ಕಲಬುರಗಿ: ಗುಲಬರ್ಗಾ ವಿವಿಯಿಂದ ಬೇರ್ಪಟ್ಟು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿವಿ ನಡುವೆ ವಿವಿಯಲ್ಲಿ ಶೈಕ್ಷಣಿಕ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಗುಲಬರ್ಗಾ ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ| ದಯಾನಂದ ಅಗಸರ, ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ| ಹರೀಶ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವ ಅಂಶಗಳ ಬಗ್ಗೆ ಚರ್ಚಿಸಲಾಯಿತು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿ, ಆಡಳಿತಾತ್ಮಕವಾಗಿ ಬೇಕಾಗುವ ಎಲ್ಲ ಸಂಪನ್ಮೂಲ ಒದಗಿಸಲು ಗುಲಬರ್ಗಾ ವಿಶ್ವವಿದ್ಯಾಲಯ ಸದಾ ಸಿದ್ಧವಿದೆ ಎಂದು ಪ್ರೊ| ಅಗಸರ ಪ್ರಕಟಪಡಿಸಿದರು. ಅಲ್ಲದೇ ಈ ಎರಡು ವಿಶ್ವವಿದ್ಯಾಲಯಗಳು ಪರಿವರ್ತನಾ ಅವ ಧಿಯಲ್ಲಿ ಯಾವ ಗೊಂದಲವೂ (ಗುಲಬರ್ಗಾ ವಿಶ್ವವಿದ್ಯಾಲಯ) ಇಲ್ಲ ದಂತೆ ಉಭಯ ವಿಶ್ವವಿದ್ಯಾಲಯಗಳ ಅಧಿ ಕಾರಿಗಳಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಸೂಕ್ತ ಮಾರ್ಗದರ್ಶನ, ಆದೇಶ ನೀಡಿದರು.
ರಾಯಚೂರು ವಿವಿ ಕುಲಪತಿಗಳಾದ ಪ್ರೊ| ಹರೀಶ ರಾಮಸ್ವಾಮಿ ಮಾತನಾಡಿ, ವಿಶ್ವ ವಿದ್ಯಾಲಯಗಳು ಕೈ ಜೋಡಿಸಿ ಗುಣಾತ್ಮಕ, ಕ್ರಿಯಾಶೀಲ, ಸೃಜನಶೀಲತೆಯಿಂದ ಕೂಡಿದಂತ ವ್ಯವಸ್ಥೆ ಗಟ್ಟಿಗೊಳಿಸಿ ವಿದ್ಯಾರ್ಥಿ ಸಮುದಾಯಕ್ಕೆ ಶ್ರೇಷ್ಠ ಮತ್ತು ಗುಣಮಟ್ಟದ ಶಿಕ್ಷಣ ನೀಡುವಲ್ಲಿ, ಸ್ಪರ್ಧಾತ್ಮಕವಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯುವಂತ ವಾತಾವರಣ ನಿರ್ಮಿಸಲು ಕಂಕಣ ಬದ್ಧವಾಗಿವೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಹಕಾರ ಮತ್ತು ಬೆಂಬಲಕ್ಕೆ ಕೃತಜ್ಞತೆ ತಿಳಿಸಿ, ಭವಿಷ್ಯದಲ್ಲಿಯೂ ಇದೇ ರೀತಿ ಬಾಂಧವ್ಯ ಮುಂದುವರಿಯಲಿ ಎಂದು ಆಶಿಸಿದರು. ಗುಲಬರ್ಗಾ ವಿವಿ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ ಸ್ವಾಗತಿಸಿದರು, ರಾಯಚೂರು ವಿವಿ ಕುಲಸಚಿವ ಪ್ರೊ| ವಿಶ್ವ ನಾಥ ಎಂ. ವಂದಿಸಿದರು