Advertisement

ಕೊಳಕು ನಗರವಾಗಿದೆ ರಾಯಚೂರು

11:52 AM Jan 12, 2019 | Team Udayavani |

ರಾಯಚೂರು: ಎರಡು ವರ್ಷದ ಕೆಳಗೆ ಕೇಂದ್ರ ಸರ್ಕಾರದ ಮೆಚ್ಚುಗೆ ಪಡೆದಿದ್ದ ರಾಯಚೂರು ನಗರ ಈಗ ಸೂಕ್ತ ನಿರ್ವಹಣೆ ಇಲ್ಲದೆ ಅತ್ಯಂತ ಕೊಳಕಾಗಿ ನಿರ್ಮಾಣಗೊಂಡಿದೆ. ಅಧಿಕಾರಿಗಳು ಕತೆ ಹೇಳುವುದು ಬಿಟ್ಟು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಖಡಕ್‌ ಎಚ್ಚರಿಕೆ ನೀಡಿದರು.

Advertisement

ನಗರದ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ವಿಶೇಷ ಸಭೆ ನಡೆಸಿದ ಅವರು, ನಗರಸಭೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಇಷ್ಟು ದಿನ ಹೇಗೆ ಕೆಲಸ ಮಾಡಿದ್ದೀರಿ ಎಂಬುದು ಮುಖ್ಯವಲ್ಲ. ಇನ್ನು ಮುಂದೆ ಹಾಗಾಗಬಾರದು. ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸುವಂತೆ ಪೌರಾಯುಕ್ತರಿಗೆ ಸೂಚಿಸಿದ ಅವರು, ನನ್ನನ್ನು ಒಳಗೊಂಡಂತೆ ಎಲ್ಲ ಅಧಿಕಾರಿಗಳು, ಸಂಬಂಧಿಸಿದ ಸಿಬ್ಬಂದಿಯನ್ನು ಗ್ರೂಪ್‌ಗೆ ಸೇರಿಸಿ. ಎಲ್ಲ ಕೆಲಸದ ವಿವರ ನೀಡಬೇಕು. ನೀವು ಕೆಲಸ ಮಾಡುತ್ತಿರುವ ಸ್ಥಳದ ಜಿಪಿಎಸ್‌ ಲೋಕೇಶನ್‌ ಕಳುಹಿಸಿ. ಮನಬಂದಂತೆ ಕೆಲಸ ಮಾಡುವುದಲ್ಲ. ಹಾಜರಾತಿಗೆ ಬಯೋಮೆಟ್ರಿಕ್‌ ಪದ್ಧತಿ ಜಾರಿಗೊಳಿಸಿ ಎಂದು ಸೂಚಿಸಿದರು.

ನಗರದಲ್ಲಿ ನೀರಿನ ಕರ ಸರಿಯಾಗಿ ವಸೂಲಿ ಆಗುತ್ತಿಲ್ಲ. ಕರ ಪಾವತಿಸುವುದು ಎಲ್ಲರ ಕರ್ತವ್ಯ. ಅದಕ್ಕೆ ಯಾರೇ ಅಡ್ಡಿಪಡಿಸಿದರೂ ನನ್ನ ಗಮನಕ್ಕೆ ತನ್ನಿ. ಒಂದು ವೇಳೆ ಆಯಾ ವಾರ್ಡ್‌ಗಳ ಜನಪ್ರತಿನಿಧಿಗಳು ಅಡ್ಡಿಪಡಿಸಿದರೂ ಅವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.

ನೆಪ ಕೇಳಲು ಬಂದಿಲ್ಲ: ನಾನು ನಡೆಸುವ ಬಹುತೇಕ ಜನಸ್ಪಂದನ ಸಭೆಗಳಲ್ಲಿ ನಗರಸಭೆಗೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿ ಬಂದಿವೆ. ಎಲ್ಲವನ್ನು ನಿಮಗೆ ರವಾನಿಸಿದ್ದೇವೆ. ಆದರೆ, ಪದೇ ಪದೆ ಅದೇ ದೂರುಗಳು ಯಾಕೆ ಪುನಾರಾವರ್ತನೆ ಆಗುತ್ತಿವೆ ಗೊತ್ತಾಗುತ್ತಿಲ್ಲ. ಪ್ರತಿ ಬಾರಿ ನೀವು ಹೇಳುವ ನೆಪ ಕೇಳಲು ನಾನು ಬಂದಿಲ್ಲ. ನಿಮ್ಮ ವಿಭಾಗದ ಸಿಬ್ಬಂದಿ ಕೆಲಸ ಮಾಡದಿದ್ದರೆ ನೀವೇ ಜವಾಬ್ದಾರರು ಎಂದು ಎಚ್ಚರಿಸಿದರು.

Advertisement

ಪೌರಾಯುಕ್ತರಿಗೂ ಎಚ್ಚರಿಕೆ: ನಗರಸಭೆ ಆಡಳಿತ ಸರಿಯಾಗಿ ನಿರ್ವಹಣೆ ಆಗದಿರುವುದಕ್ಕೆ ಸೂಕ್ತ ಹಿಡಿತ ಇಲ್ಲದಿರುವುದೇ ಕಾರಣ. ನೀವು ನಿಮ್ಮ ನಾಯಕತ್ವ ಗುಣದಿಂದ ಕೆಲಸ ಮಾಡಿಸಬೇಕು ಎಂದು ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ನಾನು ಪ್ರತಿ 15 ದಿನಕ್ಕೊಮ್ಮೆ ಸಭೆ ಮಾಡುತ್ತೇನೆ. ಪ್ರಗತಿ ಕಾಣದಿದ್ದಲ್ಲಿ ಆ ವಿಭಾಗದ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇನೆ. ನಿಮ್ಮಿಂದ ಕೆಲಸ ಆಗದಿದ್ದಲ್ಲಿ ನಿಮ್ಮ ಸ್ಥಾನ ಬೇರೆಯವರಿಗೆ ನೀಡಲಾಗುವುದು. ಇಷ್ಟು ದಿನ ಓತ್ಲಾ ಹೊಡೆದಿದ್ದು ಸಾಕು. ಇನ್ನಾದರೂ ಚುರುಕಿನಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಅಹವಾಲು ಸ್ವೀಕಾರ: ಇದೇ ವೇಳೆ ಸಾರ್ವಜನಿಕರಿಂದ ದೂರುಗಳು ಆಲಿಸಿದರು. ಅಲ್ಲಮಪ್ರಭು ಕಾಲೋನಿ ನಿವಾಸಿಗಳು ನಮಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ದೂರಿದರು. ನೀರು ವೃಥಾ ಹರಿದು ಹೋದರೂ ಕೇಳುವವರಿಲ್ಲ ಎಂದರು. ಇದಕ್ಕೆ ಗರಂ ಆದ ಡಿಸಿ ನಗರಸಭೆ ಸಿಬ್ಬಂದಿ ನಳ ತಿರುವುತ್ತ ಕೂಡಬೇಕೆ. ಜನರಿಗೆ ಅಷ್ಟು ಸಾಮಾನ್ಯ ಜ್ಞಾನ ಬೇಡವೇ ಎಂದರು. ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ದುರಸ್ತಿ ಮಾಡಿಸುವಂತೆ ಸೂಚಿಸಿದರು. ಹೋರಾಟಗಾರ ಮಹಾವೀರ್‌, ಮಚ್ಚಿ ಬಜಾರ್‌ನಲ್ಲಿ ರಸ್ತೆ ವಿಸ್ತರಣೆ ಸಮರ್ಪಕವಾಗಿ ಆಗುತ್ತಿಲ್ಲ. ಮಾರುಕಟ್ಟೆಯಲ್ಲಿ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ದೂರಿದರು. ಕರವೇ ಮುಖಂಡ ಅಶೋಕ ಕುಮಾರ್‌ ಜೈನ್‌, ನಗರಸಭೆ ಮುಂಭಾಗ ಸೇರಿ ನಗರದ ವಿವಿಧೆಡೆ ಫುಟ್ಪಾತ್‌ಗಳು ಸಂಪೂರ್ಣ ಒತ್ತುವರಿಯಾಗಿವೆ. ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಐತಿಹಾಸಿಕ ಕಲ್ಲಾನೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಡಿಸಿ ಸೂಚಿಸಿದರು.

ಉಳಿದಂತೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ, ಸ್ಪಂದನೆ ಬಗ್ಗೆ ಸಾಕಷ್ಟು ದೂರುಗಳು ಸಲ್ಲಿಕೆಯಾದವು. ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂಬ ದೂರು ಹೆಚ್ಚಾಗಿದ್ದವು. ಕೊನೆಗೆ ಎಚ್ಚರಿಕೆ ನೀಡಿದ ಡಿಸಿ, ನಿಮ್ಮ ಕಚೇರಿ ಸಭಾಂಗಣವೇ ಸ್ವಚ್ಛವಾಗಿಲ್ಲ. ಇಂಥ ನಿರ್ಲಕ್ಷ್ಯ ಸಹಿಸಲು ಅಸಾಧ್ಯ. ತಿಂಗಳೊಳಗೆ ಪ್ರಗತಿ ಕಾಣಬೇಕು ಎಂದು ಎಚ್ಚರಿಸಿದರು. ಯೋಜನಾ ನಿರ್ದೇಶಕ ಈರಣ್ಣ ಬಿರಾದಾರ, ನಗರಸಭೆ ಪೌರಾಯುಕ್ತ ರಮೇಶ ನಾಯಕ ಸೇರಿ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಎಲ್ಲರಿಗೂ ತೊಟ್ಟಿ ನಿರ್ಮಾಣ

ಹರಿಜನವಾಡದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯಗಳ ಸಂಪರ್ಕ ಕಲ್ಪಿಸುವುದೇ ಸಮಸ್ಯೆಯಾಗಿದೆ ಎಂದು ವಾರ್ಡ್‌ ನಿವಾಸಿಗಳು ದೂರಿದರು. ಈ ಸಮಸ್ಯೆಯಿಂದ ಸಾಕಷ್ಟು ಜನ ಶೌಚಗೃಹ ನಿರ್ಮಿಸಿಕೊಂಡಿಲ್ಲ. ಮುಖ್ಯವಾಗಿ ಮಹಿಳೆಯರೇ ಬಹಿರ್ದೆಸೆ ಹೋಗುವಂತಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾ ನಿರ್ದೇಶಕ ಈರಣ್ಣ ಬಿರಾದಾರ, ನಿಮ್ಮ ವಾರ್ಡ್‌ನಲ್ಲಿ ಶೇ.60ರಷ್ಟು ಶೌಚಾಲಯ ನಿರ್ಮಿಸಿದರೂ ಬಳಸುತ್ತಿಲ್ಲ. ಅವುಗಳ ಬಳಕೆಗೆ ಒತ್ತು ನೀಡಬೇಕು. ಉಳಿದ ಎಲ್ಲ ಕುಟುಂಬಗಳಿಗೆ ಶೌಚಗೃಹ ತೊಟ್ಟಿಗಳನ್ನು ನಗರಸಭೆಯಿಂದ ನಿರ್ಮಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next