ರಾಯಚೂರು: ಕೋವಿಡ್-19 ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೈಗೊಂಡಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಪಂ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಗರದಲ್ಲಿ ಜಯಂತಿ ಆಚರಿಸಲಾಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳು ಗೌರವ ನಮನ ಸಲ್ಲಿಸಿದರು.
ಎಂಎಲ್‌ಸಿ ಎನ್.ಎಸ್. ಬೋಸರಾಜ್, ಶಾಸಕರಾದ ಡಾ| ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಮಾಜಿ ಸಂಸದ ಬಿ.ವಿ.ನಾಯಕ, ಜಿಲ್ಲಾ ಧಿಕಾರಿ ಆರ್. ವೆಂಕಟೇಶ ಕುಮಾರ, ಜಿಪಂ ಸಿಇಒ ಲಕ್ಷ್ಮೀ ಕಾಂತ ರೆಡ್ಡಿ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಎಡಿಸಿ ದುರುಗೇಶ್, ತಹಶೀಲ್ದಾರ್ ಡಾ| ಹಂಪಣ್ಣ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಇತರರಿದ್ದರು.
ನಿಷೇಧಾಜ್ಞೆ ನಡುವೆಯೇ ಹಲವು ದಲಿತಪರ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ವೃತ್ತಗಳನ್ನು ಬರೆಯಲಾಗಿತ್ತು. ಆದರೆ, ಯಾರು ಅವುಗಳಲ್ಲಿ ನಿಲ್ಲದೇ ಗುಂಪಾಗಿಯೇ ನಿಂತಿದ್ದರು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿಯೂ ಜಯಂತಿ ಆಚರಿಸಲಾಯಿತು. ಶಾಸಕ ಡಾ| ಶಿವರಾಜ್ ಪಾಟೀಲ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಯೂ ಜಯಂತಿ ಆಚರಿಸಲಾಯಿತು. ಎಂಎಲ್‌ಸಿ ಎನ್.ಎಸ್. ಬೋಸರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ವಿವಿಧ ಸಂಘ-ಸಂಸ್ಥೆಗಳು, ಕಚೇರಿಗಳು, ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಸಾಂಕೇತಿಕವಾಗಿ ಜಯಂತಿ ಆಚರಿಸಲಾಯಿತು.