Advertisement
ಎಂಥ ಸಂದಿಗ್ಧ ಸ್ಥಿತಿಯಲ್ಲೂ ಇಷ್ಟೊಂದು ದೀರ್ಘ ಕಾಲ ಕೇಂದ್ರ ಸ್ಥಗಿತಗೊಂಡಿರಲಿಲ್ಲ. ಆದರೆ ಲಾಕ್‌ಡೌನ್ ಬಿಸಿ ಎದುರಿಸಿದ ಅನೇಕ ವಲಯ ಗಳಲ್ಲಿ ಶಾಖೋತ್ಪನ್ನ ಕೇಂದ್ರ ಗಳೂ ಸೇರಿದ್ದು, ವಿದ್ಯುತ್ ಬೇಡಿಕೆ ಕೊರತೆಯಿಂದ ಕೆಲಸ ನಿಲ್ಲಿಸಿವೆ. ಇಲ್ಲಿ 1,720 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ಎಂಟು ಘಟಕಗಳು ನಿತ್ಯ 28ರಿಂದ 30 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸುತ್ತಿದ್ದವು. ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಇಲ್ಲಿಂದಲೇ ಸರಬರಾಜಾಗುತ್ತಿತ್ತು. ಲಾಕ್‌ಡೌನ್‌ನಿಂದ ರಾಜ್ಯದ ಬಹುತೇಕ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕುಗ್ಗಿದ್ದು, ಆರ್‌ಟಿಪಿಎಸ್‌ಗೆ ವಿರಾಮ ನೀಡಲಾಗಿದೆ.
ಜುಲೈನಿಂದ ಡಿಸೆಂಬರ್‌ವರೆಗೂ ಉತ್ಪಾದನೆ ಕಡಿಮೆಯಿರುತ್ತದೆ. ಆಗ ವಿಂಡ್, ಹೈಡ್ರೋ ಪವರ್ ಹೆಚ್ಚಾಗಿರುತ್ತದೆ. ಆರ್‌ಟಿಪಿಎಸ್‌ನಲ್ಲಿ ಮಾತ್ರ ನಿರ್ವಹಣೆಗೆ ಬೇಕಾದಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಇಲ್ಲಿ ಉತ್ಪಾದಿಸುವ ಪ್ರತಿ ಯುನಿಟ್ ವಿದ್ಯುತ್‌ಗೆ 3.30ರಿಂದ 3.48 ರೂ.ವರೆಗೆ ಖರ್ಚಾಗುತ್ತಿದ್ದು, ನಿರಂತರ ಆದಾಯ ಇರುತ್ತಿತ್ತು. ಈಗ ಬೇಡಿಕೆ ಕಡಿಮೆಯಾದ ಕಾರಣ ನಿರ್ವಹಣೆಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಕೆಲಸ ಕಳೆದುಕೊಂಡ ನೂರಾರು ಕಾರ್ಮಿಕರು
ಶಾಖೋತ್ಪನ್ನ ಕೇಂದ್ರದಲ್ಲಿ ಶೇ.80 ರಷ್ಟು ಗುತ್ತಿಗೆ ಕಾರ್ಮಿಕರಿದ್ದಾರೆ. ಸುಮಾರು 500ಕ್ಕೂ ಅ ಧಿಕ ಗುತ್ತಿಗೆ ಕಾರ್ಮಿಕರನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ಪ್ಲಾಂಟ್ ಮತ್ತೆ ಯಥಾಸ್ಥಿತಿಗೆ ಬರುವವರೆಗೂ ಕೆಲಸಕ್ಕೆ ಬರಬೇಡಿ ಎಂದು ತಿಳಿಸಲಾಗಿದೆ.
Related Articles
ಈ ಬಾರಿ ಮುಂಗಾರು ಚೆನ್ನಾಗಿ ರುವ ಕಾರಣ ಜಲಮೂಲ ಹಾಗೂ ಪವನ ಶಕ್ತಿಯಿಂದ ನಿರೀಕ್ಷೆಗಿಂತ ಮುಂಚಿತವಾಗಿಯೇ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇವುಗಳ ಉತ್ಪಾದನೆ ವೆಚ್ಚ ಕಡಿಮೆ ಇದೆ. ಸರಕಾರ ಕೂಡ ಅಗ್ಗದ ದರದಲ್ಲಿ ಸಿಗುವ ವಿದ್ಯುತ್ ಖರೀದಿಗೆ ಇಚ್ಛಾಶಕ್ತಿ ತೋರುತ್ತಿದೆ. ಆದರೆ, ಬೇಸಗೆಯಲ್ಲಿ ಸೋಲಾರ್ ಬಿಟ್ಟರೆ ಶಾಖೋತ್ಪನ್ನ ಕೇಂದ್ರಗಳೇ ಆಸರೆಯಾದ ಕಾರಣ ಆಗ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಎರಡರಿಂದ ಮೂರು ತಿಂಗಳವರೆಗೆ ಇಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆ ಕಷ್ಟಸಾಧ್ಯ ಎನ್ನುವಂತಿದೆ.
Advertisement
ಬೇಡಿಕೆ ಇಲ್ಲದೆ ಆರ್‌ಟಿಪಿಎಸ್‌ನ ಎಲ್ಲ ಘಟಕಗಳನ್ನು ಸಂಪೂರ್ಣ ಸ್ಥಗಿತಗೊಳಿಸಿದ ಉದಾಹರಣೆ ಇರಲಿಲ್ಲ. ಇದೇ ಮೊದಲ ಬಾರಿಗೆ ಇಷ್ಟು ದಿನಗಳ ಕಾಲ ಪ್ಲಾಂಟ್ ಸ್ಥಗಿತಗೊಂಡಿದೆ. ಸಾಮಾನ್ಯವಾಗಿ ಈ ವೇಳೆಗೆ ಒಂದೆರಡು ಪ್ಲಾಂಟ್‌ಗಳನ್ನು ಮಾತ್ರ ಓಡಿಸುತ್ತಿದ್ದೆವು. ಉಳಿದವುಗಳನ್ನು ನಿರ್ವಹಣೆಗೆ ಪಡೆಯಲಾಗುತ್ತಿತ್ತು. ಈ ಬಾರಿ ಎಲ್ಲವನ್ನು ನಿಲ್ಲಿಸಲಾಗಿದೆ. ಆದಾಯ ಇಲ್ಲದ ಕಾರಣ ನಿರ್ವಹಣೆ ಸಮಸ್ಯೆ ಎದುರಾಗುತ್ತಿದೆ.– ಕೆ.ವಿ.ವೆಂಕಟಾಚಲಪತಿ, ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ, ಆರ್‌ಟಿಪಿಎಸ್