ರಾಯಚೂರು: ಕೋವಿಡ್-19 ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಪದೇಪದೆ ಮಾಡುತ್ತಿರುವ ಲಾಕ್‌ಡೌನ್‌ಗೆ ಸಾರ್ವಜನಿಕರು ಹೊಂದಿಕೊಂಡಿದ್ದು, ರವಿವಾರ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ಬೆಂಬಲ ಸೂಚಿಸಿದರು.
ಇದರಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಸ್ಥಬ್ಧ ವಾತಾವರಣ ಏರ್ಪಟ್ಟಿದ್ದು, ರಸ್ತೆಗಳೆಲ್ಲ ಜನರಿಲ್ಲದೇ ಬಿಕೊ ಎನ್ನುತ್ತಿದ್ದವು. ಹಳ್ಳಿಗಳು ಮಾತ್ರ ಎಂದಿನಂತೆ ತಮ್ಮ ದೈನಂದಿನ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಕಂಡು ಬಂತು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತ ರವಿವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಗೊಳಿಸಿತ್ತು. ಬೆಳಗ್ಗೆಯಿಂದಲೇ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಸಂಚಾರ ಸ್ಥಗಿತಗೊಳಿಸಿದರು. ಗೊತ್ತಿಧ್ದೋ ಗೊತ್ತಿಲ್ಲದೆಯೋ ಹೊರಗೆ ಬಂದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸುವ ಮೂಲಕ ಮನೆಗೆ ಕಳುಹಿಸಿದರು.
ವ್ಯಾಪಾರ ವಹಿವಾಟು ಕೂಡ ಸಂಪೂರ್ಣ ಸ್ಥಗಿತಗೊಂಡಿತ್ತು. ವೈದ್ಯಕೀಯ ಸೇವೆ, ಹಾಲು, ತರಕಾರಿಯಂಥ ಅಗತ್ಯ ಸೇವೆಗಳು ಹೊರತಾಗಿಸಿ ಮತ್ಯಾವ ಅಂಗಡಿ ಮುಂಗಟ್ಟುಗಳನ್ನು ತೆರದಿರಲಿಲ್ಲ. ಇದರಿಂದ ನಗರದ ಬಹುತೇಕ ಬಜಾರ್‌ಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮಾರುಕಟ್ಟೆ ಪ್ರದೇಶದಲ್ಲಿ ಕಿರಾಣಿ ಬಜಾರ್, ಬಟ್ಟೆ ಬಜಾರ್, ಸರಾಫ್ ಬಜಾರ್ ಸೇರಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ.
ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆಯುತ್ತಿದ್ದ ಪೊಲೀಸರು ವಿಚಾರಣೆ ಮಾಡಿ ಕಳುಹಿಸುತ್ತಿದ್ದರು. ಸೂಕ್ತ ಕಾರಣ ನೀಡದ ವಾಹನಗಳನ್ನು ಹಿಂದಕ್ಕೆ ಕಳುಹಿಸಲಾಯಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ ಯಾವುದೇ ಬಸ್ ಗಳ ಸಂಚಾರ ಇರಲಿಲ್ಲ. ಆದರೆ, ಈ ಬಗ್ಗೆ ಮಾಹಿತಿ ಇಲ್ಲದೇ ವಿವಿಧೆಡೆಯಿಂದ ಆಗಮಿಸಿದ ಪ್ರಯಾಣಿಕರು ಸಾರಿಗೆ ಸೌಲಭ್ಯ ಸಿಗದೆ ಪರದಾಡಿದ ಪ್ರಸಂಗ ನಡೆಯಿತು.
ಖಾಸಗಿ ವಾಹನಗಳ ಓಡಾಟ ಕೂಡ ನಿಷೇಧಿ ಸಿದ್ದರಿಂದ ಸಮಸ್ಯೆ ಎದುರಿಸುವಂತಾಯಿತು. ಈ ಕುರಿತು ಪೊಲೀಸ್ ಇಲಾಖೆ ಆಟೋಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಿತ್ತು. ಮಾನ್ವಿಯಲ್ಲಿ ಲಾಕ್‌ಡೌನ್ ನಡುವೆಯೂ ಅನಗತ್ಯವಾಗಿ ಓಡಾಡಿದ ಕಾರಣಕ್ಕೆ ಪೊಲೀಸರು 50 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.