರತಿ ವಾಹನವನ್ನು ಪರೀಕ್ಷಿಸಿಯೇ ಬಿಡಲಾಗುತ್ತಿದೆ.
ತುರ್ತು ಸಭೆ: ಈ ಕುರಿತು ಜಿಲ್ಲಾಧಿ ಕಾರಿ ಆರ್.ವೆಂಕಟೇಶಕುಮಾರ ಸಂಬಂಧಿ ಸಿದ ಅಧಿ ಕಾರಿಗಳ ತುರ್ತು ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನೋವೆಲ್ ಕರೋನಾ ವೈರಸ್ ರೋಗ ಹರಡದಂತೆ ಜಿಲ್ಲೆಯಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೈದರಾಬಾದ್ ನಲ್ಲಿ ಸೋಮವಾರ ಕೊರೊನಾ ವೈರಸ್ ಪೀಡಿತ ರೋಗಿ ಪತ್ತೆಯಾದ ಕಾರಣ ತೆಲಂಗಾಣ ಗಡಿಭಾಗವಾದ ರಾಯಚೂರು ತಾಲೂಕು ಹಾಗೂ ಜಿಲ್ಲೆಯಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಸಿಂಗನೋಡಿ, ಯರಗೇರಾ ಕ್ರಾಸ್, ಶಕ್ತಿನಗರ, ನಗರದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲು ಸೂಚಿಸಲಾಗಿದೆ ಎಂದು ತಿಳಿಸಿದರು. ಪ್ರಯಾಣಿಕರಲ್ಲಿ ರೋಗದ ಲಕ್ಷಣವಿದ್ದಲ್ಲಿ ಸ್ಥಳದಲ್ಲಿಯೇ ತಪಾಸಣೆ ನಡೆಸುವರು. ಕೇಂದ್ರದಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ನಿರ್ವಹಿಸುವರು. ತಕ್ಷಣ ಪ್ರತ್ಯೇಕ ವಾಹನದಲ್ಲಿ ರಿಮ್ಸ್ ಅಥವಾ ನವೋದಯ ಆಸ್ಪತ್ರೆಯಲ್ಲಿ ತೆರೆದ ಪ್ರತ್ಯೇಕ ವಾರ್ಡ್‌ಗೆ ಕರೆ ತರಲಾಗುವುದು. ರೋಗಿಯ ರಕ್ತದ ಮಾದರಿಯನ್ನು ಬೆಂಗಳೂರು ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗುವುದು ಎಂದರು.
ಇತ್ತೀಚೆಗೆ ಮಧ್ಯ ಪ್ರಾಚ್ಯ ದೇಶಗಳಿಗೆ ಪ್ರವಾಸ ಅಥವಾ ಇತರೆ ಕಾರ್ಯನಿಮಿತ್ತ ಹೋಗಿ ಬಂದ ನಗರ ವಾಸಿಗಳನ್ನು ಗುರುತಿಸಿ ಅವರನ್ನು ತಪಾಸಣೆ ನಡೆಸಬೇಕು. ನಗರದ ಅರಬ್ ಮೊಹಲ್ಲಾ, ಆಂದ್ರೂನ್ ಕಿಲ್ಲಾ ಸೇರಿದಂತೆ ವಿದೇಶಗಳಿಗೆ ಭೇಟಿ ನೀಡಿ ಹಿಂದಿರುಗುವ ನಾಗರಿಕರನ್ನು ನಗರಸಭೆಯಿಂದ ಗುರುತಿಸಲು ಸೂಚಿಸಲಾಗಿದೆ ಎಂದರು.
ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಎಸ್‌ಪಿ ಡಾ| ಸಿ.ಬಿ.ವೇದಮೂರ್ತಿ, ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ, ರಾಜಶೇಖರ ಡಂಬಳ, ರಿಮ್ಸ್ ನಿರ್ದೇಶಕ ಬಸವರಾಜ ಪೀರಾಪುರ, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ನಾಗರಾಜ, ರಾಯಚೂರು ತಾಲೂಕು ವೈದ್ಯಾಧಿಕಾರಿ ಡಾ| ಶಕೀಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.