ರಾಯಚೂರು: ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಈಚೆಗೆ ಆರಂಭಗೊಂಡಿರುವ ರಾಯಚೂರು ವಿಶ್ವವಿದ್ಯಾಲಯದ ಸರ್ವತೋಮುಖ ಪ್ರಗತಿಗೆ ಬೇಕಾದ ಅಗತ್ಯ ನೆರವು ನೀಡಲು ಸಿದ್ಧ ಎಂದು ಜಿಪಂ ಸಿಇಒ ಜಿ.ಲಕ್ಷ್ಮೀ ಕಾಂತರೆಡ್ಡಿ ತಿಳಿಸಿದರು.
ತಾಲೂಕಿನ ಯರಗೇರಾ ಬಳಿಯ ರಾಯಚೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಯಚೂರು ವಿಶ್ವವಿದ್ಯಾಲಯಸ್ಥಾಪಿಸಲು ಹೋರಾಡಿದ, ಅದಕ್ಕೆ ಪ್ರಯತ್ನಿಸಿದ ಎಲ್ಲ ಸ್ಥಳೀಯರಿಗೆ, ಶಿಕ್ಷಣತಜ್ಞರಿಗೆ, ಸಂಘ ಸಂಸ್ಥೆಗಳಿಗೆ, ಕಲ್ಯಾಣ ಕರ್ನಾಟಕ ಜನತೆಗೆ ಅಭಿನಂದನೆಗಳು. ವಿವಿಈಗ ಆರಂಭಗೊಂಡಿದ್ದು, ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಹಂತ ಹಂತವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ರಾಯಚೂರು ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ರಾಯಚೂರು ವಿವಿ ವಿಶೇಷಾಧಿಕಾರಿ ಡಾ| ಜಿ.ಕೊಟ್ರೇಶ್ವರ ಮಾತನಾಡಿ, ರಾಯಚೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ಅಧಿಕಾರಿಗಳ ಸಹಕಾರ ಸದಾ ಇರಬೇಕು. ರಾಯಚೂರು ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇನ್ನೂ ಹೆಚ್ಚಿನ ಶೈಕ್ಷಣಿಕ ಪ್ರಗತಿ ಸಾಧಿಸಬೇಕಿದೆ. ಈ ಭಾಗದಲ್ಲಿ ಉನ್ನತ ಶಿಕ್ಷಣ ಕೇಂದ್ರಗಳ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕಾರಿ ಯೋಜನೆಗಳನ್ನು ನಿರೂಪಿಸಿದರು.
ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯ ಡಾ| ಶರಣಬಸವ ಪಾಟೀಲ ಜೋಳದಹೆಡಿಗಿ ಮಾತನಾಡಿದರು. ರಾಯಚೂರು ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಪ್ರೊ| ಪಾರ್ವತಿ ಸಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಅಧಿಕಾರಿ ಡಾ| ಜಿ.ಎಸ್ .ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಇಂಗ್ಲಿಷ್ ವಿಭಾಗ ಅತಿಥಿ ಉಪನ್ಯಾಸಕ ಅನಿಲ ಅಪ್ರಾಳ್ ಸ್ವಾಗತಿಸಿದರು. ಯರಗೇರಾ ಗ್ರಾಮದ ಬಡ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
ಸಿಂಡಿಕೇಟ್ ಮಾಜಿ ಸದಸ್ಯ ವಿಜಯ ಭಾಸ್ಕರ್, ಐಟಿ ವಿಭಾಗದ ಪ್ರಾಧ್ಯಾಪಕ ಡಾ| ಪಿ.ಭಾಸ್ಕರ್, ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ| ನುಸ್ರತ್ ಫಾತಿಮಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ವಾಸುದೇವ್ ಜೇವರ್ಗಿ ಸೇರಿದಂತೆ ಇತರರಿದ್ದರು. ಡಾ| ಶ್ರೀಮಂತ ಸುಧಿಧೀರ ನಿರೂಪಿಸಿದರು. ಇತಿಹಾಸ ವಿಭಾಗ ಅತಿಥಿ ಉಪನ್ಯಾಸಕ ಕೃಷ್ಣಾ ವಂದಿಸಿದರು.