Advertisement

Raichur: ಮೆಣಸಿನಕಾಯಿ ಬೆಳೆಗೂ ಟ್ಯಾಂಕರ್‌ ನೀರು!

06:44 PM Oct 12, 2023 | Team Udayavani |

ರಾಯಚೂರು: ಈ ಬಾರಿ ಮಳೆರಾಯ ಕೈಕೊಟ್ಟಿರುವುದು ರೈತಾಪಿ ವರ್ಗವನ್ನು ಅಕ್ಷರಶಃ ಸಂಕಷ್ಟಕ್ಕೀಡು ಮಾಡಿದ್ದು, ಬೆಳೆ ರಕ್ಷಣೆಗೆ ನಾನಾ ಪಡಿಪಾಟಲು ಎದುರಿಸುತ್ತಿದ್ದಾರೆ. ಟಿಎಲ್‌ಬಿಸಿ ಕೊನೆ ಭಾಗಕ್ಕೆ ನೀರು ಬಾರದೆ ಮೆಣಸಿನಕಾಯಿ ಬೆಳೆ ರಕ್ಷಿಸಿಕೊಳ್ಳಲು ಟ್ಯಾಂಕರ್‌ ಮೂಲಕ ನೀರು ಹರಿಸಲಾಗುತ್ತಿದೆ.

Advertisement

ತಾಲೂಕಿನ ಮರ್ಚೆಟ್ಹಾಳ್‌ ಗ್ರಾಮದಲ್ಲಿ ರೈತರು ಮೆಣಸಿನಕಾಯಿಗೆ ನೀರು ಹಾಯಿಸಲು ಟ್ರ್ಯಾ ಕ್ಟರ್‌ ಟ್ಯಾಂಕರ್‌ ಮೊರೆ ಹೋಗಿದ್ದಾರೆ. ಐಸಿಸಿ ಸಭೆಯಲ್ಲಿ ಟಿಎಲ್‌ಬಿಸಿಗೆ ವಾರಬಂದಿ ಲೆಕ್ಕದಲ್ಲಿ ಕಾಲುವೆಗೆ ನೀರು ಹರಿಸಲಾಗಿತ್ತು. ಈ ಬಾರಿ ಸಾಕಷ್ಟು ರೈತರು ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಆದರೆ, ಬೆಳೆಗೆ ನೀರು ಬೇಕಾದ ಹೊತ್ತಲ್ಲಿ ಕಾಲುವೆಗೆ ನೀರು ಬಂದಿಲ್ಲ. ಇದರಿಂದ ನೀರು ಸಾಲದೆ ರೈತರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕೇವಲ ಈ ಗ್ರಾಮ ಮಾತ್ರವಲ್ಲದೇ ಸುತ್ತಲಿನ ಗ್ರಾಮದ ರೈತರು ಕೂಡ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಮರ್ಚೆಟ್ಹಾಳ, ದಿನ್ನಿ, ಗಾರಲದಿನ್ನಿ, ಮಠಮಾರಿ, ನೆಲಹಾಳ್‌ ಸೀಮೆಯಲ್ಲಿ ಈ ಬಾರಿ ಮೆಣಸಿನಕಾಯಿ ಹೆಚ್ಚಾಗಿ ಬೆಳೆಯಲಾಗಿದೆ. ಈ ಭಾಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.70ರಷ್ಟು ಮೆಣಸಿನಕಾಯಿ, ಶೇ.30ರಷ್ಟು ಹತ್ತಿ ಬಿತ್ತನೆಯಾಗಿದೆ. ಮೆಣಸಿನಕಾಯಿ ಬೆಳೆಗೆ ಕನಿಷ್ಠ ನಾಲ್ಕು ಬಾರಿಯಾದರೂ ನೀರು ಹರಿಸಬೇಕಿದೆ.

ಆದರೆ, ಈ ಬಾರಿ ಕಾಲುವೆಗೆ ಕೇವಲ ಒಂದು ಬಾರಿ ಮಾತ್ರ ನೀರು ಬಂದಿದೆ. ವಾರಬಂದಿ ಪ್ರಕಾರ ನೀರು ಹರಿಸಲು ನಿರ್ಧರಿಸಿದರೂ ಕೊನೆ ಭಾಗಕ್ಕೆ ಮಾತ್ರ ತಲುಪುತ್ತಿಲ್ಲ. ಗ್ರಾಮೀಣ ಕ್ಷೇತ್ರದ ಶಾಸಕರು ನೀರಾವರಿ ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಾಲುವೆಗಳಿಗೆ ನೀರು ಬರುವ ಸಾಧ್ಯತೆಗಳು ತೀರ ಕಡಿಮೆಯಿದ್ದು, ಪರ್ಯಾಯ ಮಾರ್ಗಗಳೇ ವಾಸಿ ಎನ್ನುವ ನಿಲುವಿಗೆ ಬಂದಿದ್ದಾರೆ.

ನೀರಿಗಾಗಿ ಎಕರೆಗೆ 15 ಸಾವಿರ ಖರ್ಚು ಒಂದು ಟ್ಯಾಂಕರ್‌ ನೀರು ಹರಿಸಲು ರೈತರು 600 ರೂ. ಖರ್ಚು ಮಾಡಬೇಕಿದೆ. ಟ್ರ್ಯಾ ಕ್ಟರ್‌
ಬಾಡಿಗೆ ಪಡೆದು ನೀರು ಹರಿಸುತ್ತಿದ್ದಾರೆ. ಒಂದು ಎಕರೆಗೆ ನೀರು ಹಾಯಿಸಲು 15 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತಿದೆ. 3-4 ಎಕರೆ
ಜಮೀನು ಹೊಂದಿದ ರೈತರು ನೀರಿಗಾಗಿಯೇ 40-50 ಸಾವಿರ ರೂ. ಖರ್ಚು ಮಾಡಬೇಕಿದೆ. ಬಹಳಷ್ಟು ಸಣ್ಣ ರೈತರು ಜಮೀನುಗಳನ್ನು ಲೀಜ್‌ ಪಡೆದಿದ್ದಾರೆ. ಈಗ ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಸಾಧ್ಯವಾಗದೆ ಸಾಲದ ಸುಳಿಗೆ
ಸಿಲುಕುವಂತಾಗಿದೆ.

Advertisement

ಪ್ರತಿ ವರ್ಷ ಮೂರು ನಾಲ್ಕು ಕಂತುಗಳಲ್ಲಿ ನೀರು ಲಭ್ಯವಾಗುತ್ತಿತ್ತು. ಆದರೆ, ಈ ಬಾರಿ ಕೇವಲ ಒಂದು ಕಂತು ಮಾತ್ರ ನೀರು ಹರಿಸಲಾಗಿದೆ. ಮೆಣಸಿನಕಾಯಿ ಹೂ ಬಿಡುತ್ತಿದ್ದು, ಇಂಥ ವೇಳೆ ನೀರು ಹರಿಸದಿದ್ದರೆ ಬೆಳೆ ಕೈಕೊಡಲಿದೆ. ಇದರಿಂದ ಟ್ಯಾಂಕರ್‌ ಮೂಲಕ ನೀರು ಹರಿಸುತ್ತಿದ್ದೇವೆ. ಅಕ್ಕಪಕ್ಕದ ಜಮೀನುಗಳಲ್ಲಿ ಬೋರ್‌ಗಳಿದ್ದರೂ ಮಳೆ ಇಲ್ಲದೇ ನೀರು ಇಂಗಿದೆ. ಇನ್ನೂ 2-3 ಬಾರಿಯಾದರೂ ನೀರು ಹರಿಸಬೇಕಿದ್ದು, ಸಾವಿರಾರು ರೂ. ಖರ್ಚು ಮಾಡದೆ ವಿಧಿ ಇಲ್ಲ.
ಶರಣಪ್ಪ ಸೋಮಣ್ಣವರ್‌, ರೈತ, ಮರ್ಚೆಟ್ಹಾಳ್‌

Advertisement

Udayavani is now on Telegram. Click here to join our channel and stay updated with the latest news.

Next