Advertisement

ರೈತರಿಗೆ ಸಮರ್ಪಕ ವಿದ್ಯುತ್‌ ಒದಗಿಸಿ

04:27 PM Dec 28, 2019 | |

ರಾಯಚೂರು: ಯಾವುದೇ ಕಾರಣಕ್ಕೂ ರೈತರಿಗೆ ವಿದ್ಯುತ್‌ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದಲ್ಲಿ ಇತ್ಯರ್ಥ ಮಾಡಲಾಗುವುದು ಎಂದು ಗುಲ್ಬರ್ಗ ವಿದ್ಯುತ್ಶಕ್ತಿ ಸರಬರಾಜು ಕಂಪನಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕಿ ಡಾ| ಆರ್‌. ರಾಗಪ್ರಿಯಾ ಹೇಳಿದರು.

Advertisement

ನಗರದ ಜೆಸ್ಕಾಂ ವಿದ್ಯುತ್‌ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನ ವೃತ್ತದಿಂದ ಶುಕ್ರವಾರ ನಡೆದ ಜಿಲ್ಲಾ ವ್ಯಾಪ್ತಿಯ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ವಿದ್ಯುತ್‌ ಮೇಲೆ ತುಂಬಾ ಅವಲಂಬಿತರಾಗಿದ್ದಾರೆ. ಅವರು ಜೀವನವೇ ಅದರ ಮೇಲೆ ನಿಂತಿದೆ. ಹೀಗಾಗಿ ಅವರ ದೂರುಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ನಿಮ್ಮಿಂದ ಆಗದಂತಹ ಸಮಸ್ಯೆ ಇದ್ದಲ್ಲಿ ತಕ್ಷಣಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಅದು ಬಿಟ್ಟು ವಿನಾಕಾರಣ ಕಾಲಕ್ಷೇಪ ಮಾಡಿ ರೈತರಿಗೆ ತೊಂದರೆ ಮಾಡಬಾರದು ಎಂದು ಸೂಚಿಸಿದರು.

ಜಿಲ್ಲಾದ್ಯಂತ ವಿದ್ಯುತ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸಿರುವ ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಬೇಕು. ಯಾವುದೇ ಸಮಸ್ಯೆಗಳನ್ನು ಕಾಲಮಿತಿಯೊಳಗೆ ನಿವಾರಿಸಬೇಕು. ಶಿಥಿಲಾವಸ್ಥೆಗೆ ತಲುಪಿದ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬ ಅಳವಡಿಸಬೇಕು. ವಿದ್ಯುತ್‌ ಪರಿವರ್ತಕ ಸುಟ್ಟಲ್ಲಿ 24 ಗಂಟೆಯೊಳಗೆ ಬದಲಿಸಿ ಹೊಸದೊಂದನ್ನು ಅಳವಡಿಸಬೇಕು ಎಂದು ಸೂಚಿಸಿದರು.
ರೈತ ಮುಖಂಡ ಲಕ್ಷ್ಮಣಗೌಡ ಕಡಗಂದೊಡ್ಡಿ ಮಾತನಾಡಿ, ಹೈ ವೋಲ್ಟೇಜ್‌ ಬಂದು ವಿದ್ಯುತ್‌ ಪರಿವರ್ತಕಗಳು ಪದೇ ಪದೇ ಕೈ ಕೊಡುತ್ತಿವೆ.

ಹಾಗೆ ಸುಟ್ಟ ಟಿಸಿಗಳ ದುರಸ್ತಿಗೆ ಅನಗತ್ಯ ವಿಳಂಬ ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಪರಿವರ್ತಕಗಳ ಸುತ್ತ ತಂತಿ ಬೇಲಿ ನಿರ್ಮಿಸದ ಕಾರಣ ಸಾವುನೋವು ಸಂಭವಿಸಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಡಾ| ರಾಜಕುಮಾರ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಎಂ.ಎನ್‌. ಮೈತ್ರಿಕರ್‌ ಮಾತನಾಡಿ, ಅಧಿಕಾರಿಗಳು ಬೇಕಾಬಿಟ್ಟಿ ಲೋಡ್‌ ಶೆಡ್ಡಿಂಗ್‌ ಮಾಡುತ್ತಿದ್ದಾರೆ. ಹರಿಜನವಾಡದಲ್ಲಿ ಐದಾರು ತಿಂಗಳಿಂದ ಬೆಳಗ್ಗೆ 12:00ರ ವರೆಗೆ ವಿದ್ಯುತ್‌ ಕಡಿತಗೊಳಿಸುತ್ತಾರೆ. ಈ ಬಗ್ಗೆ ಸಂಬಂಧಿಸಿದವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಸ್ವಲ್ಪ ಗಾಳಿ ಬಂದರೂ ಸಾಕು ವಿದ್ಯುತ್‌ ಕಡಿತಗೊಳಿಸುತ್ತಾರೆ. ಕರೆ ಮಾಡಿದರೆ ಯಾರೊಬ್ಬರೂ ಸ್ಪಂದಿಸುವುದಿಲ್ಲ ಎಂದು ದೂರಿದರು.

ಸಾಕಷ್ಟು ಜನರು ವಿದ್ಯುತ್‌ಗೆ ಸಂಬಂಧಿಸಿದ ದೂರು ನೀಡಿದರು. ಎಲ್ಲ ಅಹವಾಲು ಆಲಿಸಿದ ಎಂಡಿ, ಇಂದು ಸಲ್ಲಿಕೆಯಾದ ದೂರುಗಳಿಗೆ ತ್ವರಿತಗತಿಯಲ್ಲಿ ಸ್ಪಂದನೆ ನೀಡಿ. ಸಮಸ್ಯೆ ಗಂಭೀರ ಸ್ವರೂಪದ್ದಾಗಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸೂಚಿಸಿದರು.

ಜೆಸ್ಕಾಂ ಮುಖ್ಯ ಇಂಜಿನಿಯರ್‌ ಆರ್‌.ಡಿ. ಚಂದ್ರಶೇಖರ, ತಾಂತ್ರಿಕ ನಿರ್ದೇಶಕ ಜಯಕುಮಾರ, ಎಂ. ರಾಜೇಶ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next