Advertisement
ಜಿಲ್ಲೆಯಲ್ಲಿ 179 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ ಕೇವಲ 139 ಪಿಡಿಒ ಹುದ್ದೆಗಳು ಭರ್ತಿಯಾಗಿವೆ. ಇದರಿಂದ ಉಳಿದ ಪಂಚಾಯಿತಿಗಳಲ್ಲಿ ಕಾರ್ಯದರ್ಶಿಗಳಿಂದ ಸೇವೆ ಪಡೆದರೆ ಅನೇಕ ಕಡೆ ಕಾರ್ಯದರ್ಶಿ ಹುದ್ದೆಗಳು ಖಾಲಿ ಇವೆ. ಅಂಥ ಕಡೆ ವಿಧಿ ಇಲ್ಲದೇ ಸಮೀಪದ ಪಂಚಾಯಿತಿ ಪಿಡಿಒಗಳಿಗೆ ಪ್ರಭಾರ ಹೊಣೆ ನೀಡಿ ಕೆಲಸ ಪಡೆಯಲಾಗುತ್ತಿದೆ.
Related Articles
Advertisement
ಪಿಡಿಒಗಳ ಉದಾಸೀನತೆ: ಜಿಲ್ಲೆಯಲ್ಲಿ ಉದ್ಯೋಗ ಇಲ್ಲದೇ ಜನ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲೆಂದೇ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿದೆ. ಆದರೆ, ಸಿಬ್ಬಂದಿ ಕೊರತೆ ಒತ್ತಡದ ಮಧ್ಯೆ ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬ ದೂರುಗಳಿವೆ. ಕೆಲಸಗಳನ್ನು ಯಂತ್ರಗಳ ಮೂಲಕ ಮಾಡಿಸುತ್ತಿದ್ದು, ಪರಿಶೀಲಿಸಬೇಕಾದ ಪಂಚಾಯಿತಿ ಅಧಿಕಾರಿಗಳು ಅತ್ತ ದೃಷ್ಟಿ ಹಾಯಿಸುತ್ತಿಲ್ಲ. ಹೆಸರಿಗೆ ಮಾತ್ರ ಜಾಬ್ ಕಾರ್ಡ್ ಎನ್ನುವಂತಾಗಿದ್ದು, ಜನರಿಗೆ ಸರಿಯಾಗಿ ಕೂಲಿ ಸಿಗುತ್ತಿಲ್ಲ ಎನ್ನುವ ದೂರುಗಳಿವೆ. ಇನ್ನೂ ಅನೇಕ ಗ್ರಾಮಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಜನ ನಿತ್ಯ ಬಿಂದಿಗೆ ಹಿಡಿದು ಜಗಳವಾಡುವ ಸ್ಥಿತಿಯಿದೆ. ಈ ಸಮಸ್ಯೆ ನಿವಾರಣೆಗೆ ಒತ್ತು ನೀಡುತ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೇ, ಪ್ರಭಾರ ಇರುವ ಪಿಡಿಒಗಳು ಅಲ್ಲಿದ್ದರೆ ಇಲ್ಲಿ, ಇಲ್ಲಿದ್ದರೆ ಅಲ್ಲಿ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ದೂರುಗಳು ಕೂಡ ಇವೆ.
ಕಚೇರಿಗಳಿಗೆ ಅಲೆದಾಟ: ಪಂಚಾಯಿತಿ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿರುವುದರಿಂದ ಅವರು ಎಲ್ಲಿ ಸಿಗುತ್ತಾರೆ ಎನ್ನುವುದೇ ಜನರಿಗೆ ಗೊಂದಲವಾಗುತ್ತದೆ. ಸಣ್ಣ ಸಣ್ಣ ಕೆಲಸಗಳಿಗೂ ವಾರಗಟ್ಟಲೇ ಕಚೇರಿಗಳಿಗೆ ಅಲೆಯಬೇಕಿದೆ. ಪಿಡಿಒರನ್ನು ಕೇಳಿದರೆ ನಾವೇನು ಮಾಡುವುದು, ನಮಗೆ ನೂರಿಪ್ಪತ್ತು ಕೆಲಸಗಳಿವೆ ಎನ್ನುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಆದರೆ, ಪಿಡಿಒಗಳು ಮಾತ್ರ ನಮ್ಮ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದೆ. ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ನಾವೇ ಜನರಿಗೆ ತಲುಪಿಸಬೇಕಿದೆ. ಅತ್ತ ಮೇಲಧಿಕಾರಿಗಳು ಒತ್ತಡ ಹಾಕುತ್ತಿದ್ದರೆ, ಹಳ್ಳಿಗಳಲ್ಲಿ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಒಂದಿಲ್ಲೊಂದು ವಿಚಾರಕ್ಕೆ ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ತಳಮಟ್ಟದ ಪ್ರಗತಿಗೆ ಶ್ರಮಿಸಬೇಕಾದ ಪಿಡಿಒಗಳ ಹುದ್ದೆಗಳೇ ಖಾಲಿ ಇರುವುದು ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿರುವುದು ಸುಳ್ಳಲ್ಲ. ಸರ್ಕಾರ ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ಜಿಲ್ಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಖಾಲಿ ಇರುವುದು ನಿಜ. ಆದರೆ, ಬೆರಳೆಣಿಕೆ ಅಧಿಕಾರಿಗಳಿಗೆ ಮಾತ್ರ ಬೇರೆ ಪಂಚಾಯಿತಿಗಳ ಹೊಣೆ ನೀಡಲಾಗಿದೆ. ಉಳಿದ ಕಡೆ ಕಾರ್ಯದರ್ಶಿಗಳಿಂದಲೇ ಕೆಲಸ ಪಡೆಯಲಾಗುತ್ತಿದೆ. ಇದರಿಂದ ಕೆಲಸ ಕಾರ್ಯಗಳಿಗೆ ಯಾವುದೇ ಅಡ್ಡಿಯುಂಟಾಗಿಲ್ಲ.•ನಲಿನ್ ಅತುಲ್, ಜಿಪಂ ಸಿಇಒ