ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆ ರದ್ದುಗೊಳಿಸಲು ಆಗ್ರಹಿಸಿ ನವದೆಹಲಿಯಲ್ಲಿ ಹಮ್ಮಿಕೊಂಡ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ನಗರದಲ್ಲೂ ಸಂಯುಕ್ತ ಹೋರಾಟ- ಕರ್ನಾಟಕ ರಾಯಚೂರು ಘಟಕದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಟ್ರ್ಯಾಕ್ಟರ್‌ಗಳ ಸಮೇತ ರಸ್ತೆಗಿಳಿದ ಪ್ರತಿಭಟನಾಕಾರರು ಕರ್ನಾಟಕ ಸಂಘದಿಂದ ಡಾ| ಅಂಬೇಡ್ಕರ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಸರ್ಕಲ್‌ನಲ್ಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಮೂರು ಕೃಷಿ ಕಾಯ್ದೆ ಕೈಬಿಡುವಂತೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ನ.26ರಿಂದ ಹಗಲಿರುಳು ಹೋರಾಡುತ್ತಿದ್ದಾರೆ. 60ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಆದರೆ ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ.
ಹಲವಾರು ಮಾತುಕತೆಗಳು ನಡೆದರೂ ಕೃಷಿ ಕಾಯ್ದೆ ಹಿಂಪಡೆಯುವಲ್ಲಿ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜ.26ರಂದು ದೆಹಲಿಯಲ್ಲಿ ಸಹಸ್ರಾರು
ಟ್ರ್ಯಾಕ್ಟರ್ ಪರೇಡ್ ಆಯೋಜಿಸುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿದೆ. ಅದನ್ನು ಬೆಂಬಲಿಸಿ ದೇಶವ್ಯಾಪಿ ಎಲ್ಲೆಡೆ ಹೋರಾಟ ನಡೆಸಿದ್ದು, ನಗರದಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾನಿರತರು ತಿಳಿಸಿದರು.
ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ 2020ರಲ್ಲಿ ಅಂಗಿಕರಿಸಿದ ಮೂರು ಕೃಷಿ ಕಾಯ್ದೆಗಳು, ಉದ್ದೇಶಿತ ವಿದ್ಯುತ್ ತಿದ್ದುಪಡಿ ಮಸೂದೆ ರದ್ದಾಗಬೇಕು. 29 ಕಾರ್ಮಿಕ ಕಾನೂನು ರದ್ದು ಮಾಡಿ ಅಂಗೀಕರಿಸಿರುವ ನಾಲ್ಕು ಕೋಡ್‌ಗಳನ್ನು ಕೂಡಲೇ ಕೈಬಿಡಬೇಕು, ರೈತರ ಎಲ್ಲ ಬೆಳೆಗಳಿಗೂ ವೈಜ್ಞಾನಿಕ, ಲಾಭದಾಯಕ ಬೆಲೆ ನಿಗದಿಗೊಳಿಸಬೇಕು ಮತ್ತು ಇದನ್ನು ಶಾಸನಬದ್ಧಗೊಳಿಸಬೇಕು. ಎಪಿಎಂಸಿ ಉಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಈ ವೇಳೆ ಸಂಘಟನೆ ಸಂಚಾಲಕರಾದ ಕೆ.ಜಿ. ವೀರೇಶ್, ಕಲ್ಯಾಣ ಕರ್ನಾಟಕ ರೈತ ಸಂಘದ ಜಿಂದಪ್ಪ ವಡೂರು, ಕೃಷಿ ಕೂಲಿಕಾರ ಸಂಘದ ಕರಿಯಪ್ಪ ಹಚ್ಚೊಳ್ಳಿ, ಆರ್‌ಕೆಎಸ್‌ನ ರಾಮಣ್ಣ, ರಾಜ್ಯ ರೈತ ಸಂಘದ ಲಕ್ಷ್ಮಣಗೌಡ ಕಡಗಂದೊಡ್ಡಿ, ಕೆಪಿಆರ್‌ಎಸ್‌ನ ಈ. ರಂಗನಗೌಡ, ಸಿಐಟಿಯುನ ಡಿ.ಎಸ್. ಶರಣಬಸವ, ಎಂ. ಶರಣಗೌಡ, ಕೂಲಿ ಸಂಗ್ರಾಮ ಸಮಿತಿಯ ಬಸವರಾಜ ಗಾರಲದಿನ್ನಿ, ಶ್ರೀನಿವಾಸ ಕಲವಲದೊಡ್ಡಿ, ಖಾಜಾ ಅಸ್ಲಂಪಾಷ ಸೇರಿದಂತೆ ಇತರರಿದ್ದರು.